ನ್ಯಾಮತಿ: ಶರನ್ನಾವರಾತ್ರಿ ಅಂಗವಾಗಿ ಗ್ರಾಮದ ರಾಮಭಟ್ಟರ ಮನೆಯಲ್ಲಿ ಗಡ್ಡೆ ರಾಮೇಶ್ವರ ಮತ್ತು ಆಂಜನೇಯಸ್ವಾಮಿ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಒಂಬತ್ತು ದಿನದ ದೀಪರಾಧನೆ ಕಾರ್ಯಕ್ರಮ ನಡೆಯುತ್ತಿದೆ.
ದಸರಾ ಸಮಯದಲ್ಲಿ ಗ್ರಾಮಸ್ಥರು ಆರ್ಚಕರ ಮನೆಯಲ್ಲಿ ಅವರ ಶಕ್ತಾನುಸಾರ 9,5 ಮತ್ತು 3 ದಿನ ಹಾಗೂ ಮೂಲ ನಕ್ಷತ್ರದಂದು ದೀಪಗಳನ್ನು ತಂದು ಬೆಳಗಿಸುತ್ತಾರೆ. ಇಲ್ಲಿ ಹಚ್ಚಿದ ದೀಪಗಳು ವಿಜಯದಶಮಿತನಕ ಬೆಳಗುತ್ತಿರಬೇಕು, ಒಂಭತ್ತು ದಿನವು ಬೆಳಿಗ್ಗೆ ಮತ್ತು ಸಂಜೆ ಎರಡು ಪೂಜೆಗಳನ್ನು ನೆರವೇರಿಸಿ, ದೇವರಿಗೆ ಹೋಳಿಗೆ, ಕರಿಕಡಬು, ಬಾಳೆಹಣ್ಣಿನ ರಾಸಾಯನ ನೈವೇದ್ಯ ಮಾಡಿ ಭಕ್ತರಿಗೆ ಪ್ರಸಾದ ರೂಪವಾಗಿ ವಿತರಿಸಲಾಗುವುದು.
ವಿಜಯದಶಮಿ ಮಂಗಳವಾರದಂದು ಬೆಳಿಗ್ಗೆ ದೀಪಗಳನ್ನು ಸಡಿಲಿಸಿ, ಉತ್ಸವ ಮೂರ್ತಿಗಳೊಂದಿಗೆ ತುಂಗಭದ್ರಾ ನದಿಯನ್ನು ಹರಿಗೋಲಿನಲ್ಲಿ ದಾಟಿ ಕುರುವ ಗಡ್ಡೆ ರಾಮೇಶ್ವರ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿ ಬನ್ನಿ ಮುಡಿದು ಮರಳಿ ಕುರುವ ಗ್ರಾಮಕ್ಕೆ ಬರುವ ಸಂಪ್ರದಾಯ ನಮ್ಮ ಪೂರ್ವಜರ ಕಾಲದಿಂದಲೂ ನಡೆಯುತ್ತ ಬಂದಿದೆ. ಅದನ್ನು ನಾವುಗಳು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ ಎಂದು ಆರ್ಚಕ ರಾಮಭಟ್ಟ ಮತ್ತು ಪವನಭಟ್ಟ ಮಾಹಿತಿ ನೀಡಿದರು.
ಪೂರ್ವಜರ ಕಾಲದಲ್ಲಿ ಗ್ರಾಮದಲ್ಲಿ ಗುಡಿಸಲು ಮನೆಗಳು ಇದ್ದು, ದೀಪ ಹಾಕಿದಾಗ ಅವಘಡಗಳು ಸಂಭವಿಸಬಾರದು ಎಂದು ಗ್ರಾಮದ ಆರ್ಚಕರ ಮನೆಯಲ್ಲಿ ಗ್ರಾಮಸ್ಥರು ದೀಪಗಳನ್ನು ಹಾಕಿ ಪೂಜಿಸುತ್ತ ಬಂದಿದ್ದಾರೆ. ಇನ್ನು ಕೆಲವರು ಅವರ ಮನೆಯಲ್ಲೆಯೇ ದೀಪ ಹಾಕುತ್ತಾರೆ. ಅದೇ ಪದ್ಧತಿ ಇಂದಿಗೂ ಮುಂದುವರಿದಿದೆ ಎಂದು ಭಟ್ಟರ ತಾಯಿ ಶಾರದಮ್ಮ ಹೇಳುತ್ತಾರೆ.
ತಾಲ್ಲೂಕಿನಲ್ಲಿ ಇಷ್ಟು ದೀಪಗಳನ್ನು ಒಂದೆಡೆ ಬೆಳಗಿಸುವ ಪದ್ದತಿ ಕುರುವ ಗ್ರಾಮದಲ್ಲಿ ಮಾತ್ರ ಕಂಡುಬರುತ್ತದೆ ಎಂದು ಗಡ್ಡೆ ರಾಮೇಶ್ವರ ಜೀಣೋದ್ಧಾರ ಸಮಿತಿ ಸದಸ್ಯರು ಹೇಳುತ್ತಾರೆ.
ಸಾಲಿಗ್ರಾಮದ ಕೃಷ್ಣಮೂರ್ತಿ ದಂಪತಿ, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಿ.ಎಂ.ಹಾಲಾರಾಧ್ಯ, ನಿಕಟಪೂರ್ವ ಅಧ್ಯಕ್ಷ ನಿಜಲಿಂಗಪ್ಪ, ಸಂಘಟನಾ ಕಾರ್ಯದರ್ಶಿಎಂ.ಎಸ್.ಜಗದೀಶ, ಕಾರ್ಯಕಾರಿ ಸದಸ್ಯ ಚಂದನಜಂಗ್ಲೀ ಗ್ರಾಮಸ್ಥರು ದರ್ಶನ ಪಡೆದರು.

Leave a Reply

Your email address will not be published. Required fields are marked *