ವಿಮೆ ಹಾಗೂ ಬರ ಪರಿಹಾರ ಇನ್‍ಪುಟ್ ಸಬ್ಸಿಡಿ ಹಣವನ್ನು ಯಾವುದೇ ಬ್ಯಾಂಕ್‍ಗಳು ಸಾಲಗಳಿಗೆ ಕಡಿತಗೊಳಿಸದೆ ನೇರವಾಗಿ ರೈತರ ಕೈ ಸೇರುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು.
ಶುಕ್ರವಾರ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಬ್ಯಾಂಕರ್ಸಗಳ ಸಲಹಾ ಸಮಿತಿ ಸಭೆ(ಆಐಅಅ)ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಸ್ತುತ ವರ್ಷದಲ್ಲಿ ಮಳೆಯ ಕೊರತೆಯಾಗಿ ಬರ ಸಂಭವಿಸಿದ್ದು ಬ್ಯಾಂಕುಗಳು ರಿಸರ್ವ್ ಬ್ಯಾಂಕಿನ ನೀತಿ ನಿಯಮಗಳನ್ನು ಅನುಸರಿಸಿ ಅರ್ಹ ಎಲ್ಲಾ ರೈತರಿಗೂ ಸರ್ಕಾರದ ನಿರ್ದೇಶನದಂತೆ ವಿಮೆ ಹಾಗೂ ಬರ ಪರಿಹಾರ ಹಣವನ್ನು ಖಾತೆಗೆ ವರ್ಗಾಯಿಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನಪ್ರಿಯ ಯೋಜನೆಗಳನ್ನು ಬ್ಯಾಂಕ್‍ಗಳು ರೈತರಿಗೆ ತಲುಪಿಸಬೇಕು ಹಾಗೂ ಪ್ರತಿ ಮನೆಮನೆಗೂ ಯೋಜನೆಗಳ ಅರಿವು ಮೂಡಿಸಬೇಕು ಎಂದರು.
ರೈತರು ಬೇರೆ ಉದ್ದೇಶಗಳಿಗೆ ಮಾಡಿದ ಸಾಲವನ್ನು ವಿಮೆ ಹಾಗೂ ಬರ ಪರಿಹಾರ ಹಣದಲ್ಲಿ ಕಡಿತಗೊಳಿಸಬಾರದು. ಜಿಲ್ಲೆಯಲ್ಲಿ ಸುಮಾರು 10,000 ಅರ್ಹ ಪಿಂಚಣಿದಾರರ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಬಾಕಿ ಇದ್ದು, ಈ ತಿಂಗಳ ಒಳಗಾಗಿ ಬ್ಯಾಂಕ್ ಮಿತ್ರ ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳ ಸಹಾಯದಿಂದ ಬ್ಯಾಂಕರ್ಸ್‍ಗಳು ಕಡ್ಡಾಯವಾಗಿ ಆಧಾರ್ ಜೋಡಣೆ ಮಾಡಿಸಬೇಕು.
ಕೇಂದ್ರ ಸರ್ಕಾರದ ಮಹತ್ತರ ಯೋಜನೆಯಾದ ಪಿ.ಎಂ.ಎಫ್.ಎಂ.ಇ ಯೋಜನೆ ಸಾಲಗಳನ್ನು ಎಲ್ಲಾ ಬ್ಯಾಂಕ್‍ಗಳು ತ್ವರಿತಗತಿಯಲ್ಲಿ ರೈತರಿಗೆ ಮಂಜೂರು ಮಾಡಬೇಕು. ಮಳೆ ಕೊರತೆಯಿಂದ ರೈತರು ಕಂಗಾಲಾಗಿದ್ದು ಬ್ಯಾಂಕುಗಳು ರೈತರಿಗೆ ಯಾವುದೇ ಒತ್ತಡವನ್ನೆರಬಾರದು ಎಂದರು.
ಜಿಲ್ಲಾ ಸಾಮಾಜಿಕ ಭದ್ರತಾ ಇಲಾಖೆಯ ಸಹಾಯಕ ನಿರ್ದೇಶಕಿ ಪುಷ್ಪ, ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ಪ್ರಕಾಶ್ ಜಿ ಸಿ, ನಬಾರ್ಡ್ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕಿ ರಶ್ಮಿ ರೇಖಾ ಉಪಸ್ಥಿತರಿದ್ದರು.