ದಾವಣಗೆರೆ : ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್ ಹಾಗೂ ಕುಟುಂಬಸ್ಥರು ಪ್ರಜಾಪ್ರಭುತ್ವದ ಬಹುದೊಡ್ಡ ಹಬ್ಬ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಮತ ಚಲಾಯಿಸಿದರು. ನಗರದ ತರಳಬಾಳು ಬಡಾವಣೆಯ ಮಾಗನೂರು ಬಸಪ್ಪ ಶಾಲೆಯ ಮತಗಟ್ಟೆ ಸಂಖ್ಯೆ 236 ರಲ್ಲಿ ಕುಟುಂಬ ಸಮೇತ ಮತದಾನ ಮಾಡಿದರು.
ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್, ಪತಿ ಸಂಸದ ಜಿ.ಎಂ.ಸಿದ್ದೇಶ್ವರ್, ಪುತ್ರಿ ಜಿ.ಎಸ್.ಅಶ್ವಿನಿ, ಪುತ್ರ ಜಿ.ಎಸ್.ಅನಿತ್ ಕುಮಾರ್ ಜೊತೆಯಲ್ಲಿ ಆಗಮಿಸಿ ಸರಥಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಎಲ್ಲೆಡೆ ಉತ್ತಮ ವಾತಾವರಣ ಇದೆ. ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸ ಇದೆ. ನಮ್ಮ ಗೆಲುವು ನಿಶ್ಚಿತ ಎಂದರು.
ಸಂಸದ ಜಿ.ಎಂ.ಸಿದ್ದೇಶ್ವರ್ ಮಾತನಾಡಿ, ಇಡೀ ಕ್ಷೇತ್ರದಲ್ಲಿ ಜನ ಉತ್ಸಾಹದಿಂದ ಮತ ಚಲಾಯಿಸುತ್ತಿದ್ದಾರೆ. ಕ್ಷೇತ್ರದ ಜನ 6 ಬಾರಿ ನಮ್ಮ ಕುಟುಂಬಕ್ಕೆ ಆಶೀರ್ವಾದ ಮಾಡಿದ್ದಾರೆ. ಈ ಬಾರಿಯೂ ನನ್ನ ಪತ್ನಿ ಶ್ರೀಮತಿ ಗಾಯಿತ್ರಿ ಸಿದ್ದೇಶ್ವರ್ಗೆ ಆಶೀರ್ವಾದ ಮಾಡುವ ವಿಶ್ವಾಸ ಇದೆ. ನಾವು ಇಷ್ಟು ವರ್ಷ ಮಾಡಿರುವ ಅಭಿವೃದ್ಧಿ ಕೆಲಸಗಳೇ ನಮಗೆ ಶ್ರೀರಕ್ಷೆ. ಜನ ಅಭಿವೃದ್ಧಿ, ದೇಶದಕ ಸುರಕ್ಷತೆ ದೃಷ್ಟಿಯಿಂದ ಗಾಯಿತ್ರಿ ಸಿದ್ದೇಶ್ವರ್ ಅವರನ್ನು ಈ ಹಿಂದಿಗಿಂತಲೂ ಅತಿ ಹೆಚ್ಚು ಮತಗಳಿಂದ ಆರಿಸಿ ದೆಹಲಿಗೆ ಕಳುಹಿಸುತ್ತಾರೆ. ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ.. ಗಾಯಿತ್ರಿ ಸಿದ್ದೇಶ್ವರ್ ಅವರು ಗೆಲ್ಲುವುದು ಅಷ್ಟೇ ಸತ್ಯ ಎಂದರು.
ಸಂಸದ ಜಿ.ಎಂ.ಸಿದ್ದೇಶ್ವರ್ ಅವರ ಮೊಮ್ಮಕ್ಕಳು ಹೊರ ದೇಶದಿಂದ ಬಂದು ಮತ ಚಲಾಯಿಸಿ ಖುಷಿ ಹಂಚಿಕೊಂಡರು.