ನ್ಯಾಮತಿ: ಗೋವಿನಕೋವಿ ಗ್ರಾಮದ ಗಂಗಾಮತಸ್ಥ ಸಮುದಾಯದವರು(ಬೆಸ್ತರು) ಶುಕ್ರವಾರ ತುಂಬಿ ಹರಿಯುತ್ತಿರುವ ತುಂಗಭದ್ರ ನದಿಯಲ್ಲಿ ಅಷಾಡ ಮಾಸದ ಗಂಗೆ ಪೂಜೆಯನ್ನು ಶ್ರದ್ದಾಭಕ್ತಿಗಳಿಂದ ನೆರವೇರಿಸಿದರು.
ಸಮುದಾಯದವರು ಬೆಳಿಗ್ಗೆ ಗಂಗಾನದಿ ಬಳಿ ಗಂಗೆಪೂಜೆ ನೆರವೇರಿಸಿ ನಂತರ ಗಂಗೆ ಪೂಜೆ ನೆರವೇರಿಸಿದ ತುಂಬಿದ ಕೊಡಗಳನ್ನು ಗ್ರಾಮಕ್ಕೆ ತಂದು ಮಂಟಪದಲ್ಲಿ ಪ್ರತಿಷ್ಠಾಪಿಸಿ, ಗ್ರಾಮದ ಗಂಗಮತಸ್ಥ ಸಮುದಾಯದವರು ಗಂಗೆ ತುಂಬಿದ ಕೊಡಗಳಿಗೆ ಹಾಗೂ ನರಸಿಂಹಸ್ವಾಮಿ ದೇವರಿಗೆ ಪೂಜೆ ನೆರವೇರಿಸಿ, ಪ್ರತಿಯೊಬ್ಬರ ಮನೆಯಿಂದ ತಯಾರಿಸಿದ ಹೋಳಿಗೆ, ಬಾಳೆಹಣ್ಣು, ತುಪ್ಪದ ಎಡೆಯನ್ನು ನೈವೇದ್ಯ ಮಾಡಿ, ನಾಡಿನಲ್ಲಿ ಉತ್ತಮ ಮಳೆ-ಬೆಳೆ ಆಗಲಿ, ಗ್ರಾಮದಲ್ಲಿ ಶಾಂತಿ ನೆಲಸಲಿ ಎಂದು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸುತ್ತೇವೆ. ಇದು ನಮ್ಮ ಪೂರ್ವಜರ ಕಾಲದಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ ಎಂದು ಆರ್ಚಕ ರಂಗಪ್ಪ, ಆರ್.ನರಸಿಂಹಪ್ಪ, ಮಂಜುನಾಥ, ಕವಿತಾ,ರೂಪಾ, ಗೌರಮ್ಮ ಭಾಗ್ಯಜ್ಯೋತಿ ಮತ್ತು ಅರ್ಪಿತಾ ಹೇಳುತ್ತಾರೆ.