ದಾವಣಗೆರೆ,ಜುಲೈ.11) ಚಿಗಟೇರಿ ಜಿಲ್ಲಾ ಆಸ್ಪತ್ರೆ 400 ಬೆಡ್ ಸಾಮಥ್ರ್ಯದ ಸಿಬ್ಬಂದಿ ಇದ್ದರೂ 930 ಬೆಡ್‍ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು ಇಲ್ಲಿನ ಕಟ್ಟಡ ಹಳೆಯದಾಗುತ್ತಿದೆ. ಹಳೆ ಕಟ್ಟಡದ ಮಾದರಿಯಲ್ಲಿಯೇ ಶಿಥಿಲವಾದ ಕಟ್ಟಡ ತೆರವು ಮಾಡಿ ಹಂತ ಹಂತವಾಗಿ ಹೊಸ ಕಟ್ಟಡ ನಿರ್ಮಾಣ ಮಾಡಲು ಪ್ರಸ್ತುತ ದಕ್ಷಿಣ ಬ್ಲಾಕ್ ತೆರವು ಮಾಡಿ ಹೊಸ ಕಟ್ಟಡ ನಿರ್ಮಾಣಕ್ಕೆ ರೂ. 20 ಕೋಟಿ ಬಿಡುಗಡೆ ಮಾಡಲಾಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ತಿಳಿಸಿದರು.
ಅವರು ಗುರುವಾರ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್, ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ ಹಾಗೂ ಶಾಸಕರೊಂದಿಗೆ ಚಿಗಟೇರಿ ಆಸ್ಪತ್ತೆಗೆ ಭೇಟಿ ನೀಡಿ ಶಿಥಿಲಗೊಂಡಿರುವ ಕಟ್ಟಡ, ತುರ್ತು ಚಿಕಿತ್ಸಾ ಘಟಕ, ತೀವ್ರ ನಿಗಾ ಘಟಕ, ತುರ್ತು ಚಿಕಿತ್ಸಾ ವಿಭಾಗ, ಡಯಾಲಿಸೀಸ್ ಕೇಂದ್ರ, ಶಸ್ತ್ರ ಚಿಕಿತ್ಸಾ ಕೊಠಡಿ, ವಾರ್ಡ್‍ಗಳನ್ನು ಪರಿಶೀಲನೆ ನಡೆಸಿ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದರು.
ಈಗಿರುವ ಆಸ್ಪತ್ರೆಯ ಕಟ್ಟಡ ಹಳೆಯದಾಗಿದ್ದು ಅಲ್ಲಲ್ಲಿ ಶಿಥಿಲವಾಗುತ್ತಿದೆ, ಕಟ್ಟಡವನ್ನು ಬಹಳ ವೈಜ್ಞಾನಿಕವಾಗಿ ನಿರ್ಮಾಣ ಮಾಡಿದ್ದು ಎಲ್ಲಾ ಕಟ್ಟಡ ತೆರವು ಮಾಡಿ ಹೊಸ ಕಟ್ಟಡ ನಿರ್ಮಾಣ ಮಾಡಲು ಅಂದಾಜು 100 ಕೋಟಿಗಿಂತಲೂ ಹೆಚ್ಚು ಅನುದಾನ ಬೇಕಾಗುತ್ತದೆ. ಆದ್ದರಿಂದ ಅಗತ್ಯವಿರುವ ಬ್ಲಾಕ್‍ಗಳನ್ನು ಹಂತ ಹಂತವಾಗಿ ತೆರವು ಮಾಡುವ ಮೂಲಕ ಇದೇ ಮಾದರಿಯಲ್ಲಿ ನೂತನ ಕಟ್ಟಡ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಮೊದಲ ಹಂತವಾಗಿ ದಕ್ಷಿಣ ಭಾಗದಲ್ಲಿನ ಬ್ಲಾಕ್ ತೆರವು ಮಾಡಿ ಇದೇ ಜಾಗದಲ್ಲಿ ಹೊಸ ಕಟ್ಟಡ ನಿರ್ಮಾಣ ಮಾಡಲು ರೂ.20 ಕೋಟಿ ಅನುದಾನ ನೀಡಲಾಗುತ್ತದೆ. ಇದರಲ್ಲಿ ಮಾದರಿ ಶಸ್ತ್ರ ಚಿಕಿತ್ಸಾ ಕೊಠಡಿಗಳು ಸೇರಲಿವೆ ಎಂದರು.
