ಜಿಲ್ಲೆಯ ನಿರುದ್ಯೋಗ ಯುವಕ, ಯುವತಿಯರು ಹಾಗೂ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಉಜ್ವಲವಾಗಿಸಲು ಅಕ್ಟೋಬರ್ 16 ರಂದು ದಾವಣಗೆರೆ ನಗರದ ಹೈಸ್ಕೂಲ್ ಮೈದಾನದಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ ತಿಳಿಸಿದರು.
ಗುರುವಾರ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಕ್ಟೋಬರ್ 16 ರಂದು ಹಮ್ಮಿಕೊಳ್ಳಲಾಗಿರುವ ಬೃಹತ್ ಉದ್ಯೋಗ ಮೇಳದ ಕುರಿತು ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿನ ಗ್ರಾಮಾಂತರ ಪ್ರದೇಶದ ಯುವ ಜನಾಂಗಕ್ಕೆ ಉದ್ಯೋಗಾವಕಾಶ ಕಲ್ಪಿಸಿಕೊಡಲು ಮತ್ತು ಉದ್ಯೋಗಕ್ಕಾಗಿ ವೇದಿಕೆಯನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಪ್ರತಿ ಎರಡು ತಿಂಗಳಿಗೊಮ್ಮೆ ಉದ್ಯೋಗ ಮೇಳವನ್ನು ಆಯೋಜಿಸಲು ಜಿಲ್ಲಾ ಆಡಳಿತ ಗುರಿ ಹೊಂದಿದೆ. ಇಲ್ಲಿ ಕನಿಷ್ಠ ಎಸ್.ಎಸ್.ಎಲ್.ಸಿ ಯಿಂದ ಐಟಿಐ, ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿ, ವೃತ್ತಿಪರ ಕೋರ್ಸ್‍ಗಳಲ್ಲಿ ಉತ್ತೀರ್ಣರಾದವರು ಭಾಗವಹಿಸಬಹುದಾಗಿದೆ. ಉದ್ಯೋಗ ನೀಡಲು 150 ಕ್ಕಿಂತಲೂ ಹೆಚ್ಚಿನ ಕಂಪನಿಗಳಲ್ಲಿ ಇಲ್ಲಿಗೆ ಆಹ್ವಾನಿಸಲಾಗುತ್ತಿದೆ. ಅದರಲ್ಲಿ ಐಟಿ, ಆಟೋಮೊಬೈಲ್, ಖಾಸಗಿ ಬ್ಯಾಂಕಿಂಗ್, ಟೆಕ್ಸ್‍ಟೈಲ್, ಫೈನಾನ್ಸ್, ಆರೋಗ್ಯ ಮತ್ತು ಫಾರ್ಮಸಿ, ಜ್ಯೂಯಲರಿ, ವಿಮಾ ಕಂಪನಿ, ಫರ್ಟಿಲೈಸರ್ ಕ್ಷೇತ್ರದಲ್ಲಿನ ವಿವಿಧ ಉದ್ಯೋಗದಾತರು ಭಾಗವಹಿಸುವರು.
ಮೇಳವು ಅ.16 ರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2.30 ರ ವರೆಗೆ ನಡೆಯಲಿದ್ದು ಅಭ್ಯರ್ಥಿಗಳು ತಮ್ಮ ಸ್ವವಿವರ ಹಾಗೂ ಮೂಲ ದಾಖಲಾತಿಗಳೊಂದಿಗೆ ಭಾಗವಹಿಸಬೇಕು. ಕಂಪನಿಯವರು ಪರಿಶೀಲನೆ ಮತ್ತು ನೇರ ಸಂದರ್ಶನ ನಡೆಸಿ ಸ್ಥಳದಲ್ಲಿಯೇ ನೇಮಕಾತಿ ಆದೇಶ ನೀಡುವರು, ಜಿಲ್ಲೆಯ ಯುವ ಜನರು ಮೇಳದ ಉಪಯೋಗ ಮಾಡಿಕೊಳ್ಳಬೇಕೆಂದರು.
ನಿರುದ್ಯೋಗಿಗಳು, ವಿದ್ಯಾರ್ಥಿಗಳು ಕ್ಯೂ.ಆರ್ ಕೋಡ್ ಮೂಲಕ ಹೆಸರು ನೋಂದಾಯಿಸಿಕೊಳ್ಳುವ ಪ್ರಾತ್ಯಕ್ಷಿಕೆಯನ್ನು ಪ್ರಸ್ತುತ ಪಡಿಸಿದರು.
