ದಾವಣಗೆರೆ : ನಮ್ಮ ದೇಶ ಸುರಕ್ಷೆ, ಸುಭೀಕ್ಷೆಯಿಂದ ಇರಬೇಕು ಅಂದರೆ ದೇಶದ ಕೀಲಿ ಕೈ ಮೋದಿ ಜೀ ಅವರ ಕೈಗೆ ಕೊಡಬೇಕು. ಕೋಟ್ಯಂತರ ಭಾರತಿಯರಿಗೆ ಮೋದಿ ಜೀ ನಾಯಕ. ಆದರೆ, ಕಾಂಗ್ರೆಸ್ನ ಇಂಡಿಯಾ ಒಕ್ಕೂಟಕ್ಕೆ ನಾಯಕರೇ ಇಲ್ಲ. ಅಲ್ಲಿ ನಾನು ನಾಯಕ, ನಾನು ನಾಯಕ ಅಂತ ಕಚ್ಚಾಡಯತ್ತಿದ್ದಾರೆ. ಆದರೆ, ನಾವು ಮಾತ್ರ ಮೋದಿ ಜೀ ಅವರೇ ನಮ್ಮ ನಾಯಕ, ಅವರೇ ಮುಂದಿನ ಪ್ರಧಾನಿ ಎಂದು ಘಂಟಾಘೋಷವಾಗಿ ಹೇಳುತ್ತೇವೆ ಎಂದು ಸಂಸದೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.
ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಹರಪನಹಳ್ಳಿ, ಹೊನ್ನಾಳಿ, ಮಲೆಬೆನ್ನೂರು ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಪರ ಮತಯಾಚಿಸಿ ಮಾತನಾಡಿದ ಅವರು, ಇಡೀ ದೇಶದಲ್ಲಿ ಮೋದಿ ಅವರಿಗೆ ಎದುರಾಳಿ ನಾಯಕರೇ ಇಲ್ಲ. ಮೋದಿ ಅವರ ಆಡಳಿತವನ್ನು ಕಾಂಗ್ರೆಸ್ನ ಅದೆಷ್ಟೋ ನಾಯಕರು ಒಪ್ಪಿಕೊಂಡಿದ್ದಾರೆ. ಆದರೆ, ಅವರು ಬಹಿರಂಗವಾಗಿ ಹೇಳುತ್ತಿಲ್ಲ. ಈ ಬಾರಿ ದಾವಣಗೆರೆಯಲ್ಲಿ ಗಾಯತ್ರಿ ಸಿದ್ದೇಶ್ವರ್ ಅವರ ಗೆಲವು ಖಚಿತ, ಮೋದಿ ಜೀ ಪ್ರಧಾನಿ ಆಗುವುದು ನಿಶ್ಚಿತ ಎಂದರು.
ಕಾಂಗ್ರೆಸ್ ಉಚಿತ ವಿದ್ಯುತ್ ಕೊಡುತ್ತಿದ್ಧೇವೆ ಎಂದು ಹೇಳುತ್ತಿದ್ದಾರೆ. ಅದೇ ಕಾಂಗ್ರೆಸ್ ಆಳ್ವಿಯ 60 ವರ್ಷಗಳಲ್ಲಿ ಸಾವಿರಾರು ಹಳ್ಳಿಗಳಿಗೆ ವಿದ್ಯುತ್ ಸಂಪರ್ಕವೇ ಇರಲಿಲ್ಲ. ಅಂತಹ 28 ಸಾವಿರ ಹಳ್ಳಿಗಳಿಗೆ, ಮನೆ ಮನೆಗೂ ವಿದ್ಯುತ್ ಪೂರೈಕೆ ಮಾಡಿದ್ದು ನಮ್ಮ ಬಿಜೆಪಿ ಸರ್ಕಾರ. ಮೋದಿ ಅವರು ಅಧಿಕಾರಕ್ಕೆ ಬಂದ 10 ವರ್ಷಗಳಲ್ಲಿ ಸಾವಿರ ಹಳ್ಳಿಗಳಿಗೆ ವಿದ್ಯುತ್ ಪೂರೈಕೆ ಮಾಡಿದ್ದಾರೆ. ಅಷ್ಟೇ ಅಲ್ಲ ಜನರಿಗೆ ಕಡಿಮೆ ದರದಲ್ಲಿ ಔಷಧ ಲಭ್ಯವಾಗಬೇಕು ಎಂದು ಜನೌಷಧಿ ಕೇಂದ್ರ ಪ್ರಾರಂಭ ಮಾಡಿ 10 ರೂಪಾಯಿಗೆ ಸಿಗುತ್ತಿದ್ದ ಔಷಧ ಈಗ ಕೇವಲ 1 ರೂಪಾಯಿ ಸಿಗುವಂತೆ ಮಾಡಿದ್ದು ಇದೇ ಮೋದಿ ಜೀ ಅವರು ಎಂದರು.
