2024 ರಲ್ಲಿ ನಡೆಯುವ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಮುದ್ರಣ, ವಿದ್ಯುನ್ಮಾನ ಮಾಧ್ಯಮ, ಕೇಬಲ್ ಟಿ.ವಿ ಗಳಲ್ಲಿ ಪ್ರಚಾರ ಮಾಡಲು ನಿಗದಿ ಮಾಡಿರುವ ಜಾಹಿರಾತು ದರದ ಬಗ್ಗೆ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ನವೆಂಬರ್ 10 ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಲಾಯಿತು.
ಚುನಾವಣಾ ಸಂದರ್ಭದಲ್ಲಿ ಅಭ್ಯರ್ಥಿಗಳು ರಾಜ್ಯ ಮಟ್ಟದ ಪತ್ರಿಕೆಗಳು, ಸ್ಥಳೀಯ, ಪ್ರಾದೇಶಿಕ, ವಾರಪತ್ರಿಕೆ, ಕೇಬಲ್ ಟಿ.ವಿ.ಗಳಲ್ಲಿ ನೀಡುವ ಚುನಾವಣಾ ಜಾಹಿರಾತುಗಳಿಗೆ ಅನ್ವಯಿಸುವ ದರದ ಬಗ್ಗೆ ರಾಜಕೀಯ ಪಕ್ಷಗಳ ಮುಖಂಡರಿಗೆ ತಿಳಿಸಲಾಯಿತು. ಚುನಾವಣಾ ಸಂದರ್ಭದಲ್ಲಿ ಎಂಸಿಎಂಸಿ ಸಮಿತಿಯು ಕಾರ್ಯನಿರ್ವಹಿಸಲಿದ್ದು ಇದರ ಎಲ್ಲಾ ಮೇಲ್ವಿಚಾರಣೆ ನಡೆಸಲಿದೆ. ಅಭ್ಯರ್ಥಿಗಳು ನೀಡುವ ಜಾಹಿರಾತು ವೆಚ್ಚವು ಸಹ ಅಭ್ಯರ್ಥಿಗಳಿಗೆ ವೆಚ್ಚಕ್ಕೆ ನಿಗದಿಪಡಿಸಿರುವ ಮೊತ್ತದಲ್ಲಿ ಸೇರಲಿದೆ ಎಂದು ಪಕ್ಷಗಳ ಮುಖಂಡರಿಗೆ ಮನವರಿಕೆ ಮಾಡಿದರು.
ಸಭೆಯಲ್ಲಿ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಜಿ.ಸಿ.ರಾಘವೇಂದ್ರ ಪ್ರಸಾದ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಧನಂಜಯ, ಚುನಾವಣಾ ತಹಶೀಲ್ದಾರ್ ಅರುಣ್ ಎಸ್.ಕಾರ್ಗಿ ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು.
======