ನ್ಯಾಮತಿ : ರಾಜ್ಯದಲ್ಲಿ ಹಿಂದೆದು ಕಂಡು ಕೇಳರಿಯದಂತಹ ಬೀಕರ ಬರಗಾಲ ಎದುರಾಗಿದ್ದು, ರಾಜ್ಯ ಸರ್ಕಾರ ಕೂಡಲೇ ಬರ ಪರಿಹಾರದ ಹಣವನ್ನು ಬಿಡುಗಡೆ ಮಾಡುವ ಮೂಲಕ ರೈತರ ಸಂಕಷ್ಟಕ್ಕೆ ದಾವಿಸ ಬೇಕೆಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸರ್ಕಾರವನ್ನು ಆಗ್ರಹಿಸಿದರು.
ಭಾರತೀಯ ಜನತಾ ಪಾರ್ಟಿ ಹೊನ್ನಾಳಿ ಮಂಡಲದ ತಾಲೂಕು ಅಧ್ಯಕ್ಷರಾದ ಜೆ.ಕೆ.ಸುರೇಶ್ ಅವರ ನೇತೃತ್ವದಲ್ಲಿ ಸೋಮವಾರ ನ್ಯಾಮತಿ ತಾಲೂಕಿನ ಸುರಹೊನ್ನೆ,ನ್ಯಾಮತಿ, ಸವಳಂಗ ಭಾಗದಲ್ಲಿ ಬರ ಅಧ್ಯಯನ ಪ್ರವಾಸ ನಡೆಸಿ ಬರದಿಂದ ಹಾನಿಯಾದ ಬೆಳೆಗಳನ್ನು ವೀಕ್ಷೀಸಿ, ರೈತರಿಂದ ಮಾಹಿತಿ ಪಡೆದು, ಅವರು ಮಾತನಾಡಿದರು.
ರಾಜ್ಯ ಬರ ಪ್ರವಾಸ ಪಟ್ಟಿಯಲ್ಲಿ ನನ್ನ ಹೆಸರು ಕೈಬಿಟ್ಟ ಹಿನ್ನೆಲೆಯಲ್ಲಿ, ತಾಲೂಕು ಮಂಡಲದ ಅಧ್ಯಕ್ಷರ ನೇತೃತ್ವದಲ್ಲಿ ಹೊನ್ನಾಳಿ ನಗರದ ಪ್ರವಾಸಿಮಂದಿರದಲ್ಲಿ ನೂರಾರು ಸಂಖ್ಯೆಯಲ್ಲಿ ಮುಖಂಡರುಗಳು, ಕಾರ್ಯಕರ್ತರುಗಳು ತುರ್ತು ಸಭೆ ನಡೆಸಿ, ಶನಿವಾರ,ಭಾನುವಾರ,ಸೋಮವಾರ ಮೂರು ದಿನಗಳ ಕಾಲ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬರ ಅಧ್ಯಯನ ಪ್ರವಾಸ ನಡೆಸಲು ತೀರ್ಮಾನ ಕೈಗೊಳ್ಳಲಾಗಿತ್ತು, ಅದರಂತೆ ಮೂರು ದಿನಗಳ ಕಾಲ ಅವಳಿ ತಾಲೂಕಿನಲ್ಲಿ ಬರ ಪ್ರವಾಸ ಮಾಡಿದ್ದು ಈ ಬಗ್ಗೆ ವರದಿ ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.
ಅವಳಿ ತಾಲೂಕಿನ ರೈತರು ಸಾಲಸೋಲ ಮಾಡಿ ಬೆಳೆದ ಬೆಳೆಗಳು ಸಂಪೂರ್ಣವಾಗಿ ಒಣಗಿ ಹೋಗಿದ್ದು ಅವಳಿ ತಾಲೂಕಿನಲ್ಲಿ 30 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ವಿವಿಧ ಬೆಳೆಗಳು ಹಾಳಾಗಿದ್ದು ಸರ್ಕಾರ ಎಕರೆಗೆ 25 ಸಾವಿರ ರೂಪಾಯಿ ಪರಿಹಾರ ನೀಡುವ ಮೂಲಕ ಸಂಕಷ್ಟದಲ್ಲಿರುವ ರೈತರ ನೆರವಿಗೆ ಬರಬೇಕೆಂದರು.
ಬರ ಪ್ರವಾಸ ಹಮ್ಮಿಕೊಳ್ಳುತ್ತಿದ್ದಂತೆ ವರುಣ ದೇವ ಕೃಪೆ ತೋರಿದ್ದು, ಸಂಕಷ್ಟದಲ್ಲಿರುವ ರೈತರ ಮೊಗದಲ್ಲಿ ಕೊಂಚ ಮಂದಹಾಸ ಮೂಡುವಂತೆ ಮಾಡಿದೆ ಎಂದ ರೇಣುಕಾಚಾರ್ಯ, ಸರ್ಕಾರ ಯಾವುದೇ ಮೀನಾಮೇಷ ಎಣಿಸದೇ ಬರ ಪರಿಹಾರ ಬಿಡುಗಡೆ ಮಾಡುವ ಮೂಲಕ ನೊಂದ ರೈತರ ಕಣ್ಣೀರು ಹೊರೆಸುವ ಕೆಲಸ ಮಾಡ ಬೇಕೆಂದರು.
ಇಡೀ ರಾಜ್ಯದಲ್ಲಿ ವಿದ್ಯುತ್ ಅಬಾವ ಉಂಟಾಗಿದ್ದು ಕತ್ತಲೆ ಕರ್ನಾಟಕವಾಗಿದೆ ಎಂದ ರೇಣುಕಾಚಾರ್ಯ ಸರ್ಕಾರ ಕೇವಲ 234 ಕೋಟಿ ರೂಪಾಯಿ ರಾಜ್ಯಕ್ಕೆ ಬಿಡುಗಡೆ ಮಾಡಿದರೇ ಇದರಿಂದ ರೈತರ ಸಂಕಷ್ಟವನ್ನು ಹೇಗೆ ದೂರ ಮಾಡಲು ಸಾಧ್ಯ ಎಂದು ಪ್ರಶ್ನೇ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಜೆ.ಕೆ.ಸುರೇಶ್, ಜಿ.ಪಂ.ಮಾಜಿ ಉಪಾಧ್ಯಕ್ಷ ಸುರೇಂದ್ರನಾಯ್ಕ, ತಾ.ಪಂ.ಮಾಜಿ ಅಧ್ಯಕ್ಷ ಎಸ್.ಪಿ.ರವಿಕುಮಾರ್, ಬಗರ್‍ಹುಕ್ಕುಂ ಕಮಿಟಿ ಮಾಜಿ ಅಧ್ಯಕ್ಷ ಈರಣ್ಣ, ಗ್ರಾ.ಪಂ.ಸದಸ್ಯರಾದ ಹಾಲೇಶ್, ಕುಮಾರ್, ವೀರೇಶ್, ತಾ.ಪಂ.ಮಾಜಿ ಸದಸ್ಯರ ಹನುಮಂತಪ್ಪ, ಮುಖಂಡರಾದ ಕುಮಾರ್, ಮಂಜುಗೌಡ್ರು ಸೇರಿದಂತೆ ಮುಖಂಡರುಗಳು, ಕಾರ್ಯಕರ್ತರಿದ್ದರು.