ಇಸ್ರೇಲ್‍ನಲ್ಲಿ ಇಬ್ಬರು ಸುರಕ್ಷಿತ; ದಾವಣಗೆರೆ ಜಿಲ್ಲೆಯ ದಾವಣಗೆರೆಯ ಹಿಲ್ಡಾ ಮೊಂತೇರೋ ಮತ್ತು ದೊಣೆಹಳ್ಳಿಯ ಪ್ರಿಯದರ್ಶಿನಿಯವರು ಇಸ್ರೇಲ್‍ನಲ್ಲಿ ಇದ್ದು ಸುರಕ್ಷಿತವಾಗಿದ್ದಾರೆ. ಈಗಾಗಲೇ ಅವರ ಸಂಪರ್ಕವನ್ನು ಮಾಡಲಾಗಿದ್ದು ಸರ್ಕಾರ ನೀಡುವ ಸೂಚನೆಗಳನ್ನು ಪಾಲಿಸಲು ತಿಳಿಸಲಾಗಿದೆ. ಸಹಾಯ ಅಗತ್ಯವಿದ್ದಲ್ಲಿ ಇಸ್ರೇಲ್ ರಾಯಭಾರಿ ಕಚೇರಿಯ ಮೂಲಕ ಸಹಾಯ ನೀಡಲಾಗುತ್ತದೆ ಎಂದು ಅವರೊಟ್ಟಿಗೆ ಮಾತನಾಡಿದ್ದು ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಅಕ್ಟೋಬರ್ 22 ರಿಂದ ಅಂತರಾಷ್ಟ್ರೀಯ ಟೆನ್ನೀಸ್ ಪಂದ್ಯಾವಳಿ; ಅಂತರಾಷ್ಟ್ರೀಯ ಟೆನ್ನೀಸ್ ಫೆಡರೇಷನ್ ವತಿಯಿಂದ ದಾವಣಗೆರೆಯಲ್ಲಿ ಇದೇ ಅಕ್ಟೋಬರ್ 22 ರಿಂದ 29 ರ ವರೆಗೆ ಅಂತರಾಷ್ಟ್ರೀಯ ಟೆನ್ನೀಸ್ ಪಂದ್ಯಾವಳಿಗಳನ್ನು ಆಯೋಜಿಸಲಾಗಿದೆ. ಈ ಪಂದ್ಯಾವಳಿಯಲ್ಲಿ ಅಮೆರಿಕಾ, ಸ್ವಿಜ್ಜರ್‍ಲ್ಯಾಂಡ್, ಸ್ವೀಡನ್ , ಆಸ್ಟ್ರೇಲಿಯಾ ಸೇರಿದಂತೆ ಇನ್ನೂ ಅನೇಕ ರಾಷ್ಟ್ರಗಳ 400 ಕ್ಕೂ ಹೆಚ್ಚು ಆಟಗಾರರು ಭಾಗವಹಿಸುತ್ತಿದ್ದಾರೆ. ದಾವಣಗೆರೆ ನಗರದ ಹೈಸ್ಕೂಲ್ ಮೈದಾನದಲ್ಲಿನ 4 ಸಿಂಥಟೆಕ್ ಅಂಕಣಗಳಲ್ಲಿ ಪಂದ್ಯಾವಳಿಗಳು ನಡೆಯಲಿವೆ ಎಂದರು.
ಬರ ಹಿನ್ನಲೆ ಖಾತರಿಯಡಿ 150 ದಿನ ಕೂಲಿ ಹೆಚ್ಚಳಕ್ಕೆ ಪ್ರಸ್ತಾವನೆ; ಬರಗಾಲದ ಹಿನ್ನಲೆಯಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ವಾರ್ಷಿಕ 100 ದಿನಗಳ ಉದ್ಯೋಗವನ್ನು 150 ದಿನಗಳಿಗೆ ಹೆಚ್ಚಳ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಯಾರು 100 ದಿನಗಳನ್ನು ಪೂರೈಸುವರು, ಅವರಿಗೆ ಹೆಚ್ಚುವರಿಯಾಗಿ 50 ದಿನಗಳ ಕೂಲಿಯನ್ನು ಹೆಚ್ಚಿಸಲು ಪ್ರಸ್ತಾವನೆ ಸಲ್ಲಿಸಲಾಗಿದ್ದು ಇದಕ್ಕೆ ಮಂಜೂರಾತಿ ಸಿಗುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಇಟ್ನಾಳ್ ತಿಳಿಸಿದರು. =====