60 ವರ್ಷಗಳ ಹಿಂದೆ ಎಷ್ಟು ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿ ಇತ್ತು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ 10 ವರ್ಷಗಳಲ್ಲಿ ಎಷ್ಟು ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿ ಆಗಿದೆ. ರೈಲ್ವೆ ಮಾರ್ಗ, ರೈಲುಗಳ ಉನ್ನತೀಕರಣ ಆಗಿದೆ. ಒಂದೇ ಭಾರತ್ ರೈಲು ಓಡಾಡುತ್ತಿದ್ದಾವೆ. ದೇಶದಲ್ಲಿ ಈ ಹಿಂದೆ 74 ಏರ್ಪೋರ್ಟ್ಗಳಿದ್ದವು, ನಾವು 10 ವರ್ಷದಲ್ಲೇ 74 ಏರ್ಪೋರ್ಟ್ ನಿರ್ಮಾಣ ಮಾಡಿದ್ದೇವೆ. ದೇಶದಲ್ಲಿ ಎಂಬಿಬಿಎಸ್ ಕೇವಲ 57 ಸಾವಿರ ಸೀಟುಗಳಿದ್ದವು, ನಾವು 10 ವರ್ಷದಲ್ಲೇ 1.57 ಲಕ್ಷ ಸೀಟ್ ಮಾಡಿ, 1 ಲಕ್ಷ ಸೀಟ್ ಹೆಚ್ಚಿಸಿದ್ದೇವೆ. ಏಮ್ಸ್, ಐಐಐಟಿ ಗಳ ಸಂಖ್ಯೆಯ ಗಣನೀಯವಾಗಿ ಹೆಚ್ಚಾಗಿದೆ. ಮೋದಿ ಜೀ ಅವರ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ಕೊಟ್ಟಿದ್ದಾರೆ. ಕಾಂಗ್ರೆಸ್ ಈ ದೇಶವನ್ನು 60 ವರ್ಷಗಳ ಕಾಲ ಲೂಟಿ ಮಾಡಿದೆ. ನಮ್ಮ ಮೋದಿ ನೇತೃತ್ವದ ಸರ್ಕಾರ 10 ವರ್ಷದಲ್ಲೇ ಇಡೀ ವಿಶ್ವವವೇ ತಿರುಗಿನೋಡುವಂತ ಅಭಿವೃದ್ಧಿ ಕೆಸಲ ಮಾಡಿದ್ದಾರೆ ಎಂದರು.
ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಜಿ.ಕರುಣಾಕರರೆಡ್ಡಿ ಮಾತನಾಡಿ, ನಾನು ಮತ್ತು ಸಿದ್ದೇಶಣ್ಣ ಹರಪನಹಳ್ಳಿ ತಾಲೂಕಿಗೆ ಸಾಕಷ್ಟು ಅನುದಾನ ತಂದಿದ್ಧೇವೆ. ಅದೇ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಇದುವರೆಗೂ ಹರಪನಹಳ್ಳಿಗೆ ಎಷ್ಟು ಬಾರಿ ಬಂದಿದ್ದಾರೆ. ಏನು ಅನುದಾನ ನೀಡಿದ್ದಾರೆ ತಾಕತ್ ಇದ್ದರೆ ಜನರ ಮುಂದಿಡಲಿ. ಇಷ್ಟು ದಿನ ಊರು ಸುತ್ತದವರು ಈಗ ಊರು ಸುತ್ತಿ ಸುತ್ತಿ ಅಭಿವೃದ್ಧಿ ಮಾಡುತ್ತೇನೆ ಎನ್ನುತ್ತಿದ್ದಾರೆ. ಇಂತಹವರನ್ನು ಜನ ದೂರ ಇಡಬೇಕು. ಹರಪನಹಳ್ಳಿ ತಾಲೂಕಿನಿಂದ ಗಾಯತ್ರಿ ಸಿದ್ದೇಶ್ವರ್ ಅಕ್ಕನಿಗೆ ಕನಿಷ್ಟ 1 ಲಕ್ಷ ಲೀಡ್ ನೀಡಿ ಗೆಲ್ಲಿಸಬೇಕು ಎಂದು ಕರೆ ನೀಡಿದರು.
ಮಂಡಲ ಅಧ್ಯಕ್ಷರು, ಗ್ರಾಮ ಪಂಚಾಯತಿ ಸದಸ್ಯರು, ಬಿಜೆಪಿಯ ಮುಖಂಡರು, ಗ್ರಾಮದ ಮುಖಂಡರು ಹಾಗೂ ಗ್ರಾಮದ ಬಿಜೆಪಿಯ ಕಾರ್ಯಕರ್ತರು, ಗ್ರಾಮ ಪಂಚಾಯತಿ ಸದಸ್ಯರು, ಜಿಲ್ಲಾ ಪಂಚಾಯತಿ ಸದಸ್ಯರು ಇದ್ದರು..
