ದಾವಣಗೆರೆ,ಜುಲೈ.16 ದಾವಣಗೆರೆ ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ 916, ನಗರದಲ್ಲಿ 20 ಸೇರಿದಂತೆ 936 ನಾಗರಿಕ ನೊಂದಣಿ ಜನನ, ಮರಣ ನೊಂದಣಿ ಘಟಕಗಳಿದ್ದು ಜಿಲ್ಲೆಯಲ್ಲಿ 15.30 ಜನನ ಹಾಗೂ 7.66 ಮರಣ ದರ ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು.
ಅವರು ಜುಲೈ 16 ರ ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ನಾಗರಿಕ ನೊಂದಣಿ ಪದ್ದತಿಯ ಸಮನ್ವಯ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜನನ ದರವು ಪ್ರತಿ ಸಾವಿರ ಜನಸಂಖ್ಯೆಗೆ 15.30 ಮತ್ತು ಮರಣ ಪ್ರಮಾಣ ಪ್ರತಿ ಸಾವಿರ ಜನಸಂಖ್ಯೆಗೆ 7.66 ರಷ್ಟು ದರವಿದೆ. 2024 ರ ಜನವರಿಯಿಂದ ಜೂನ್ ವರೆಗೆ 7367 ಗಂಡು, 6920 ಹೆಣ್ಣು ಹಾಗೂ 1 ತೃತೀಯ ಲಿಂಗ ಸೇರಿ 14288 ಜನನ ಪ್ರಕರಣ ನೊಂದಣಿಯಾಗಿದೆ. ಮತ್ತು ಇದೇ ಅವಧಿಯಲ್ಲಿ 4541 ಗಂಡು, 3448 ಹೆಣ್ಣು ಹಾಗೂ 1 ತೃತೀಯ ಲಿಂಗ ಸೇರಿ 7990 ಮರಣ ಪ್ರಕರಣಗಳು ಸಂಭವಿಸಿವೆ. ಮತ್ತು 2024 ರ ಜನವರಿಯಿಂದ ಜೂನ್ ಅಂತ್ಯದವರೆಗೆ ತಡವಾಗಿ ನೊಂದಾಯಿಸಿದ ಜನನ ಪ್ರಕರಣಗಳಲ್ಲಿ 1565 ಗಂಡು, 1458 ಹೆಣ್ಣು ಸೇರಿ 3023, ಮರಣ ಪ್ರಕರಣಗಳಲ್ಲಿ 1781 ಗಂಡು, 1535 ಹೆಣ್ಣು ಸೇರಿ 3316 ನೊಂದಣಿ ಮಾಡಲಾಗಿದೆ.
ಗ್ರಾಮಾಂತರ ಪ್ರದೇಶದಲ್ಲಿ ನಾಗರಿಕ ನೊಂದಣಿ ಪದ್ದತಿಯಡಿ ಜುಲೈ 1 ರಿಂದ ಗ್ರಾಮ ಮಟ್ಟದಲ್ಲಿ ನೊಂದಣಾಧಿಕಾರಿಯಾಗಿ ಗ್ರಾಮ ಆಡಳಿತಾಧಿಕಾರಿಗಳು, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಉಪ ನೊಂದಣಾಧಿಕಾರಿಯಾಗಿರುತ್ತಾರೆ. 30 ದಿನಗಳೊಳಗಾಗಿ ಜನನ, ಮರಣ ಪ್ರಕರಣಗಳಲ್ಲಿ ನೊಂದಣಿ ಮಾಡಿ ಪ್ರಮಾಣ ಪತ್ರವನ್ನು ಸಾರ್ವಜನಿಕರಿಗೆ ನೀಡಲು ಅಧಿಕಾರ ನೀಡಲಾಗಿದೆ.
ಮತ್ತು ಮಹಾನಗರ ಪಾಲಿಕೆ, ನಗರಪಾಲಿಕೆ, ನಗರಸಭೆ ವ್ಯಾಪ್ತಿಯಲ್ಲಿ ಸ್ಥಳೀಯ ಸಂಸ್ಥೆಗಳ ಆರೋಗ್ಯಾಧಿಕಾರಿಗಳು, ಪುರಸಭೆ ವ್ಯಾಪ್ತಿಯಲ್ಲಿ ಆರೋಗ್ಯ ನಿರೀಕ್ಷಕರು ನೊಂದಣಾಧಿಕಾರಿಗಳಾಗಿರುತ್ತಾರೆ. ಗ್ರಾಮೀಣ ಪ್ರದೇಶದ ಸರ್ಕಾರಿ ಸಂಸ್ಥೆಯ ವೈದ್ಯಾಧಿಕಾರಿಗಳು ಉಪ ನೊಂದಣಾಧಿಕಾರಿಗಳಾಗಿರುತ್ತಾರೆ. ನಗರ, ಪಟ್ಟಣ ಪ್ರದೇಶದಲ್ಲಿನ ಖಾಸಗಿ, ಸರ್ಕಾರಿ ಆಸ್ಪತ್ರೆಯಲ್ಲಿ ಜನನ, ಮರಣ ಪ್ರಕರಣಗಳಲ್ಲಿ ಇ-ಜನ್ಮ ತಂತ್ರಾಂಶದಲ್ಲಿ ನೊಂದಣಿ ಮಾಡಿ ದಾಖಲೆಗಳನ್ನು ಸಂಬಂಧಿಸಿದ ಸ್ಥಳೀಯ ಸಂಸ್ಥೆಗಳಿಗೆ ನೀಡಬೇಕು.
