ದಾವಣಗೆರೆ; ಜೂನ್.1; ದಾವಣಗೆರೆ ಲೋಕಸಭಾ ಕ್ಷೇತ್ರದ ಮತ ಎಣಿಕೆಯು ಜೂನ್ 4 ರಂದು ಬೆಳಗ್ಗೆ 8 ಗಂಟೆಯಿಂದ ದಾವಣಗೆರೆ ವಿಶ್ವವಿದ್ಯಾನಿಲಯದ ಶಿವಗಂಗೋತ್ರಿಯಲ್ಲಿ ನಡೆಯಲಿದ್ದು ಎಣಿಕೆ ಸಿಬ್ಬಂದಿಗಳ ಎರಡನೇ ರ್ಯಾಂಡಮೈಜೇಷನ್ನ್ನು ಚುನಾವಣಾ ಸಾಮಾನ್ಯ ವೀಕ್ಷಕರಾದ ಎಂ.ಲಕ್ಷ್ಮಿ ಇವರ ಸಮ್ಮುಖದಲ್ಲಿ ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಡಾ: ವೆಂಕಟೇಶ್ ಎಂ.ವಿ ಅವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೈಗೊಂಡರು.
ದಾವಣಗೆರೆ ಲೋಕಸಭಾ ಕ್ಷೇತ್ರ 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದು ಪ್ರತಿ ಕ್ಷೇತ್ರದಲ್ಲಿ 14 ಟೇಬಲ್ಗಳಲ್ಲಿ ಎಣಿಕೆ ನಡೆಯಲಿದೆ. ಎಣಿಕೆಗಾಗಿ ಮೈಕ್ರೋ ಅಬ್ಸರ್ವರ್, ಎಣಿಕೆ ವೀಕ್ಷಕರು, ಎಣಿಕೆ ಸಹಾಯಕರು ಇರುತ್ತಾರೆ. ಎರಡನೇ ರ್ಯಾಂಡಮೈಜೇಷನ್ನಲ್ಲಿ ಎಣಿಕೆ ತಂಡವನ್ನು ರಚಿಸಿ ಯಾವ ವಿಧಾನಸಭಾ ಕ್ಷೇತ್ರ ಎಂದು ಗೊತ್ತುಪಡಿಸುವುದು ಈ ಪ್ರಕ್ರಿಯೆಯಾಗಿರುತ್ತದೆ. ಮತ ಎಣಿಕೆ ದಿನ ಬೆಳಗ್ಗೆ 6 ಗಂಟೆಗೆ ಮೂರನೇ ರ್ಯಾಂಡಮೈಜೇಷನ್ನಲ್ಲಿ ಯಾವ ಟೇಬಲ್ಗೆ ಯಾವ ಎಣಿಕೆ ತಂಡ ಹೋಗಲಿದೆ ಎಂದು ಜೂನ್ 4 ರಂದು ನಿರ್ಧಾರವಾಗಲಿದೆ.
ಪ್ರತಿ ಕ್ಷೇತ್ರದಲ್ಲಿ 14 ಎಣಿಕೆ ಟೇಬಲ್ಗಳಿದ್ದು ಹೆಚ್ಚುವರಿಯಾಗಿ 3 ಎಣಿಕೆ ತಂಡಗಳನ್ನು ಕಾಯ್ದಿರಿಸಲಿದ್ದು ಒಟ್ಟು 17 ಎಣಿಕೆ ತಂಡಗಳನ್ನು ಆಯ್ಕೆ ಮಾಡಲಾಗಿರುತ್ತದೆ. ಹಾಗೂ ಅಂಚೆ ಮತಪತ್ರ ಎಣಿಕೆಗಾಗಿ ಹೆಚ್ಚುವರಿ ಸೇರಿ 14 ಎಣಿಕೆ ತಂಡಗಳನ್ನು ರಚಿಸಲಾಗಿದ್ದು 12 ಟೇಬಲ್ಗಳಲ್ಲಿ ಅಂಚೆ ಮತಎಣಿಕೆ ನಡೆಯಲಿದೆ.
ಅಪರ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ್ ಭಾನು ಎಸ್.ಬಳ್ಳಾರಿ, ಎನ್.ಐ.ಸಿ ರಮೇಶ್ ಉಪಸ್ಥಿತರಿದ್ದರು.