ಇತ್ತೀಚಿನ ದಿನಗಳಲ್ಲಿ ಅಫಘಾತ ಹಾಗೂ ತುರ್ತು ಪರಿಸ್ಥಿತಿಗಳು ಹೆಚ್ಚಾಗುತ್ತಿದ್ದು ರಕ್ತವು ಅವಶ್ಯಕವಾಗಿ ಬೇಕಾಗಿದೆ. ಒಂದು ಜೀವ ಉಳಿಸುವ ನಿಟ್ಟಿನಲ್ಲಿ ಎಲ್ಲಾರೂ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಬಿ ಇಟ್ನಾಳ್ ತಿಳಿಸಿದರು.
ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ನಗರದ ಚಿಗಟೇರಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಜರುಗಿದ ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ ಅತ್ಯಂತ ಮಹತ್ವವಾದ ಕಾರ್ಯಕ್ರಮವಾಗಿದ್ದು, ಒಂದು ಜೀವ ಉಳಿಸುವುದಕ್ಕೆ ರಕ್ತವು ಅವಶ್ಯಕವಾಗಿ ಬೇಕಾಗಿದೆ. 18 ರಿಂದ 65 ವರ್ಷದೊಳಗಿನ ಎಲ್ಲರೂ ಸ್ವಯಂ ಪ್ರೇರಿತರಾಗಿ ವರ್ಷಕ್ಕೆ ಮೂರು ಅಥವಾ ನಾಲ್ಕು ಬಾರಿ ರಕ್ತದಾನ ಮಾಡಬಹುದು. ಒಬ್ಬ ವ್ಯಕ್ತಿ ರಕ್ತದಾನ ಮಾಡಿದಾಗ ಕನಿಷ್ಠ ನಾಲ್ಕು ಜನರ ಜೀವಕ್ಕೆ ರಕ್ಷಣೆಯಾಗುತ್ತದೆ ಎಂದರು.
ಜನರು ಸಂತೋಷದಿಂದ ಸಾಧ್ಯವಾದಷ್ಟು ಜನರ ಜೀವ ಉಳಿಸುವ ದೃಷ್ಟಿಕೋನದಿಂದ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಕೊಬ್ಬಿನಾಂಶ ಹೆಚ್ಚಾಗಿದ್ದು, ರಕ್ತದಾನ ಮಾಡುವ ಮೂಲಕ ಕೊಬ್ಬಿನಾಂಶ ಕಡಿಮೆ ಮಾಡಬಹುದು. ಜಿಲ್ಲೆಯಲ್ಲಿ 9 ಬ್ಲಡ್ ಬ್ಯಾಂಕುಗಳಿದ್ದು, ಗುರಿಯಂತೆ 14,135 ಯೂನಿಟ್ ನಷ್ಟು ರಕ್ತವನ್ನು ಸಂಗ್ರಹಿಸಲಾಗಿದೆ. ಎರಡು ವರ್ಷಗಳ ಹಿಂದೆ ರಾಜ್ಯದಲ್ಲಿಯೇ ಎರಡನೇ ಅತಿ ಹೆಚ್ಚು ರಕ್ತದ ಮಾದರಿಯನ್ನು ಸಂಗ್ರಹಿಸಿರುವ ಜಿಲ್ಲೆಯಾಗಿದೆ. ಪ್ರತಿ ಗ್ರಾಮ ಪಂಚಾಯಿತಿ ಪಿ.ಡಿ.ಒಗಳು ಪಂಚಾಯತಿ ವ್ಯಾಪ್ತಿಯಲ್ಲಿ ಕನಿಷ್ಠ ವರ್ಷಕ್ಕೆ ಎರಡು ಬಾರಿ ರಕ್ತದಾನ ಶಿಬಿರಗಳನ್ನು ಹಮ್ಮಿಕೊಳ್ಳಬೇಕು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಷಣ್ಮುಖಪ್ಪ ಮಾತನಾಡಿ ಜಿಲ್ಲೆಯಲ್ಲಿ ರಕ್ತದ ಅವಶ್ಯಕತೆ ಹೆಚ್ಚಾಗಿದ್ದು, ಎಲ್ಲಾ ಬ್ಲಡ್ ಬ್ಯಾಂಕ್‍ಗಳು ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ರಕ್ತದ ಶಿಬಿರ ಹಾಗೂ ರಕ್ತದಾನದ ಕುರಿತು ಜಾಗೃತಿ ಮೂಡಿಸಬೇಕು. ಹಿಮೋಗ್ಲೊಬಿನ್ ಪ್ರಮಾಣ 12 ಗ್ರಾಂ ಗಿಂತ ಹೆಚ್ಚಿರುವವರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬಹುದು ಎಂದರು.
ಇತ್ತೀಚಿನ ದಿನಗಳಲ್ಲಿ ಅಪಘಾತ ಹಾಗೂ ಮಹಿಳೆಯರ ಹೆರಿಗೆ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಹೆಚ್ಚಾಗಿರುವುದರಿಂದ ಜನರು ವರ್ಷಕ್ಕೆ ಒಮ್ಮೆಯಾದರೂ ರಕ್ತದಾನ ಮಾಡಿ ಜೀವ ಉಳಿಸುವಲ್ಲಿ ಸಹಕಾರಿಯಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ಸ್ವಯಂ ಪ್ರೇರಿತರಾಗಿ ಅತಿ ಹೆಚ್ಚು ಬಾರಿ ರಕ್ತದಾನ ಮಾಡಿದ ದಾನಿಗಳಿಗೆ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು.
ಜಾಗೃತಿ ಜಾಥಾ: ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆಯ ಅಂಗವಾಗಿ ರಕ್ತದಾನ ಜಾಗೃತಿ ಜಾಥಾಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಸ್ ಷಣ್ಮುಖಪ್ಪ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ರಕ್ತದಾನ ಮಹಾದಾನ, ರಕ್ತದಾನ ಜೀವದಾನ, ರಕ್ತದಾನ ಮಾಡಿ ಜೀವ ಉಳಿಸಿ ಎಂಬ ಘೋಷ ವಾಕ್ಯದೊಂದಿಗೆ ಜಾತವು ಚಿಗಟೇರಿ ಜಿಲ್ಲಾ ಆಸ್ಪತ್ರೆಯಿಂದ ವಿದ್ಯಾರ್ಥಿ ಭವನ, ಅಂಬೇಡ್ಕರ್ ಸರ್ಕಲ್ ಹಾಗೂ ಎ.ವಿ.ಕೆ ರಸ್ತೆಯ ಮೂಲಕ ಸಾಗಿತು.
ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಅಧೀಕ್ಷಕ ಡಾ. ನಾಗೇಂದ್ರಪ್ಪ ಎಂ ಬಿ, ಜಿಲ್ಲಾಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ ಡಾ. ಎಸ್. ಕೆ ನಾಗವೇಣಿ, ರವರ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಡಾ. ನಟರಾಜ, ಚಿಗಟೇರಿ ಜಿಲ್ಲಾ ಆಸ್ಪತ್ರೆಯ ರಕ್ತ ಭಂಡಾರದ ವೈದ್ಯಾಧಿಕಾರಿ ಡಾಕ್ಟರ್ ಗೀತಾ ಡಿ.ಹೆಚ್, ಡಾ. ಬಾರ್ಕಿ, ಮಂಜುನಾಥ್ ಪಾಟೀಲ್ ಉಪಸ್ಥಿತರಿದ್ದರು.