ದಾವಣಗೆರೆ; ಆ. 9 : ತಾಯಂದಿರು ಜನಿಸಿದ ಮಗುವಿಗೆ ಕಾಲಕಾಲಕ್ಕೆ ಹಾಕಲಾಗುವ ರೋಗನಿರೋಧಕ ಲಸಿಕೆಗಳನ್ನು ಹಾಕಿಸಲಾಗಿದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಬಿ. ಇಟ್ನಾಳ್ ತಿಳಿಸಿದರು.
ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಂಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಡಿ.ಇ.ಐ.ಸಿ ಸಭಾಗಣದಲ್ಲಿ ವಿಶ್ವ ಹೆಪಟೈಟಿಸ್ ದಿನದ ಅಂಗವಾಗಿ ಜರುಗಿದ ರಾಷ್ಟ್ರೀಯ ವೈರಲ್ ಹೆಪಟೈಟಿಸ್ ನಿಯಂತ್ರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹೆಪಟೈಟಿಸ್ ವೈರಸ್‍ಗಳು ಹೆಚ್ಚು ಅಪಾಯಕಾರಿಯಾಗಿದ್ದು, ಲಿವರ್‍ಗೆ ಸಂಬಂಧಿಸಿದಂತೆ ಸಿರೋಸಿಸ್ ಮತ್ತು ಲಿವರ್ ಕ್ಯಾನ್ಸರ್‍ಅನ್ನು ತಂದೊಡ್ಡುತ್ತವೆ. ಅದರಲ್ಲೂ ಮುಖ್ಯವಾಗಿ ನವಜಾತ ಶಿಶುವಿಗೆ ಹೆಪಟೈಟಿಸ್ ಬಿ ವೈರಾಣು ವಿರುದ್ಧ ಹೋರಾಡುವ ಲಸಿಕೆ ಹಾಕಲು ಕ್ರಮ ಕೈಗೊಳ್ಳಬೇಕು ಎಂದರು.
2010ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಜುಲೈ 28 ರಂದು ವಿಶ್ವ ಹೆಪಟೈಟಿಸ್ ದಿನ ಎಂದು ಆಚರಿಸಲು ಕರೆ ನೀಡಿತು. ಕಾರಣ ಹೆಪಟೈಟಿಸ್ ವೈರಾಣುವನ್ನು ಮತ್ತು ಅದಕ್ಕೆ ಲಸಿಕೆಯನ್ನು ಕಂಡು ಹಿಡಿದ ನೋಬೆಲ್ ಪ್ರಶಸ್ತಿ ವಿಜೇತ ಪ್ರೊಫೆಸರ್ ಬರೂಚ್ ಸಾಮ್ಯುಯಲ್ ಬ್ಲೂಮ್‍ಬರ್ಗ ಅವರ ಜನ್ಮ ದಿನವಾಗಿದೆ.
ದೀರ್ಘಕಾಲದ ಸೋಂಕುಗಳಿಗೆ ಶೇಕಡಾ 90 ಪ್ರತಿಶತ ಚಿಕಿತ್ಸೆಗಳನ್ನು ಪತ್ತೆ ಹಚ್ಚುವುದು ಹಾಗೂ ಸಿರೋಸಿಸ್ ಮತ್ತು ಕ್ಯಾನ್ಸರ್‍ನಿಂದ ಆಗುವ ಮರಣಗಳನ್ನು ಶೇಕಡಾ 65 ಪ್ರತಿಶತ ಕಡಿಮೆ ಮಾಡುವುದಾಗಿದ್ದು ಈ ನಿಟ್ಟಿನಲ್ಲಿ ಕೆಲಸ ಮಾಡುವುದರ ಮೂಲಕ ಆರೋಗ್ಯವಂತ ಸಮಾಜವನ್ನು ನಿರ್ಮಿಸಬೇಕು.
ಹೆಪಟೈಟಿಸ್ ವೈರಾಣು ಬಹಳ ದಿನಗಳ ನಂತರ ರೋಗದ ಲಕ್ಷಣಗಳನ್ನು ತೋರ್ಪಡಿಸುತ್ತದೆ. ವಿಶ್ವದಾದ್ಯಂತ 1 ವರ್ಷದಲ್ಲಿ ಹತ್ತು ಲಕ್ಷಕ್ಕಿಂತ ಹೆಚ್ಚು ಜನರು ಈ ವೈರಾಣುವಿಗೆ ತುತ್ತಾಗುತ್ತಾ ಇದ್ದಾರೆ. ಆದ್ದರಿಂದ ಇದನ್ನು ತಡೆಗಟ್ಟಲು ಹೆಚ್ಚಿನ ಕ್ರಮ ಕೈಗೊಳ್ಳಬೇಕು ಮತ್ತು ಜನರಿಗೆ ವೈರಾಣು ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕು. ಕ. ಅಧಿಕಾರಿ ಡಾ. ನಾಗರಾಜ್ ಮಾತನಾಡಿ ಹೆಪಟೈಟಿಸ್ ರೋಗವನ್ನು ಸಾಮಾನ್ಯವಾಗಿ ಜಾಂಡಿಸ್, ಕಾಮಲೆ ರೋಗ ಎಂದು ಕರೆಯುತ್ತಾರೆ. ಜನರಿಗೆ ಈ ಕಾಯಿಲೆ ಲಕ್ಷಣಗಳು, ಪರಿಣಾಮಗಳು, ಚಿಕಿತ್ಸೆ ಹಾಗೂ ತಡೆಗಟ್ಟುವ ಕ್ರಮಗಳ ಕುರಿತು ಜನರಿಗೆ ಜಾಗೃತಿ ಮೂಡಿಸುವುದು ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ.
ಹೆಪಟೈಟಿಸ್ ಬಿ.ಸಿ ಹೆಚ್ಚು ಅಪಾಯಕಾರಿ ವೈರಾಣುವಾಗಿದ್ದು, ಮೊದಲು ಇದಕ್ಕೆ ಚಿಕಿತ್ಸೆ ಪಡೆಯಲು ಬೇರೆಡೆ ಹೋಗಬೇಕಾಗಿತ್ತು ಆದರೆ ಈಗ ಇಲ್ಲಿಯೇ ಪೂರ್ಣ ಪ್ರಮಾಣದ ಚಿಕಿತ್ಸೆ ನೀಡಲಾಗುತ್ತಿದೆ ಆದ್ದರಿಂದ ಜನರು ಅಲಕ್ಷ ಮಾಡದೇ ಪ್ರಾಥಮಿಕ ಹಂತದಲ್ಲಿಯೇ ತಾಲ್ಲೂಕು ಅಥವಾ ಜಿಲ್ಲಾ ಆಸ್ಪತ್ರೆಯಲ್ಲಿ ಪರೀಕ್ಷಿಸಿಕೊಂಡು ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು.
ಜಿಲ್ಲಾ ಶಸ್ತ್ರ ಚಿಕಿತ್ಸಾಕ ಡಾ. ಸುಭಾಷ್‍ಚಂದ್ರ, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಮೀನಾಕ್ಷಿ, ಜಿಲ್ಲಾ ಮಲೇರಿಯಾಧಿಕಾರಿ ಡಾ.ನಟರಾಜ್. ತಾಲ್ಲೂಕು ಆರೋಗ್ಯಾಧಿಕಾರಿ ಡಾ.ದೇವರಾಜ್ ಇತರರು ಉಪಸ್ಥಿತರಿದ್ದರು.