ಸಮಾಜದ ಕಟ್ಟಕಡೆ ವ್ಯಕ್ತಿಗೂ ಆರೋಗ್ಯ ಸೌಲಭ್ಯ ತಲುಪಬೇಕು ಎಂದು ದಾವಣಗೆರೆ ತಾಲ್ಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಹೆಚ್.ಉಮಾಪತಿ ತಿಳಿಸಿದರು.
ಭಾನುವಾರ ಆರೋಗ್ಯ ಇಲಾಖೆ ಮತ್ತು ಕೆ.ಹೆಚ್.ಪಿ.ಟಿ. ಸಹಯೋಗದಲ್ಲಿ ಗುಡಾಳ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮ್ಯಾಸರಹಳ್ಳಿಯಲ್ಲಿ ನಡೆದ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರವು ನರೇಗಾ ಕೂಲಿ ಕಾರ್ಮಿಕರಿಗೆ ಮೇ.2022 ರಿಂದ ಆರೋಗ್ಯ ತಪಾಸಣೆ ಯೋಜನೆಯನ್ನು ಕೈಗೊಂಡಿದ್ದು, ಎಲ್ಲಾ ಕೂಲಿ ಕಾರ್ಮಿಕರು ನಿರ್ಲಕ್ಷಿಸದೆ ಆರೋಗ್ಯ ತಪಾಸಣೆ ಮಾಡಿಸಬೇಕು. ಸಾಂಕ್ರಾಮಿಕ ಮತ್ತು ಅಸಾಂಕ್ರಾಮಿಕ ರೋಗಗಳು, ರಕ್ತದ ಒತ್ತಡ, ಮಧುಮೇಹ ಪರೀಕ್ಷೆ, ಟಿ.ಬಿ.ಸ್ಕ್ರೀನಿಂಗ್, ಅಪೌಷ್ಟಿಕತೆ, ರಕ್ತಹೀನತೆ, ಮಾನಸಿಕ ಆರೋಗ್ಯ, ಸೊಳ್ಳೆಗಳಿಂದ ಹರಡುವಂತಹ ಖಾಯಿಲೆಗಳ ಕುರಿತು ತಪಾಸಣೆ, ಚಿಕಿತ್ಸೆ ಮತ್ತು ಸಲಹೆಗಳನ್ನು ನೀಡಲಾಗುತ್ತದೆ. ಇದರ ಸದುಪಯೋಗವನ್ನು ಗ್ರಾಮ ಪಂಚಾಯತ್ ಮಟ್ಟದಲ್ಲಿ ನೊಂದಾಯಿತ ಕೂಲಿ ಕಾರ್ಮಿಕರು ತಪಾಸಣೆಗೆ ಒಳಗಾಗುವುದರ ಮೂಲಕ ಪ್ರಸ್ತುತ ಎದುರಿಸುತ್ತಿರುವ ಆರೋಗ್ಯ ಸಮಸ್ಯೆಗಳನ್ನು ಪರೀಕ್ಷಿಸಿ ಸೂಕ್ತ ಚಿಕಿತ್ಸೆ ಸಲಹೆ ಪಡೆಯಬೇಕೆಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮೇಲ್ವಿಚಾರಕರಾದ ಎಂ.ಬಿ.ಹೊರಕೇರಿ ಮಾತನಾಡಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗಖಾತ್ರಿ ಯೋಜನೆಯಡಿ ಕೂಲಿ ಕಾರ್ಮೀಕರ ಆರೋಗ್ಯ ದತ್ತಾಂಶ ಆಧರಿಸಿ ಹೊಸ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವುದು ಉದ್ದೇಶವಾಗಿದ್ದು, ಎಲ್ಲಾ ಕೂಲಿ ಕಾರ್ಮಿಕರು ಸದೃಢವಾದ ಆರೋಗ್ಯವನ್ನು ಪಡೆಯಬೇಕಾದರೆ 30 ವರ್ಷ ಮೇಲ್ಪಟ್ಟ ಎಲ್ಲಾ ನಾಗರೀಕರಿಗೂ ಕಾಲಕಾಲಕ್ಕೆ ಆರೋಗ್ಯ ತಪಾಸಣೆಗೆ ಒಳಗಾಗಬೇಕು, ನೀವು ಸೇವಿಸುವಂತಹ ಆಹಾರ, ಕುಡಿಯುವಂತಹ ನೀರು ನಿಮ್ಮ ಜೀವನ ಶೈಲಿಯ ನಡಾವಳಿಕೆ ಬದಾವಣೆ ಆದಲ್ಲಿ ಉತ್ತಮ ಆರೋಗ್ಯವನ್ನು ಸಂಪಾದಿಸಬಹುದು ಎಂದು ತಿಳಿಸಿದರು.
ಶಿಬಿರಲ್ಲಿ ಜಿಲ್ಲಾ ಆರೋಗ್ಯ ಮೇಲ್ವಿಚಾರಕರಾದ ಎಂ.ವಿ. ಹೊರಕೇರಿ, ಗುಡಾಳ್ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಯು ರಾಘವೇಂದ್ರ ನಾಯ್ಕ್, ವೈದ್ಯಾಧಿಕಾರಿ ಡಾ. ಶೃತಿ ಎಸ್. ರೇವಡಿ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಜಯಮ್ಮ ತಿಪ್ಪೇಸ್ವಾಮಿ, ವೆಂಕಟಾಚಲ ಕುಮಾರ.ಟಿ.ಎಸ್, ಮಹಂತೇಶ್, ಶಾಲಾ ಶಿಕ್ಷಕರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.