ಕೆಲವು ಆಸ್ಪತ್ರೆಗಳಲ್ಲಿ ಜನನ ಮತ್ತು ಮರಣ ಪ್ರಕರಣಗಳಲ್ಲಿ ಒಂದಕ್ಕೊಂದು ದಾಖಲೆಗಳು ತಾಳೆಯಾಗುತ್ತಿಲ್ಲ ಎಂಬ ದೂರುಗಳಿವೆ. ಇದರಿಂದ ಸಾರ್ವಜನಿಕರಿಗೆ ಹಾಗೂ ನ್ಯಾಯಾಲಯದಲ್ಲಿ ಅನಾವಶ್ಯಕ ಪ್ರಕರಣಗಳು ದಾಖಲಾಗುತ್ತಿವೆ. ಹರಿಹರ ಸಾರ್ವಜನಿಕ ಆಸ್ಪತ್ರೆಯಲ್ಲಿನ ಜನನ ಮತ್ತು ಮರಣ ಅಂಕಿ ಅಂಶಗಳ ದಾಖಲೆಗಳನ್ನು ಸರಿಯಾಗಿ ಸ್ಥಳೀಯ ಸಂಸ್ಥೆಗೆ ಸಲ್ಲಿಸದ ಕಾರಣ ಇ-ಜನ್ಮ ತಂತ್ರಾಂಶದಲ್ಲಿ ಹೆಸರಿದ್ದರೆ, ಅದರ ದಾಖಲೆಗಳು ಲಭ್ಯವಿರುವುದಿಲ್ಲ. ಮತ್ತು ಹೆಸರು ಮತ್ತು ಅವರ ಇತರೆ ದಾಖಲೆಗಳಿಗೆ ತಾಳೆಯಾಗದಿರುವುದರಿಂದ ತಿದ್ದುಪಡಿ ಮಾಡಲು ನ್ಯಾಯಾಲದಲ್ಲಿ ಆದೇಶ ಪಡೆಯಬೇಕಾಗುತ್ತದೆ. ತಿದ್ದುಪಡಿ ಪ್ರಕರಣಗಳು ಹೆಚ್ಚಿರುವುದರಿಂದ ನಗರಸಭೆಯಿಂದ ನ್ಯಾಯಾಲಯದ ಪ್ರತಿನಿಧಿಯಾಗಿ ವಕೀಲರು ಹಾಜರಾಗುವುದರಿಂದ ಇವರಿಗೆ ಪ್ರಕರಣಗಳ ಆಧಾರದಲ್ಲಿ ಗೌರವಧನ ಪಾವತಿಸಲಾಗುತ್ತಿದ್ದು ಸ್ಥಳೀಯ ಸಂಸ್ಥೆಗೆ ಹೊರೆಯಾಗುವ ಜೊತೆಗೆ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ ಎಂದು ಅಧಿಕಾರಿಯವರು ಆಗುತ್ತಿರುವ ಸಮಸ್ಯೆ ಬಗ್ಗೆ ಸಭೆ ಗಮನಕ್ಕೆ ತಂದಾಗ ಜಿಲ್ಲಾಧಿಕಾರಿಯವರು ಈ ಬಗ್ಗೆ ಆರೋಗ್ಯ ಇಲಾಖೆ ಆಯುಕ್ತರಿಗೆ ಪತ್ರ ಬರೆಯಲು ತಿಳಿಸಿ ಎಲ್ಲಾ ಆರೋಗ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಕ್ತ ನಿರ್ದೇಶನ ನೀಡಲು ಸೂಚನೆ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಕೃಷ್ಣನಾಯ್ಕ, ಉಪವಿಭಾಗಾಧಿಕಾರಿ ಅಭಿಷೇಕ್, ಜಿಲ್ಲಾ ಸಾಂಖ್ಯಿಕ ಅಧಿಕಾರಿ ನೀಲಾ.ಎಸ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.