ಇಲ್ಲಿನ ಆಸ್ಪತ್ರೆಗೆ ಇತರೆ ಜಿಲ್ಲೆಗಳಿಂದಲೂ ರೆಫರಲ್ ಆಗಿ ಹೆರಿಗೆಗಾಗಿ ಬರುತ್ತಿದ್ದು ತಿಂಗಳಿಗೆ 600 ರಿಂದ 700 ರಷ್ಟು ಹೆರಿಗೆಯಾಗುತ್ತಿದೆ. ಮತ್ತು ನವಜಾತ ಶಿಶುಗಳು ಹಾಗೂ ಮಕ್ಕಳ ಚಿಕಿತ್ಸೆಗಾಗಿ ಹೆಚ್ಚು ಜನರು ಆಗಮಿಸುತ್ತಿರುವುದರಿಂದ ಈಗಿರುವ ಸ್ಥಳಾವಕಾಶ ಸಾಕಾಗುವುದಿಲ್ಲ. ಈಗಾಗಲೇ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣವಾಗಿದ್ದು ಒಂದು ವಾರದಲ್ಲಿ ಅಲ್ಲಿಗೆ ಸ್ಥಳಾಂತರಿಸಲು ತಿಳಿಸಿ ವಾರದಲ್ಲಿ ಟ್ರಾಮಾ ಕೇರ್ ಸೆಂಟರ್ ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನೆ ಮಾಡಲಾಗುತ್ತದೆ ಎಂದರು.
ಇಲ್ಲಿಗೆ ಎಂಆರ್‍ಐ ಸ್ಕ್ಯಾನ್ ಬೇಕೆಂದು ಬೇಡಿಕೆ ಇದ್ದು ಇನ್ನೆರಡು ತಿಂಗಳಲ್ಲಿ ನೀಡಲಾಗುತ್ತದೆ. ಶವಾಗಾರ ಸೇರಿದಂತೆ ಒಳಚರಂಡಿ, ಓವರ್‍ಹೆಡ್ ಟ್ಯಾಂಕ್, ಸೇರಿದಂತೆ ಮಕ್ಕಳ ನಿಗಾ ಘಟಕಕ್ಕೆ ವೆಂಟಿಲೇಟರ್, ಆರ್ಥೋ ವಿಭಾಗಕ್ಕೆ ಮಾದರಿ ಓಟಿ ಬೇಕೆಂದು ಸರ್ಜನ್ ಮನವಿ ಮಾಡಿದರು. ಆಸ್ಪತ್ರೆಯ ಬಳಕೆ ಅನುದಾನ ಮತ್ತು ಎಬಿಆರ್‍ಕೆ ಯಡಿ ಬರುವ ಅನುದಾನವನ್ನು ಆರೋಗ್ಯ ರಕ್ಷಾ ಸಮಿತಿಯಲ್ಲಿ ಅನುಮೋದನೆ ಪಡೆದು ಜಿಲ್ಲಾಧಿಕಾರಿಯವರಿಂದ ಮಂಜೂರಾತಿ ಪಡೆದು ಆಸ್ಪತ್ರೆಗೆ ಅಗತ್ಯವಿರುವ ಸೌಲಭ್ಯ ಕಲ್ಪಿಸಲು ಸರ್ಜನ್ ತಿಳಿಸಿ ಯೂಸರ್ ಫಂಡ್ ಮತ್ತು ಎಬಿಆರ್‍ಕೆಯಡಿ 5 ಕೋಟಿಯಷ್ಟು ಅನುದಾನವಿದ್ದು ಇದನ್ನು ವೆಚ್ಚ ಮಾಡಿ ಜನರಿಗೆ ಆರೋಗ್ಯ ಸೌಲಭ್ಯ ಕಲ್ಪಿಸಲು ತಿಳಿಸಿದರು.
24 ಗಂಟೆ ಫಾರ್ಮಸಿ ಓಪನ್‍ಗೆ ಸೂಚನೆ; ಆಸ್ಪತ್ರೆಗೆ ಬೇಕಾದ ಔಷಧಗಳನ್ನು ಬಳಕೆ ಅನುದಾನ ಮತ್ತು ಎಬಿಆರ್‍ಕೆಯಡಿ ಖರೀದಿ ಜೊತೆಗೆ ಅರೋಗ್ಯ ಇಲಾಖೆ ಉಗ್ರಾಣದಿಂದಲೂ ಔಷಧ ಪೂರೈಕೆ ಮಾಡಲಾಗುತ್ತಿದೆ. ಆಸ್ಪತ್ರೆಯಲ್ಲಿನ ಫಾರ್ಮಸಿ ದಿನದ 24 ಗಂಟೆಯು ತೆರೆದಿರುವ ಮೂಲಕ ಹೊರಗಡೆ ಚೀಟಿ ಬರೆಯವುದನ್ನು ತಪ್ಪಿಸಬೇಕೆಂದು ಸೂಚನೆ ನೀಡಿದರು.
