ಮೀಸೆಲ್ ಮತ್ತು ರೂಬೆಲ್ಲಾ ದಿಂದ ಮುಕ್ತವಾಗಿಸಲು ಮುಂಬರುವ ಆಗಸ್ಟ್, ಸೆಪ್ಟೆಂಬರ್ ಹಾಗೂ ಅಕ್ಟೋಬರ್ನಲ್ಲಿ ಮಿಷನ್ ಇಂದ್ರಧನುಷ್ ಲಸಿಕೆ ಹಾಕಲಾಗುತ್ತಿದ್ದು ಸಾರ್ವಜನಿಕರು ಅರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಬೇಕೆಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ.ಅವರು ಕರೆ ನೀಡಿದರು.
ಅವರು ಶುಕ್ರವಾರ (ಜು.28)ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಿಷನ್ ಇಂದ್ರಧನುಷ್-5.0 ಅನುಷ್ಟಾನ ಜಿಲ್ಲಾ ಮಟ್ಟದ ಟಾಸ್ಕ್ ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಲಸಿಕೆಗಳು ಬಹಳ ಪ್ರಮುಖವಾಗಿದ್ದು ಲಸಿಕೆಗಳು ಮಗು ಹುಟ್ಟಿನಿಂದ 9 ತಿಂಗಳೊಳಗಾಗಿ ಎಲ್ಲಾ ಅಗತ್ಯವಿರುವ ಚುಚ್ಚುಮದ್ದುಗಳನ್ನು ಹಾಕಬೇಕು. ಮಿಷನ್ ಇಂದ್ರ ಧನುಷ್ ಲಸಿಕೆಯು ವಿವಿಧ 12 ರೋಗ ನಿರೋಧಕ ಶಕ್ತಿಗೆ ಚುಚ್ಚುಮದ್ದು ಇದಾಗಿರುತ್ತದೆ. ಯಾವುದೇ ಮಗು ಹುಟ್ಟಿನಿಂದ 1 ವರ್ಷದೊಳಗಾಗಿ ಸಿಗಬೇಕಾದ ಎಲ್ಲಾ ಲಸಿಕೆಗಳು ಸಿಗುವಂತೆ ನೋಡಿಕೊಳ್ಳಬೇಕು. ಏಕೆಂದರೆ ಈ ಅವಧಿಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಚುಚ್ಚುಮದ್ದುಗಳು ಮಗುವಿನ ಬೆಳವಣಿಗೆಯಲ್ಲಿ ಬಹಳ ಮಹತ್ವವುಳ್ಳದ್ದಾಗಿರುತ್ತದೆ. ಈ ಅವಧಿಯಲ್ಲಿ ಲಸಿಕೆ ಹಾಕಿಸಲು ಪ್ರಗತಿ ಕುಂಟಿತವಾಗುವ ಅಧಿಕಾರಿಗಳಿಗೆ ನೋಟಿಸ್ ನೀಡಲು ಸಹ ಸೂಚನೆ ನೀಡಿದರು.
ದಡಾರ-ರೂಬೆಲ್ಲಾ ನಿರ್ಮೂಲನೆಗಾಗಿ ಮಿಷನ್ ಇಂದ್ರಧನುಷ್ ಲಸಿಕೆಯನ್ನು ನೀಡಲಾಗುತ್ತಿದ್ದು ಮೊದಲ ಹಂತದಲ್ಲಿ ಬರುವ ಆಗಸ್ಟ್ 7 ರಿಂದ 12 ರ ವರೆಗೆ ನೀಡಲಾಗುತ್ತಿದೆ. ಮತ್ತು ಸೆಪ್ಟೆಂಬರ್ನಲ್ಲಿ 11 ರಿಂದ 16 ರ ವರೆಗೆ ಮತ್ತು ಅಕ್ಟೋಬರ್ 9 ರಿಂದ 14 ರ ವರೆಗೆ ಲಸಿಕೆಯನ್ನು ನೀಡಲಾಗುತ್ತಿದೆ. ಈ ಹಿಂದೆ ಲಸಿಕೆಯಿಂದ ಬಿಟ್ಟು ಹೋದಂತಹ ಮಕ್ಕಳು ಯಾರು ಸಹ ಹೊರಗುಳಿಯಬಾರದು. ಮಿಷನ್ ಇಂದ್ರಧನುಷ್ ಲಸಿಕೆ ಹಾಕುವ ಬಗ್ಗೆ ತಾಲ್ಲೂಕು ಮಟ್ಟದಲ್ಲಿಯೂ ಸಭೆಯನ್ನು ಮಾಡುವ ಮೂಲಕ ಇದು ಹಬ್ಬದೋಪಾದಿಯಲ್ಲಿ ಲಸಿಕಾಕರಣವಾಗುವಂತೆ ನೋಡಿಕೊಳ್ಳಬೇಕು. ದಡಾರ ಮತ್ತು ರೂಬೆಲ್ಲಾದಿಂದ ಯಾವುದೇ ಮಗು ಮರಣ ಹೊಂದಬಾರದು. ಈ ನಿಟ್ಟಿನಲ್ಲಿ ಎಲ್ಲಾ ಮಗುವಿಗೆ ಇಂದ್ರಧನುಷ್ ತಲುಪಬೇಕು, ಇದು ಯಾವುದೇ ಜಾತಿ, ಧರ್ಮಭೇದವಿಲ್ಲದ ಎಲ್ಲಾ ಮಕ್ಕಳಿಗೆ ಹಾಕಿಸಬೇಕು, ಎಲ್ಲಿ ಸಮಸ್ಯೆ ಇದೆ ಎಂದು ಅರಿತು ಸಂಬಂಧಿಸಿದ ಮುಖಂಡರು, ಗುರುಗಳ ನೆರವನ್ನು ಪಡೆದು ಮನವರಿಕೆ ಮಾಡಿಕೊಡುವ ಮೂಲಕ ಲಸಿಕೆ ಹಾಕಲು ಮುಂದಾಗಬೇಕೆಂದು ಅಧಿಕಾರಿಗಳಿಗೆ ತಿಳಿಸಿ ಈ ನಿಟ್ಟಿನಲ್ಲಿ ಆರೋಗ್ಯ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಅಧಿಕಾರಿಗಳ ಪಾತ್ರ ಬಹಳ ಪ್ರಮುಖವಾಗಿದ್ದು ಆಶಾ, ಅಂಗನವಾಡಿ ಕಾರ್ಯಕರ್ತೆಯರ ಸೇವೆಯನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಲು ತಿಳಿಸಿದರು.
ಜಿಲ್ಲೆಯಲ್ಲಿ 710 ಗರ್ಭಿಣಿ ತಾಯಂದಿರು, 2 ವರ್ಷದೊಳಗಿನ 3154, 2.5 ವರ್ಷದೊಳಗಿನ 170 ಮಕ್ಕಳಿಗೆ ಮಿಷನ್ ಇಂದ್ರಧನುಷ್ ಲಸಿಕೆಯನ್ನು ಹಾಕಲು ಗುರು ಹೊಂದಲಾಗಿದ್ದು ಇದಕ್ಕಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ತಂಡಗಳು ಹಾಗೂ ಮೊಬೈಲ್ ತಂಡಗಳನ್ನು ರಚಿಸಲಾಗಿದೆ ಎಂದು ಆರ್.ಸಿ.ಹೆಚ್.ಅಧಿಕಾರಿ ಡಾ; ಮೀನಾಕ್ಷಿ ಕೆ.ಎಸ್. ಸಭೆಯಲ್ಲಿ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಇಟ್ನಾಳ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ;ನಾಗರಾಜ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಆರೋಗ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.