ಮೋದಿ ಜೀ ಅವರ 10 ವರ್ಷಗಳ ಆಡಳಿತ, ಸಿದ್ಧೇಶಣ್ಣನ 20 ವರ್ಷಗಳ ಅಭಿವೃದ್ಧಿ ಕೆಲಸಗಳು ನಮ್ಮ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್ ಅವರ ಗೆಲುವಿಗೆ ಶ್ರೀರಕ್ಷೆ. ನಾನು ಮತ್ತು ನಮ್ಮ ಕಾರ್ಯಕರ್ತರು ಗಾಯಿತ್ರಿ ಅಮ್ಮನ ಪರವಾಗಿ ಆಹೋರಾತ್ರಿ ಕೆಲಸ ಮಾಡುತ್ತಿದ್ದೇವೆ. ಇಡೀ ರಾಜ್ಯದಲ್ಲಿ ಅತೀ ಹೆಚ್ಚು ಲೀಡ್ಗಳಿಂದ ಗೆಲ್ಲುವ ಅಭ್ಯರ್ಥಿಯಾದರೂ ಇದ್ದರೆ ಅದು ಗಾಯಿತ್ರಿ ಸಿದ್ಧೇಶ್ವರ್ ಅವರೇ ಎಂಬುವುದರಲ್ಲಿ ಎರಡು ಮಾತಿಲ್ಲ.
| ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ
ಇಡೀ ಕ್ಷೇತ್ರದ ಜನ ನನ್ನನ್ನು ಮನೆ ಮಗಳಂತೆ ಆದರಸಿ, ಸ್ವಾಗತಿಸುತ್ತಿದ್ದಾರೆ. ಮತದಾನಕ್ಕೆ ಇನ್ನೂ 4 ದಿನ ಬಾಕಿ ಇದೆ. ನಾನು ಈಗಾಗಲೇ ಇಡೀ ಲೋಕಸಭಾ ಕ್ಷೇತ್ರ ಓಡಾಡಿದ್ದೇನೆ. ಎಲ್ಲಡೆ ಗೆಲುವಿನ ಮಡಿಲಕ್ಕಿ ತುಂಬಿ ಕಳುಹಿಸುತ್ತಿದ್ದಾರೆ. ಅವರ ಪ್ರೀತಿ ನೋಡಿದ್ರೆ ಕಣ್ಣು ಒದ್ದೆಯಾಗುತ್ತವೆ.
| ಗಾಯಿತ್ರಿ ಸಿದ್ದೇಶ್ವರ್, ಬಿಜೆಪಿ ಅಭ್ಯರ್ಥಿ
ಕೈ ಅಭ್ಯರ್ಥಿಗೆ ವಿನಯವಿಲ್ಲ
ಹೊನ್ನಾಳಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಕೇಂದ್ರ ಸಚಿವ ಶೋಭಾ ಕರಂದ್ಲಾಜೆ, ಈ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗೆ ವಿನಯವಿಲ್ಲ. ರಾಜಕೀಯಕ್ಕಾಗಿ ತಾಯಿ ಸಮಾನರಾದ ಗಾಯಿತ್ರಿ ಸಿದ್ದೇಶ್ವರ್ ಅವರ ವಿದ್ಯಾಭ್ಯಾಸದ ಬಗ್ಗೆ ಪ್ರಶ್ನಿಸಿದ್ದಾರೆ. ನಾನು ಈ ಸಂದರ್ಭದಲ್ಲಿ ಕೈ ಅಭ್ಯರ್ಥಿಗೆ ಕೇಳುವುದಕ್ಕೆ ಇಷ್ಟ ಪಡ್ತಿನಿ, ಅವರ ಮಾವನ ಶಾಮನೂರು ಶಿವಶಂಕರಪ್ಪ ಅವರ ವಿದ್ಯಾಭ್ಯಾಸ ಏನು….? ಕೈ ಅಭ್ಯರ್ಥಿಯ ತಾಯಿಯ ವಿದ್ಯಾಭ್ಯಾಸ ಏನು…? ಅವರೆಲ್ಲ ಪಿಎಚ್ಡಿ ಮಾಡಿ ಇವರನ್ನು ಬೆಳಸಿದ್ದಾರೆಯೇ.. ವಿದ್ಯಾಭ್ಯಾಸ ಎನ್ನುವುದ ಒಂದು ಅಂಕಪಟ್ಟಿಗೆ ಸೀಮಿತ. ಸೋಲುತ್ತೇನೆ ಎಂಬ ಹತಾಶೆಯಿಂದ ಬಾಯಿಗೆ ಬಂದ ಹಾಗೆ ಮಾತನಾಡುವುದನ್ನು ಬಿಡಬೇಕು. ನಿಮ್ಮ ಕುಟುಂಬದ ಅಹಂಕಾರಕ್ಕೆ ಈ ಲೋಕಸಭಾ ಕ್ಷೇತ್ರದ ಜನ 6 ಬಾರಿ ಉತ್ತರ ನೀಡಿದ್ದಾರೆ. ಈ ಬಾರಿಯೂ ಕ್ಷೇತ್ರದ ಜನ ತಕ್ಕ ಉತ್ತರ ನೀಡಲಿದ್ಧಾರೆ.