ನ್ಯಾಮತಿ: ತಾಲೂಕು, ಕೊಡಚಗೊಂಡನಹಳ್ಳಿ ಗ್ರಾಮದಲ್ಲಿ ದುಗಾರ್ಂಬೆ ದೇವಿಯ ಜಾತ್ರಾ ಮಹೋತ್ಸವ ಶ್ರದ್ಧಾ ಭಕ್ತಿಯಿಂದ ಜರಗಿತು. ಮಂಗಳವಾರ ದಿನದಂದು ಶ್ರೀ ದುರ್ಗಮ್ಮ ದೇವಿ ಮತ್ತು ಆಂಜನೇಯ ಸ್ವಾಮಿಗೆ ಪುಷ್ಪಾಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ಮಂಗಳವಾರ ಸಂಜೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಊರೊಟ್ಟಿನಿಂದ ಉಡಹಕ್ಕಿ ತೆಗೆದುಕೊಂಡು ಹೋಗಿ ಆಂಜನೇಯ ಸ್ವಾಮಿಗೆ ಪೂಜೆ ಮಾಡಿಸಿ ಸಂಜೆ 7 ಗಂಟೆಗೆ ದುರ್ಗಮ್ಮ ದೇವಿಗೆ ಅರ್ಪಿಸುತ್ತಾರೆ. ಬುಧವಾರ ಬೆಳಗ್ಗೆ 9:00ಗೆ ಸರಿಯಾಗಿ ಶ್ರೀ ದುರ್ಗಮ್ಮ ದೇವಿಗೆ ವಿಶೇಷ ಅಲಂಕಾರವನ್ನು ಮಾಡಿ ಪೂಜೆಯನ್ನು ನೆರವೇರಿಸಿ ಅಂದಿನ ದಿವಸ ಗ್ರಾಮದ ಪ್ರತಿಯೊಂದು ಸಮಾಜದ ಮನೆ ಮನೆಯಿಂದ ಮುತ್ತೈದೆಯರು ಅರಿಶಿಣ, ಕುಂಕುಮ, ಬಳೆ, ಕುಪ್ಪಸ, ಉತ್ತತ್ತಿ, ಅಡಿಕೆ, ಎಲೆ, ಕೊಬ್ಬರಿ, ಅಕ್ಕಿಯನ್ನು ಇಟ್ಟು ತೆಗೆದುಕೊಂಡು ಹೋಗಿ ಹಣ್ಣು ಕಾಯಿ ಮಾಡಿಸಿ , ಮನೆಯಲ್ಲಿ ತಯಾರು ಮಾಡಿದ ಸಿಹಿ ತಿನುಸನ್ನು ನೈವೇದ್ಯ ಮಾಡಿಸಿಕೊಂಡು ಶ್ರೀ ದುರ್ಗಮ್ಮ ದೇವಿಗೆ ಭಕ್ತಿಗೆ ಪಾತ್ರರಾದರು. ತದನಂತರ ಸಂಜೆ ಐದು ಗಂಟೆಗೆ ಸರಿಯಾಗಿ ಸುಮಾರು ಒಂದೊಂದು ಮನೆತನಕ್ಕೆ ಕೊಲ್ಲಾರಿ ಬಂಡಿಯನ್ನು ಕಟ್ಟಿಕೊಂಡು ಎತ್ತಿನಗಾಡಿಗೆ, ಹೋರಿಗಳಿಗೆ ಬಾಳೆಕಂದು, ಬಲೂನ, ಜುಲಾ ಹಾಕಿ ಶೃಂಗರಿಸಿ ಸುಮಾರು ಎಂಟು ಹತ್ತು ಗಾಡಿಯಲ್ಲಿ ಬೆಲ್ಲದ ಪಾನಕದ ಹಂಡೆವಲ್ಲಿ ತೆಗೆದುಕೊಂಡು ಹಲಗೆ ಡೊಳ್ಳು ತಮಟೆ ಸನಾಯುವ ವಾದ್ಯದಿಂದ ಮೆರವಣಿಗೆ ಮೂಲಕ ಶ್ರೀ ಬಸವೇಶ್ವರ ದೇವರಿಗೆ ನೈವೇದ್ಯ ಮಾಡಿಸಿ ದೇವಸ್ಥಾನ ಎದುರುಗಡೆ ಸಭಾಂಗಣದಲ್ಲಿ ಭಕ್ತರಿಗೆ ಬೆಲ್ಲದ ಪಾನಕವನ್ನು ಹಿರಿಯರು ಕಿರಿಯರು ಹೆಣ್ಣು ಮಕ್ಕಳುಗಳಿಗೆ ಸಂತಸದಿಂದ ವಿತರಿಸಿ ಮನೆಗೆ ತೆರಳಿ ಕೊಲ್ಲಾರಿ ಬಂಡಿಯನ್ನು ವಿಸರ್ಜಿಸುತ್ತಾರೆ ಎಂದು ಗ್ರಾಮದ ಮುಖಂಡ ಯೋಗೇಶಪ್ಪ ಕೆಂಡಪ್ಪ ತಿಳಿಸಿದರು. ಶ್ರೀ ದುರ್ಗಮ್ಮ ದೇವಿಯ ದೇವಸ್ಥಾನದ ಕಮಿಟಿಯವರು ಗ್ರಾಮದ ಮುಖಂಡರ ಮತ್ತು ಸುತ್ತಮುತ್ತಲಿನ ಗ್ರಾಮದ ಭಕ್ತರು ಸಹ ಭಾಗಿಯಾಗಿದ್ದರು.