ದಾವಣಗೆರೆ : ನಮ್ಮ ಮನೆಯಲ್ಲೂ, ನಿಮ್ಮ ಮನೆಯಲ್ಲೂ, ಎಲ್ಲರ ಮನೆಯಲ್ಲೂ ಹೆಣ್ಣು ಮಕ್ಕಳೇ ಅಡುಗೆ ಮಾಡುವುದು. ಹಾಗಂದ ಮಾತ್ರಕ್ಕೆ ಮಹಿಳೆ ಅಡುಗೆ ಮಾಡುವುದಕ್ಕೆ ಮಾತ್ರ ಲಾಯಕ್ಕು ಅಂದರೆ ಹೇಗೆ. ಮಹಿಳೆಯರು ರಾಕೇಟು ಉಡಾವಣೆನೂ ಮಾಡುತ್ತಾರೆ, ಆಕಾಶದಲ್ಲೂ ಹಾರಾಡ್ತಾರೆ. ಐಎಎಸ್, ಐಪಿಎಸ್ ಕೂಡ ಆಗ್ತಾರೆ. ನಮ್ಮ ಎಸ್ಪಿ ಅವರು ಕೂಡ ಒಬ್ಬ ಮಹಿಳೆ ಎನ್ನುವ ಮೂಲಕ ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ಸಂಸದ ಜಿ.ಎಂ.ಸಿದ್ದೇಶ್ವರ್ ತಿರುಗೇಟು ನೀಡಿದರು.
ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್ ಪರ ಭಾನುವಾರ ಭರ್ಜರಿ ಮತಬೇಟೆ ಮಾಡಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ಜನರನ್ನು ಮರಳು ಮಾಡುವ ಗ್ಯಾರಂಟಿಗಳು. ಮನೆಯಲ್ಲಿ ಗಂಡನಿಂತ ಕಿತ್ತು, ಹೆಂಡ್ತಿಗೆ ಕೊಡುವ ಗ್ಯಾರಂಟಿ ಸ್ಕೀಂ. ಕಾಂಗ್ರೆಸ್ ಸರ್ಕಾರ ಕೇವಲ ಗ್ಯಾರಂಟಿಯನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿದೆ. ಬಿಜೆಪಿ ಅಭಿವೃದ್ಧಿ, ದೂರದೃಷ್ಟಿ, ದೇಶದ ಭದ್ರತೆ, ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಹೆಸರಿನಲ್ಲಿ ಚುನಾವಣೆ ಮಾಡುತ್ತಿದ್ದೇವೆ. ದೇಶದ ಅಭಿವೃದ್ಧಿ ದೃಷ್ಟಿಯಿಂದ ಮೂರನೇ ಬಾರಿಗೆ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡಲು ಶ್ರೀಮತಿ ಗಾಯಿತ್ರಿ ಸಿದ್ದೇಶ್ವರ್ ಅವರನ್ನು ಹೆಚ್ಚಿನ ಅಂತರದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ದಾವಣಗೆರೆ ನಗರದ ಬಿ.ಐ.ಇ.ಟಿ. ರಸ್ತೆಯ ವಸಂತ ಬೆಣ್ಣೆದೋಸೆ ಹೊಟೆಲ್, ಇಂಡಿಯನ್ ಕಾಫಿ ಬಾರ್, ಹೈಸ್ಕೂಲ್ ಮೈದಾನ, ಪಿ.ಬಿ. ರಸ್ತೆಯ ಹೂವಿನ ಮಾರುಕಟ್ಟೆ, ಜಗಳೂರು ವಿಧಾನಸಭಾ ಕ್ಷೇತ್ರ ಸೇರಿದಂತೆ ವಿವಿಧೆಡೆ ಗಾಯಿತ್ರಿ ಸಿದ್ದೇಶ್ವರ್ ಪರ ಮತಯಾಚನೆ ಮಾಡಿದರು.
ಮಾಜಿ ಸಚಿವರಾದ ಮರುಗೇಶ್ ನಿರಾಣಿ, ದೂಡಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ದೇವರಮನೆ ಶಿವಕುಮಾರ್, ಮುಖಂಡರಾದ ಜಯಪ್ರಕಾಶ್ ಕೊಂಡಜ್ಜಿ, ಮುರುಗೇಶ್ ಆರಾಧ್ಯ, ಕೊಳೆನಹಳ್ಳಿ ಸತೀಶ್ ಸೇರಿದಂತೆ ಅನೇಕ ಮುಖಂಡರು, ಕಾರ್ಯಕರ್ತರು ಜೊತೆಯಲ್ಲಿದ್ದರು.