ದಾವಣಗೆರೆ: ಬೆಂಗಳೂರು ಟು ಮೈಸೂರು ಪಾದಯಾತ್ರೆ ನಡೆಸುತ್ತಿರುವ ಬಿಜೆಪಿ – ಜೆಡಿಎಸ್ ಪಾದಯಾತ್ರೆ ಕುತಂತ್ರದ್ದು. ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಜನಪ್ರಿಯ ಯೋಜನೆಗಳನ್ನು ನೀಡಿದ ಸಿದ್ದರಾಮಯ್ಯರ
ಜನಪ್ರಿಯತೆ, ಇಮೇಜ್ ಗೆ ಧಕ್ಕೆ ತರಲು ಷಡ್ಯಂತ್ರ ರೂಪಿಸಿರುವುದು ಗೊತ್ತಾಗುತ್ತದೆ ಎಂದು ಅಖಿಲ ಭಾರತ ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಕಿಡಿಕಾರಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮುಖ್ಯಮಂತ್ರಿಯಾಗಿದ್ದಾಗ ಬಿ. ಎಸ್. ಯಡಿಯೂರಪ್ಪ ಅವರು ಭ್ರಷ್ಟಾಚಾರ ಆರೋಪದಲ್ಲಿ ಜೈಲಿಗೆ ಹೋಗಿ ಬಂದಿದ್ದನ್ನು ರಾಜ್ಯ ಬಿಜೆಪಿ ಘಟಕದ
ಅಧ್ಯಕ್ಷ ಬಿ. ವೈ. ವಿಜಯೇಂದ್ರ ಮರೆತಿದ್ದಾರೆ. ಅದೇ ರೀತಿಯಲ್ಲಿ ಸಿಎಂ ಆಗಿದ್ದಾಗ ಹೆಚ್. ಡಿ. ಕುಮಾರಸ್ವಾಮಿ ವಿರುದ್ಧ 150 ಕೋಟಿ ರೂಪಾಯಿ ಗಣಿ ಹಗರಣದ ಆರೋಪ ಬಂದಿತ್ತು. ಆಗ ಯಡಿಯೂರಪ್ಪ, ಕುಮಾರಸ್ವಾಮಿ
ರಾಜೀನಾಮೆ ನೀಡಿದ್ದರಾ ಎಂದು ಪ್ರಶ್ನಿಸಿದ್ದಾರೆ.

ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯರ ಪಾತ್ರ ಇಲ್ಲವೆಂದು ಗೊತ್ತಿದ್ದರೂ ಹೆಸರಿಗೆ ಕಳಂಕ ತರಲು ಷಡ್ಯಂತ್ರ ರೂಪಿಸಿರುವುದು ಸ್ಪಷ್ಟವಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ
ಅವರಿಗೆ ನೇರವಾಗಿ ಎದುರಿಸಲು ಸಾಧ್ಯವಾಗುತ್ತಿಲ್ಲ, ಹಿಂಬಾಗಿಲಿನಿಂದ ಅಧಿಕಾರ ಹಿಡಿಯುವ ಹವಣಿಕೆ ಈ ಹಿಂದೆಯೂ ಇತ್ತು. ಈಗಲೂ ಇದೆ. ಈಗ ಸಿದ್ದರಾಮಯ್ಯರ ಹೆಸರು ಹಾಳು ಮಾಡಿದರೆ ಮುಂದೆ ಬಿಜೆಪಿಗೆ ಅನುಕೂಲ ಆಗುತ್ತೆ ಎಂಬ ದುರುದ್ದೇಶದಿಂದ ಈ ರೀತಿ ಸಂಚು ರೂಪಿಸಲಾಗಿದ್ದು, ರಾಜ್ಯದ ಜನರು ಇದಕ್ಕೆಲ್ಲಾ ಸೊಪ್ಪು ಹಾಕುವುದಿಲ್ಲ ಎಂದು ಹೇಳಿದ್ದಾರೆ.

