ದೇವರಾಜ ಅರಸುರವರು ಭೂ ಸುಧಾರಣೆ ಕಾನೂನನ್ನು ಕರ್ನಾಟಕದಲ್ಲಿ ಜಾರಿಗೆ ತಂದು ಎಲ್ಲರಿಗೂ ಸಮಾನತೆ ದೊರೆಯುವಂತೆ ಮಾಡಿದರು ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ್ ತಿಳಿಸಿದರು.
ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಇವರ ಸಹಯೋಗದೊಂದಿಗೆ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಜರುಗಿದ ಸಾಮಾಜಿಕ ಪರಿವರ್ತನೆಯ ಹರಿಕಾರ ಹಿಂದುಳಿದ ವರ್ಗಗಳ ಧೀಮಂತ ನಾಯಕ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಡಿ ದೇವರಾಜ ಅರಸುರವರ 108ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆಗಸ್ಟ್ 20ರಂದು ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸು ಅವರ 108ನೇ ಜನ್ಮದಿನ. ದೇವರಾಜ ಅರಸು ಅವರನ್ನು ಸಾಮಾಜಿಕ ನ್ಯಾಯದ ಹರಿಕಾರ ಎಂದು ಕರೆಯಲಾಗುತ್ತದೆ. ದೇವರಾಜ ಅರಸು ಕರ್ನಾಟಕ ರಾಜ್ಯದ ಅಪರೂಪದ ರಾಜಕಾರಣಿ. ಅರಸು ಬಡವರ ಮತ್ತು ಸಾಮಾಜಿಕ ನ್ಯಾಯದ ಪರವಾಗಿದ್ದರು. ಭೂ ಸುಧಾರಣೆ ಕಾಯಿದೆ ಜಾರಿಗೆ ತಂದು ಉಳುವವನೇ ಭೂ ಒಡೆಯ ಎಂಬ ಕಾಯ್ದೆಯನ್ನು ತರುವ ಮೂಲಕ ಸಮಾಜದಲ್ಲಿ ಎಲ್ಲರಿಗೂ ಸಮಾನತೆಯನ್ನು ಮೆರೆದಿದ್ದಾರೆ ಎಂದರು.
ಮಾಯಕೊಂಡ ಶಾಸಕ ಕೆ. ಎಸ್ ಬಸವಂತಪ್ಪ ಮಾತನಾಡಿ ಬಡವರು ಸಹ ರಾಜಕೀಯ ಮತ್ತು ಇನ್ನಿತರ ಯಾವುದೇ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ ಎಂದರೆ ಇದಕ್ಕೆ ಹಿಂದುಳಿದ ವರ್ಗಗಳ ಧೀಮಂತ ನಾಯಕ, ಸಾಮಾಜಿಕ ಪರಿವರ್ತನೆಯ ಹರಿಕಾರ ದೇವರಾಜ್ ಅರಸು ಅವರ ಆಡಳಿತ ವೈಖರಿಯೇ ಕಾರಣವಾಗಿದೆ.
ಮಕ್ಕಳು ದೇಶದ ಮುಂದಿನ ಭವಿಷ್ಯದ ನಿರ್ಮಾಣಕಾರರು, ಆದ್ದರಿಂದ ವಿದ್ಯಾರ್ಥಿಗಳು ರಾಜ್ಯಕ್ಕೆ ಉತ್ತಮ ಆಡಳಿತ ನೀಡಿದ ದೇವರಾಜ್ ಅರಸು ಅವರ ಚಿಂತನೆ ಮತ್ತು ಆಲೋಚನೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇಂದು ಕಡುಬಡವರು ಸಹ ಭೂಮಿಯನ್ನು ಹೊಂದಿದ್ದಾರೆ ಎಂದರೆ ಇದಕ್ಕೆ ಕಾರಣ ದೇವರಾಜ್ ಅರಸು ಎಂದರು.
ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ ಮಾತನಾಡಿ ದೇವರಾಜ ಅರಸು ಅವರು ಕರ್ನಾಟಕ ಕಂಡ ಬಹು ವ್ಯಕ್ತಿತ್ವದ ಮತ್ತು ಅತ್ಯಂತ ವರ್ಣ ರಂಜಿತ ಮುಖ್ಯಮಂತ್ರಿಯಾಗಿದ್ದರು. ಅವರು
ಅಧಿಕಾರದಲ್ಲಿದ್ದಾಗ ಹಿಂದುಳಿದ ಸಮುದಾಯಗಳಿಗೆ ನ್ಯಾಯ ಕೊಡಿಸಲು ಪ್ರಯತ್ನ ಮಾಡಿದರು. ಮಲ ಹೊರುವ ಪದ್ದತಿ ನಿರ್ಮೂಲನೆ ಮಾಡಿ ಜೀತಪದ್ದತಿಗೆ ಮಂಗಳ ಹಾಡಿದರು
ಎಲ್ಲರಿಗೂ ಸಮಪಾಲು ಸಮಬಾಳು ಎಂಬ ದ್ಯೇಯವಾಕ್ಯದಡಿ ಸಮ ಸಮಾಜವನ್ನು ನಿರ್ಮಾಣ ಮಾಡಲು ಅತ್ಯಂತ ಪರಿಶ್ರಮದಿಂದ ಕಾರ್ಯನಿರ್ವಹಿಸಿ, ಯಶಸ್ವಿಯಾದಂತಹ ನಾಯಕರಾಗಿದ್ದರು.
ಸನ್ಮಾನ; ದಾವಣಗೆರೆ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪದವಿಯಲ್ಲಿ ಬಂಗಾರ ಪದಕ ಪಡೆದ ವಿದ್ಯಾರ್ಥಿಗಳಾದ ಹಾಲಮ್ಮ (ಎಂಕಾಂ), ಮಂಜಮ್ಮ(ಕನ್ನಡ), ವಿದ್ಯಾ ಶ್ರೀ(ಎಂ. ಟೆಕ್), ಪವನ್ ಎಲ್(ಕನ್ನಡ), ಕಲ್ಯಾಣ್ ಕುಮಾರ್ ಹೆಚ್ ಇವರಿಗೆ ಸನ್ಮಾನಿಸಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್, ಅಪರ ಜಿಲ್ಲಾಧಿಕಾರಿ ಪಿಎನ್ ಲೋಕೇಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಲ್ಲ ನಾಯ್ಕ್, ಮಹಾನಗರ ಪಾಲಿಕೆ ಆಯುಕ್ತರಾದ ರೇಣುಕಾ, ದಾವಣಗೆರೆ ತಾಲೂಕು ತಹಸಿಲ್ದಾರ್ ಡಾ. ಅಶ್ವಥ್, ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿ ಗಾಯಿತ್ರಿ, ಮಹಾನಗರ ಪಾಲಿಕೆಯ ಸದಸ್ಯ ಚಮನ್ ಉಪಸ್ಥಿತರಿದ್ದರು.