ಹುಣಸಘಟ್ಟ: “ಅಗಸತ್ವ ಮೇಲೆಲ್ಲಾ ಅರಸತ್ವ ಕೀಳಲ್ಲ” ಎಂದು ಕೇವಲ ಬಟ್ಟೆಯನ್ನು ಶುಭ್ರಗೊಳಿಸದೆ ಜನರ ಮನಸ್ಸಿನಲ್ಲಿರುವ ಕೊಳೆಯನ್ನು ತೊಳೆದವರು ಮಡಿವಾಳ ಮಾಚಿದೇವರು ಎಂದು ತಾಲೂಕು ಮಡಿವಾಳ ಸಮಾಜದ ಅಧ್ಯಕ್ಷ ಮಹಾಂತೇಶ್ ಹೇಳಿದರು.
ಹೊನ್ನಾಳಿ ತಾಲೂಕಿನ ಹಿರೇಬಾಸೂರು ಗ್ರಾಮದಲ್ಲಿ ಮಡಿವಾಳ ಸಮಾಜವು ಶನಿವಾರ ಹಮ್ಮಿಕೊಂಡ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಮಾಚಿದೇವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು ಸಾಹಿತ್ಯವು ಕೇವಲ ಅರಮನೆಗೆ ಸೀಮಿತವಾಗಬಾರದೆಂದು ಶ್ರೀಸಾಮಾನ್ಯನಿಗೆ ತಿಳಿಯುವ ಹಾಗೆ ಸರಳಭಾಷೆಯಲ್ಲಿ ಬಸವಾದಿ ಶರಣರಲ್ಲಿ ಒಬ್ಬರಾಗಿ ಮಡಿವಾಳ ಮಾಚಿದೇವರು ವಚನಗಳನ್ನು ರಚಿಸಿ ಜನಸಾಮಾನ್ಯರ ಮನ ಮುಟ್ಟಿಸಿದ್ದಾರೆ. ಶಿಕ್ಷಣವು ಕೇವಲ ಉಳ್ಳವರಿಗೆ ಮಾತ್ರ ಮೀಸಲಾಗಿದ್ದ ಸಂದರ್ಭದಲ್ಲಿ ಶ್ರೀ ಚನ್ನಮಲ್ಲಿಕಾರ್ಜುನ ಗುರುಗಳ ಹತ್ತಿರ ಶಿಕ್ಷಣ ಪಡೆದು ಸರ್ವರಿಗೂ ಸಮಪಾಲು ಸರ್ವರಿಗೂ ಸಮ ಬಾಳು ಎನ್ನುವಂತೆ ಎಲ್ಲರಿಗೂ ಬಾಳುವ ಮತ್ತು ಶಿಕ್ಷಣ ಪಡೆಯುವ ಹಕ್ಕಿದೆ ಎಂದು ಮಾಚಿದೇವರು ಸಾಮಾಜಿಕ ಕ್ರಾಂತಿಯನ್ನು ಮೂಡಿಸಿದ್ದಾರೆ ಎಂದರು.
ಶಾಲಾ ಮುಖ್ಯ ಶಿಕ್ಷಕ ಯುಬಿ ಉಮೇಶ್ ಮಾತನಾಡಿ ಮಡಿವಾಳ ಮಾಚಿದೇವರು ಕಾಯಕನಿಷ್ಠೆ ದಾಸೋಹ ದಂತಹ ಮೌಲ್ಯಯುತವಾದ ಕಾಣಿಕೆ ನೀಡಿದ್ದು 12ನೇ ಶತಮಾನದ ಕಾಲದಲ್ಲಿ ಇಂತಹ ಶರಣರು ಮಹಾಪುರುಷರು ಹಾಕಿಕೊಟ್ಟ ಮಾರ್ಗದರ್ಶನ ಹಾಗೂ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಾಜದ ಯುವ ಮುಖಂಡ ಬೆನಕೇಶ್ ವಹಿಸಿ ಮಾತನಾಡಿದ ಸಭೆಯಲ್ಲಿ ಗ್ರಾಮದ ಮುಖಂಡ ಗಣೇಶಪ್ಪ, ಎಸ್ ಡಿ ಎಂ ಸಿ ಅಧ್ಯಕ್ಷ ಸಂತೋಷ್, ಶಿಕ್ಷಕರಾದ ರಂಗಪ್ಪ ಮಂಜುಳಾ ಮಡಿವಾಳ ಸಮಾಜದ ಹನುಮಂತಪ್ಪ ಸಂತೋಷ್ ಬೆನಕೇಶ್ ಪ್ರಭು ದಿವಾಕರ ಹನುಮಂತ ಮಂಜಪ್ಪ ತಾಯಿಂದಿರು ಉಪಸ್ಥಿತರಿದ್ದರು