ಶಸ್ತ್ರ ಚಿಕಿತ್ಸೆ ಹೆಚ್ಚಿಸಿ, ಆದಾಯ ಹೆಚ್ಚಿಸಿ ಸೌಕರ್ಯ ಪಡೆಯಿರಿ; ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಎಲ್ಲಾ ವಿದವಾದ ತಜ್ಞ ವೈದ್ಯರ ಜೊತೆಗೆ ಮೆಡಿಕಲ್ ಕಾಲೇಜ್ ತಜ್ಞ ವೈದ್ಯರು ಲಭ್ಯವಾಗುವುದರಿಂದ ಇಲ್ಲಿ ವಿನೂತನವಾದ ಶಸ್ತ್ರ ಚಿಕಿತ್ಸೆಗಳನ್ನು ಕೈಗೊಳ್ಳುವ ಅವಕಾಶ ಇದೆ. ಆರ್ಥೋ ವಿಭಾಗದಲ್ಲಿ ಎಲ್ಲಾ ಬಗೆಯ ಶಸ್ತ್ರ ಚಿಕಿತ್ಸೆ ಮಾಡಬಹುದು ಮತ್ತು ನೇತ್ರ ಚಿಕಿತ್ಸಾ ವಿಭಾಗದಲ್ಲಿಯು ರೆಟಿನಾ ಶಸ್ತ್ರ ಚಿಕಿತ್ಸೆಯನ್ನು ಇಲ್ಲಿ ಕೈಗೊಳ್ಳುವಂತಾಗಬೇಕು. ಇದರಿಂದ ಎಬಿಆರ್‍ಕೆಯಡಿ ಹೆಚ್ಚು ಅನುದಾನ ಲಭ್ಯವಾಗುವುದರಿಂದ ಆಸ್ಪತ್ರೆಯ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗಲಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಮಾತನಾಡಿ ಆಸ್ಪತ್ರೆಗೆ ಬೇಕಾದ ಓವರ್‍ಹೆಡ್ ಟ್ಯಾಂಕ್ ಮತ್ತು ಆಸ್ಪತ್ರೆಯೊಳಗೆ ಪ್ರಮುಖ ರಸ್ತೆಗಳನ್ನು ಪಾಲಿಕೆ ಅಥವಾ ಇತರೆ ಸರ್ಕಾರದ ಯೋಜನೆಯಲ್ಲಿ ಕೈಗೊಳ್ಳಲಾಗುತ್ತದೆ. ಆಸ್ಪತ್ರೆಯ ಮೂಲಭೂತ ಸೌಕರ್ಯಕ್ಕಾಗಿ ಈಗಿರುವ 7 ಕೋಟಿಯನ್ನು ಇತರೆ ಸೌಲಭ್ಯಗಳಿಗಾಗಿ ಬಳಕೆ ಮಾಡಿಕೊಳ್ಳಲಾಗುತ್ತದೆ. ಚಿಗಟೇರಿ ಆಸ್ಪತ್ರೆ ಎಲ್ಲಾ ಮೂಲಭೂತ ಸೌಕರ್ಯ ಕಲ್ಪಿಸಲು ತಕ್ಷಣದ ಕ್ರಮವಾಗಿ ಅಂದಾಜು 50 ಕೋಟಿ ಅಗತ್ಯವಾಗಿದ್ದು ಈ ಅನುದಾನವನ್ನು ಸರ್ಕಾರದಿಂದ ತಂದು ದಾವಣಗೆರೆ ಜನರಿಗೆ ಆರೋಗ್ಯ ಸೌಕರ್ಯ ಕಲ್ಪಿಸಲಾಗುತ್ತದೆ ಎಂದರು.
ಇನ್ನೊಂದು ವಾರದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ಉದ್ಘಾಟನೆ ಮಾಡುವ ಮೂಲಕ ಜನರಿಗೆ ಇನ್ನಷ್ಟು ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ ಎಂದರು.
ಸಭೆಯಲ್ಲಿ ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್, ಶಾಸಕರಾದ ಕೆ.ಎಸ್.ಬಸವಂತಪ್ಪ, ದೇವೇಂದ್ರಪ್ಪ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರಾದ ಡಾ; ರಂದೀಪ್, ಎನ್‍ಹೆಚ್‍ಎಂ ಯೋಜನಾ ನಿರ್ದೇಶಕರಾದ ಡಾ; ನವೀನ್ ಭಟ್ ಪೈ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ; ಷಣ್ಮುಖಪ್ಪ, ಜಿಲ್ಲಾ ಸರ್ಜನ್ ಡಾ; ನಾಗೇಂದ್ರಪ್ಪ ಹಾಗೂ ಚಿಗಟೇರಿ ಆಸ್ಪತ್ರೆ ವೈದ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *