ಮುಂಗಾರು ಹಂಗಾಮಿನ ಫಸಲ್ ಬಿಮಾ ಯೋಜನೆಯಡಿ ಬೆಳೆ ಕಟಾವು ಪ್ರಾಯೋಗಿಕ ಪರೀಕ್ಷೆಯಲ್ಲಿ ಕೆಲವು ವ್ಯತ್ಯಾಸಗಳಾಗಿದ್ದು ಇವುಗಳನ್ನು ಸರಿಪಡಿಸಿ ರೈತರಿಗೆ ಬೆಳೆ ವಿಮಾ ಪರಿಹಾರ ಒದಗಿಸಬೇಕೆಂದು ಜಿಲ್ಲಾಧಿಕಾರಿ ಡಾ: ವೆಂಕಟೇಶ್ ಎಂ.ವಿ ತಿಳಿಸಿದರು.
ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೃಷಿ ವಿಮಾ ಕಂಪನಿ ಅಧಿಕಾರಿಗಳು, ಕೃಷಿ ಅಧಿಕಾರಿಗಳು ಹಾಗೂ ಸಾಂಖ್ಯಿಕ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಂಗಾರು ಹಂಗಾಮಿನಲ್ಲಿ ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮಾ ಕಂತು ಪಾವತಿಸಿದ ರೈತರಿಗೆ ವಿಮಾ ಪರಿಹಾರ ನೀಡಲು ಜಿಲ್ಲೆಯಲ್ಲಿ 40 ಬೆಳೆ ಕಟಾವು ಪರೀಕ್ಷೆ ನಡೆಸಲಾಗಿದ್ದು ಇದರಲ್ಲಿ 17 ಕಡೆ ಮಾಡಿದ ಬೆಳೆ ಕಟಾವು ಪ್ರಾಯೋಗಿಕ ಪರೀಕ್ಷೆ ನಡೆಸಿ ಅಪ್‍ಲೋಡ್ ಮಾಡಿದ ಕೆಲವು ವೀಡಿಯೋಗಳಲ್ಲಿನ ಅಂಶಗಳ ಬಗ್ಗೆ ವಿಮಾ ಕಂಪನಿಯ ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದು ಇವುಗಳ ಬಗ್ಗೆ ಪರಿಶೀಲನೆ ನಡೆಸಿ ಇತ್ಯರ್ಥ ಮಾಡಲಾಯಿತು.
 ಕೆಲವೊಂದು ಪ್ರಯೋಗಗಳಲ್ಲಿ ನಿಗದಿತ ಸರ್ವೆ ನಂಬರ್ ಬದಲಾಗಿ ಬೇರೆ ಸರ್ವೆ ನಂಬರ್‍ನಲ್ಲಿ ಬೆಳೆ ಕಟಾವು ಪರೀಕ್ಷೆಗಳನ್ನು ಮಾಡಲಾಗಿದ್ದು ಇದು ಮಳೆಯಾಶ್ರಿತ ಅಥವಾ ನೀರಾವರಿ ಆಶ್ರಿತವೋ ಎಂಬ ಬಗ್ಗೆ ವಿಮಾ ಕಂಪನಿ ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದಾಗ ನೀರಾವರಿ ಅಧಿಸೂಚಿತ ಪ್ರದೇಶವಲ್ಲ ಎಂದು ಸ್ಪಷ್ಟಪಡಿಸಿ ಜಿಲ್ಲೆಯಲ್ಲಿ ಶೇ 70 ಕ್ಕಿಂತ ಅಧಿಕ ಮಳೆಯ ಕೊರತೆಯಾಗಿದ್ದು ಶತಮಾನದಲ್ಲಿಯೇ ಅತ್ಯಂತ ಭೀಕರ ಬರಗಾಲವಾಗಿರುತ್ತದೆ. ಆಗಸ್ಟ್‍ನಲ್ಲಿ ಎಷ್ಟು ಮಳೆ ಬರಬೇಕಾಗಿತ್ತು, ಅದರಲ್ಲಿ ತೀವ್ರ ಕೊರತೆ ಉಂಟಾಗಿದ್ದರಿಂದ ಜಿಲ್ಲೆಯಾದ್ಯಂತ ಬೆಳೆಹಾನಿಯಾಗಿರುತ್ತದೆ ಎಂದು ಜಿಲ್ಲಾಧಿಕಾರಿಯವರು ವಿಮಾ ಕಂಪನಿಯ ಅಧಿಕಾರಿಗಳಿಗೆ ಸ್ಪಷ್ಟಪಡಿಸಿ ರೈತರ ಹಿತದೃಷ್ಟಿಯಿಂದ ರೈತರ ಪರವಾಗಿ ಎಲ್ಲರೂ ಕೆಲಸ ಮಾಡಬೇಕೆಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಅಪರ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ್ ಭಾನು ಎಸ್.ಬಳ್ಳಾರಿ, ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್, ವಿಮಾ ಕಂಪನಿ ವಲಯಾಧಿಕಾರಿ ಕೃಷ್ಣರಾಜ, ಸಾಂಖ್ಯಿಕ ಅಧಿಕಾರಿ ನೀಲಾ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *