ನಾವೆಲ್ಲಾ ಒಂದೇ ಎಂಬ ಐಕ್ಯತಾ ಭಾವನೆ ಮೂಡಿಸುವ ಮೂಲಕ ಒಗ್ಗಟ್ಟು ಪ್ರದರ್ಶನ ಮಾಡುವುದು ನನ್ನ ಮಣ್ಣು ನನ್ನ ದೇಶ ಅಭಿಯಾನದ ಉದ್ದೇಶವಾಗಿದೆ ಎಂದು ಸಂಸದರಾದ ಡಾ.ಜಿ.ಎಂ ಸಿದ್ದೇಶ್ವರ ತಿಳಿಸಿದರು.
ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನೆಹರು ಯುವ ಕೇಂದ್ರ ಹಾಗೂ ಯುವಜನ ಸೇವಾ ಕ್ರೀಡಾ ಇಲಾಖೆ ಇವರ ಸಹಯೋಗದೊಂದಿಗೆ ನಗರದ ಬಿ.ಎಸ್ ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ತಾಲ್ಲೂಕು ಮಟ್ಟದ ನನ್ನ ಮಣ್ಣು ನನ್ನ ದೇಶ (ಅಮೃತ ಕಳಸ ಯಾತ್ರೆ) ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹುತಾತ್ಮ ಯೋಧರನ್ನು ಪ್ರತಿಯೊಬ್ಬರೂ ಗೌರವಿಸುವ ನಿಟ್ಟಿನಲ್ಲಿ ದೇಶಾದ್ಯಂತ ನನ್ನ ಮಣ್ಣು, ನನ್ನ ದೇಶ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಅದರಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಮಣ್ಣನ್ನು ಸಂಗ್ರಹಿಸಿ, ದೆಹಲಿಯ ಅಮೃತವಾಟಿಕ ಎಂಬ ಸ್ಥಳದಲ್ಲಿ ಆ ಮಣ್ಣಿನಿಂದ ಗಿಡಗಳನ್ನು ನೆಟ್ಟು ಅಮೃತ್ ಉದ್ಯಾವನವನ್ನು ನಿರ್ಮಿಸಲಾಗುತ್ತದೆ. ಈ ಉದ್ಯಾನವನವು ದೇಶದ ಐಕ್ಯತೆಯ ಪ್ರತಿಕವಾಗಿ ಬಿಂಬಿಸಲಾಗುತ್ತದೆ.
ಅಭಿಯಾನದಡಿ ಸುಮಾರು ಒಂದೂವರೆ ತಿಂಗಳಿಂದ ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲೆಯ ಪ್ರತಿ ಹಳ್ಳಿ ಹಳ್ಳಿಗೂ ಹೋಗಿ ಮಣ್ಣನ್ನು ಸಂಗ್ರಹಿಸಿ ಜಿಲ್ಲಾ ಮಟ್ಟಕ್ಕೆ ತಲುಪಿಸಿರುವುದು ಸಂತಸ ತಂದಿದೆ ಎಂದರು.
ಅಮೃತ ಕಳಸ ಯಾತ್ರೆ ಜಾಥಾ: ನನ್ನ ಮಣ್ಣು ನನ್ನ ದೇಶ ಅಭಿಯಾನದ ಅಮೃತ ಕಳಸ ಯಾತ್ರೆ ಜಾಥಕ್ಕೆ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಕೃಷ್ಣನಾಯಕ್ ಚಾಲನೆ ನೀಡಿದರು. ಜಾಥಾವು ಚನ್ನಬಸಪ್ಪ ಕಾಲೇಜಿನಿಂದ ಆರಂಭಗೊಂಡು ಶಾರದಾಮಠ, ಶಾಮನೂರು ರಸ್ತೆಯ ಮೂಲಕ ಜಿಲ್ಲಾ ಪಂಚಾಯತ್ ತಲುಪಿ, ಸಂಗ್ರಹಿಸಿದ ಮಣ್ಣಿನ ಕಳಸವನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಬಿ ಇಟ್ನಾಳ್ ಇವರಿಗೆ ಹಸ್ತಾಂತರಿಸುವ ಮೂಲಕ ಅಭಿಯಾನವನ್ನು ಯಶಸ್ವಿಗೊಳಿಸಲಾಯಿತು.
ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಕೃಷ್ಣ ನಾಯ್ಕ್, ನೆಹರು ಯುವ ಕೇಂದ್ರದ ಅಧಿಕಾರಿ ಭುಕ್ಯ ಸಂಜೀವ್, ಬಿ.ಎಸ್ ಚನ್ನಬಸಪ್ಪ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಅಧ್ಯಕ್ಷ ಬಿ.ಸಿ ಉಮಾಪತಿ, ಮಾಜಿ ದೂಡಾ ಅಧ್ಯಕ್ಷ ಯಶವಂತರಾವ್ ಜಾಧವ್, ಬಿ.ಎಸ್.ಸಿ ಕಾಲೇಜಿನ ಪ್ರಾಂಶುಪಾಲ ಗುರು.ಎಂ.ಸಿ, ದಾವಣಗೆರೆ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕ ಡಾ. ತಿಪ್ಪೇಶ್.ಕೆ, ಹಾಗೂ ಎನ್,ಎಸ್,ಎಸ್ ಘಟಕದ ಸಂಯೋಜನಾಧಿಕಾರಿ ಅಶೋಕ್, ಮಾಜಿ ಸೈನಿಕರಾದ ಗೋಪಾಲ್ ಸೇತ್ ಸನದಿ ಮತ್ತು ಮನೋಹರ್ ಮಹೇಂದ್ರಕರ್ ಉಪಸ್ಥಿತರಿದ್ದರು.