ಹೆಚ್. ಡಿ. ಕುಮಾರಸ್ವಾಮಿ ಅವರ ಅಣ್ಣ ಹೆಚ್. ಡಿ. ರೇವಣ್ಣ, ಭವಾನಿ ರೇವಣ್ಮ ವಿರುದ್ಧ ಮಹಿಳೆ ಕಿಡ್ನಾಪ್ ಕೇಸ್ ಇದೆ. ಪ್ರಜ್ವಲ್ ರೇವಣ್ಣ, ಸೂರಜ್ ರೇವಣ್ಣರ ಸಾಧನೆಯನ್ನು ರಾಜ್ಯದ ಜನತೆ ನೋಡಿದ್ದಾರೆ. ಸಂತ್ರಸ್ತರ ಪರ
ನಿಲ್ಲಬೇಕಾದ ಕುಮಾರಸ್ವಾಮಿ ಯಾವ ರೀತಿ ಮಾತನಾಡುತ್ತಿದ್ದಾರೆ? ಪ್ರಜ್ವಲ್ ರೇವಣ್ಣ, ಸೂರಜ್ ರೇವಣ್ಣರಿಂದ ತೊಂದರೆಗೆ ಒಳಗಾದವರ ಭೇಟಿ ಯಾಕೆ ಮಾಡಿಲ್ಲ? ಹಾಸನದಲ್ಲಿ ಏನೇನೆಲ್ಲಾ ನಡೆದಿದೆ ಎಂಬ ಕುರಿತಂತೆ ಪ್ರತಿಕ್ರಿಯೆ ನೀಡುತ್ತಿಲ್ಲ. ತನ್ನ ಅಣ್ಣನ ಕುಟುಂಬದವರ ವಿರುದ್ಧ ಕ್ರಮಕ್ಕೆ ಇದೇ ರೀತಿಯಲ್ಲಿ ಹಾಸನದಲ್ಲಿ ಕುಮಾರಸ್ವಾಮಿ ಪಾದಯಾತ್ರೆ ನಡೆಸಲಿ. ಆಗಲಾದರೂ ಜನರು ಕುಮಾರಸ್ವಾಮಿ ನಿಲುವು ಬೆಂಬಲಿಸಬಹುದು ಎಂದು ಸೈಯದ್ ಖಾಲಿದ್ ಅಹ್ಮದ್ ಲೇವಡಿ ಮಾಡಿದ್ದಾರೆ.

ಜಾತ್ಯಾತೀತ ಜನತಾದಳ ಎಂಬ ಹೆಸರಿನಲ್ಲಿ ರಾಜಕೀಯ ಮಾಡುತ್ತಾ ಕೋಮುವಾದಿಗಳ ಜೊತೆ ಕೈ ಜೋಡಿಸಿರುವ ಕುಮಾರಸ್ವಾಮಿ ಅವರಿಗೆ ಹಿಂದುಳಿದವರು, ಅಲ್ಪಸಂಖ್ಯಾತರು, ದಲಿತರು, ಬಡವರ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ. ಅಧಿಕಾರಕ್ಕೇರಲು ಯಾವ ಮಟ್ಟಕ್ಕಾದರೂ ಕುಮಾರಸ್ವಾಮಿ ಇಳಿಯುತ್ತಾರೆ ಎಂಬುದು ಜಗಜ್ಜಾಹೀರಾಗಿದೆ. ವಿನಾಕಾರಣ ಸಿದ್ದರಾಮಯ್ಯರ ವಿರುದ್ಧ ಆರೋಪ ಮಾಡುವುದು ಬಿಟ್ಟು, ತಮ್ಮ ಭ್ರಷ್ಟಾಚಾರ, ಕುಟುಂಬದವರು ಮಾಡಿರುವ ತಪ್ಪುಗಳ ವಿರುದ್ಧ ಹೋರಾಡಲಿ. ವಿಜಯೇಂದ್ರ ಅವರ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಏನು ಹೇಳಿದ್ದಾರೆ? ಅವರೇನೂ ಬೇರೆ ಪಕ್ಷದ ಶಾಸಕರಾ? ಮೊದಲಿನಿಂದಲೂ ಆರೋಪ ಮಾಡುತ್ತಿದ್ದರೂ ಯಾಕೆ ಬಿ. ಎಸ್. ಯಡಿಯೂರಪ್ಪ, ವಿಜಯೇಂದ್ರ ಯಾಕೆ ಸುಮ್ಮನಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

Leave a Reply

Your email address will not be published. Required fields are marked *