ಸರ್ಕಾರ ಹಲವು ಇಲಾಖೆಗಳ ಮೂಲಕ ಸಾಕಷ್ಟು ಜನಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದ್ದು ಇವುಗಳು ಅರ್ಹರಿಗೆ ತಲುಪಿಸುವಲ್ಲಿ ಪ್ರಚಾರದ ಕೆಲಸವು ಅಷ್ಟೆ ಪ್ರಮುಖವಾದದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ ತಿಳಿಸಿದರು.
ಅವರು ಆಗಸ್ಟ್ 3 ರಂದು ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ವಿವಿಧ ಇಲಾಖೆಗಳಿಂದ ಅನುಷ್ಟಾನ ಮಾಡಲಾಗುತ್ತಿರುವ ಯೋಜನೆಗಳು ಮತ್ತು ಪ್ರಾಧಿಕಾರದಿಂದ ಮುಂದಿನ ಎರಡು ತಿಂಗಳಲ್ಲಿ ಕೈಗೊಳ್ಳಬೇಕಾದ ಕಾರ್ಯಕ್ರಮ ರೂಪುರೇಷೆಗಳ ಕುರಿತ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದರು.
ಸಮಾಜ ಕಲ್ಯಾಣ ಇಲಾಖೆ, ಕೃಷಿ, ತೋಟಗಾರಿಕೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಪಂಚಾಯತ್ ನರೇಗಾ, ಎನ್.ಆರ್.ಎಲ್.ಎಂ, ಕಾರ್ಮಿಕ ಇಲಾಖೆ, ಬಿಸಿಎಂ, ಸಾಮಾಜಿಕ ಭದ್ರತಾ ಯೋಜನೆಗಳು ಸೇರಿದಂತೆ ಅನೇಕ ಇಲಾಖೆಗಳಿಂದ ಸಾಕಷ್ಟು ಯೋಜನೆಗಳನ್ನು ಅನುಷ್ಟಾನ ಮಾಡಲಾಗುತ್ತಿದೆ. ಆದರೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಈ ಯೋಜನೆಗಳು ಸಿಗಬೇಕೆನ್ನುವುದು ಕಾನೂನು ಸೇವಾ ಪ್ರಾಧಿಕಾರದ ಗುರಿಯಾಗಿದೆ, ಈ ನಿಟ್ಟಿನಲ್ಲಿ ಪ್ರಾಧಿಕಾರ ಪರಿಶೀಲನೆ ನಡೆಸಲಿದೆ ಎಂದರು.
ಸರ್ಕಾರ ಸಮಾಜದ ಸುಧಾರಣೆಗಾಗಿ ಸಾಕಷ್ಟು ಕಾನೂನುಗಳನ್ನು ಜಾರಿಗೆ ತಂದಿದ್ದರೂ ಅವುಗಳ ಸಮರ್ಪಕ ಅನುಷ್ಟಾನವಾಗದೇ ಇಂದಿನ ಯುವ ಜನರು ಮಾದಕ ವಸ್ತುಗಳಿಗೆ ಬಲಿಯಾಗುತ್ತಿರುವುದು ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟಲು ಕಾಯಿದೆ ಬಗ್ಗೆ ಹೆಚ್ಚು ಹೆಚ್ಚು ಪ್ರಚಾರ ಮಾಡಬೇಕಾಗಿದೆ. ಶಾಲಾ, ಕಾಲೇಜುಗಳ ಹಂತದಲ್ಲಿಯೇ ಮಕ್ಕಳ ಮೇಲಿನ ದೌರ್ಜನ್ಯ ಮತ್ತು ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪದವಿ ಪೂರ್ವ ಶಿಕ್ಷಣ, ಕಾಲೇಜು ಶಿಕ್ಷಣ ಇಲಾಖೆಯಿಂದ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಮುಂದಿನ ಸತ್ಪ್ರಜೆಗಳನ್ನಾಗಿ ಮಾಡಲು ಮತ್ತು ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಲು ಕೈಜೋಡಿಸಬೇಕೆಂದರು.
ಯೋಜನೆಗಳ ಕೈಪಿಡಿ ರೂಪಿಸಿ; ಇಲಾಖೆಗಳಿಂದ ಅನುಷ್ಟಾನ ಮಾಡಲಾಗುತ್ತಿರುವ ಯೋಜನೆಗಳ ರೂಪುರೇಷೆಗಳ ಕುರಿತಂತೆ ಯೋಜನೆಗಳ ಹೆಸರು, ಅರ್ಹತೆ, ಸೌಲಭ್ಯಗಳು, ಪಡೆಯುವ ಮಾನದಂಡಗಳೇನು ಎನ್ನುವ ಬಗ್ಗೆ ಕೈಪಿಡಿಯನ್ನು ಸಿದ್ದಪಡಿಸಿಕೊಂಡು ಸಾರ್ವಜನಿಕರಿಗೆ ನೀಡುವ ಕೆಲಸವನ್ನು ಮಾಡಬೇಕೆಂದರು. ಸಮಾಜ ಕಲ್ಯಾಣ ಇಲಾಖೆಯಲ್ಲಿ ಹಾಸ್ಟೆಲ್ ಸೌಲಭ್ಯ, ವಿದ್ಯಾರ್ಥಿವೇತನ, ಎಸ್.ಎಸ್.ಎಲ್.ಸಿ.ಯಿಂದ ಉನ್ನತ ಶಿಕ್ಷಣದವರೆಗೆ ಪ್ರೋತ್ಸಾಹಧನ, ಅಂತರ್‍ಜಾತಿ ವಿವಾಹ, ಒಳಪಂಗಡಗಳಲ್ಲಿ ವಿವಾಹ, ವಿಧವಾ ವಿವಾಹ ಸೇರಿದಂತೆ ಮೂಲಭೂತ ಸೌಕರ್ಯಗಳ ಅಭಿವೃದ್ದಿ ಸೇರಿದಂತೆ ಅನೇಕ ಕಾರ್ಯಕ್ರಮಗಳಿವೆ. ಅದೇ ರೀತಿ ಕಾರ್ಮಿಕ ಇಲಾಖೆಯಲ್ಲಿಯು ಸಂಘಟಿತ, ಅಸಂಘಟಿತ ಕಾರ್ಮಿಕರಿಗೆ ಸಾಕಷ್ಟು ಯೋಜನಾ ಸೌಲಭ್ಯಗಳಿದ್ದು ಇವುಗಳ ಬಗ್ಗೆ ಮತ್ತು ಇತರೆ ಇಲಾಖೆಗಳಲ್ಲಿನ ಯೋಜನೆ, ಸೌಲಭ್ಯಗಳ ಬಗ್ಗೆ ವ್ಯಾಪಕ ಪ್ರಚಾರ ಕೈಗೊಳ್ಳುವುದು ಅಷ್ಟೆ ಮುಖ್ಯವಾದದು ಎಂದರು.
ಪ್ರಕೃತಿ ವಿಕೋಪ ತಡೆಗೆ ಮುನ್ನೆಚ್ಚರಿಕೆ; ಪ್ರಕೃತಿ ವಿಕೋಪ ಪರಿಸ್ಥಿತಿಗಳು ಸಂಭವಿಸಿದಾಗ ತಕ್ಷಣಾ ಸ್ಪಂದಿಸುವ ತಂಡ ಮತ್ತು ಪ್ರಕೃತಿ ವಿಕೋಪಗಳನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜನರೊಂದಿಗೆ ಮಾಹಿತಿ ಸಂವಹನ ಕ್ರಮಗಳನ್ನು ಅನುಸರಿಸಬೇಕು. ಮತ್ತು ಸಾಂಕ್ರಾಮಿಕ ರೋಗಗಳು ಹರಡದಂತೆ ಕ್ರಮಗಳು ಮತ್ತು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ತಿಳಿಸಿ ಪಾಲಿಕೆಯಿಂದ ಸ್ವಚ್ಚತೆಕಡೆಗೆ ಹೆಚ್ಚಿನ ಗಮನ ಹರಿಸಿ ಮಳೆಗಾಲವಾಗಿರುವುದರಿಂದ ಡೆಂಗ್ಯೂ, ಚಿಕನ್‍ಗುನ್ಯ ಹರಡದಂತೆ ಕ್ರಮ ವಹಿಸಲು ಸೂಚನೆ ನೀಡಲಾಯಿತು.
ಗ್ರಾಮೀಣ ಪ್ರದೇಶದಲ್ಲಿ ಕಾನೂನು ಸೇವಾ ಕಾರ್ಯಕ್ರಮ; ಸೆಪ್ಟೆಂಬರ್ 9 ರಂದು ದಾವಣಗೆರೆ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಬೃಹತ್ ಲೋಕ್ ಅದಾಲತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಹಿನ್ನಲೆಯಲ್ಲಿ ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಹೆಚ್ಚು ಕಾನೂನು ಸೇವಾ ಮತ್ತು ಅರಿವು ಕಾರ್ಯಕ್ರಮಗಳನ್ನು ಏರ್ಪಡಿಸಲು ಉದ್ದೇಶಿಸಲಾಗಿದೆ. ಮಾದಕ ವಸ್ತುಗಳಿಂದ ಯುವ ಜನರನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಶಾಲಾ, ಕಾಲೇಜುಗಳಲ್ಲಿ ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಎಂದರು.
ಸಭೆಯಲ್ಲಿ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಹಾವೀರ ಮ.ಕರಣ್ಣವರ ವಿವಿಧ ಇಲಾಖೆಗಳಲ್ಲಿ ರೂಪಿಸಲಾದ ಕ್ರಿಯಾ ಯೋಜನೆಗಳ ಮಾಹಿತಿ ಮತ್ತು ಅನುಷ್ಟಾನ ಮಾನದಂಡಗಳ ಬಗ್ಗೆ ಮಾಹಿತಿ ಪಡೆದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಮುಖ್ಯ ನ್ಯಾಯಿಕ ದಂಡಾಧಿಕಾರಿ ಶಿವಪ್ಪ ಸಲಗೇರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಇಟ್ನಾಳ್, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಸರ್ಕಾರಿ ಅಭಿಯೋಜಕ ಇಲಾಖೆ ಉಪನಿರ್ದೇಶಕಿ ಕಲ್ಪನಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕಿ ವಾಸಂತಿ ಉಪ್ಪಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ; ನಾಗರಾಜ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೊಟ್ರೇಶ್, ಜಿಲ್ಲಾ ಸರ್ಕಾರಿ ವಕೀಲರಾದ ನವೀನ್, ಚಿಗಟೇರಿ ಆಸ್ಪತ್ರೆ ಸರ್ಜನ್ ಡಾ;ಸುಭಾಷ್, ಸಮಿತಿ ಸದಸ್ಯರಾದ ರೂಪಾನಾಯ್ಕ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.