ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇಲಾಖೆಯಲ್ಲಿನ ಸಹಾಯಕ ಇಂಜಿನಿಯರ್‍ಗಳ ಸಿವಿಲ್ ಹುದ್ದೆಗಳ ನೇಮಕಾತಿಗಾಗಿ ಆಗಸ್ಟ್ 11 ರಂದು ದಾವಣಗೆರೆ ನಗರದ 3 ಕೇಂದ್ರಗಳಲ್ಲಿ 1447 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದು ಪರೀಕ್ಷಾ ಕೇಂದ್ರಗಳಲ್ಲಿ ಕಟ್ಟೆಚ್ಚರ ವಹಿಸಲು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ತಿಳಿಸಿದರು.
ಶುಕ್ರವಾರ (ಆ.9) ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೆಇಎ ಸ್ಪರ್ಧಾತ್ಮಕ ಪರೀಕ್ಷಾ ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸ್ಪರ್ಧಾತ್ಮಕ ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸಲಾಗುತ್ತಿದ್ದು ಪರೀಕ್ಷೆಯಲ್ಲಿ ಯಾವುದೇ ಲೋಪವಾಗದಂತೆ ನಡೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈಗಾಗಲೇ ಪರೀಕ್ಷಾ ಪ್ರಾಧಿಕಾರವು ಪರೀಕ್ಷೆಯನ್ನು ಯಾವ ರೀತಿ ನಡೆಸಬೇಕೆಂದು ನಿಯಮಗಳನ್ನು ರೂಪಿಸಿದ್ದು, ಅದರಂತೆ ಪರೀಕ್ಷಾ ಮೇಲ್ವಿಚಾರಕರು ಹಾಗೂ ಕೇಂದ್ರದ ಅಧೀಕ್ಷಕರು ಸೇರಿದಂತೆ ಎಲ್ಲಾ ಅಧಿಕಾರಿಗಳಿಗೆ ತರಬೇತಿಯನ್ನು ನೀಡಲಾಗಿದೆ.
ಆಗಸ್ಟ್ 11 ರಂದು ಬೆಳಿಗ್ಗೆ 10.30 ರಿಂದ 12.30 ರವರೆÀಗೆ ಕಡ್ಡಾಯ ಸಾಮಾನ್ಯ ಕನ್ನಡ ಭಾಷಾ ಪರೀಕ್ಷೆ. ಮತ್ತು ಮಧ್ಯಾಹ್ನ 2.30 ರಿಂದ 4.30 ರವರೆಗೆ ನಿರ್ದಿಷ್ಟ ಪತ್ರಿಕೆಯ ಪರೀಕ್ಷೆ ನಡೆಯಲಿವೆ. ಪರೀಕ್ಷೆಗಳಲ್ಲಿ ಎಷ್ಟೇ ಎಚ್ಚರವಹಿಸಿದರೂ ಕೆಲವು ತಪ್ಪುಗಳಾಗುತ್ತವೆ, ಹಾಗಾಗಿ ಪರೀಕ್ಷಾ ಕರ್ತವ್ಯ ನಿರ್ವಹಿಸುವ ಪ್ರತಿಯೊಬ್ಬರೂ ತಮ್ಮ ಪರೀಕ್ಷಾ ಕರ್ತವ್ಯಗಳನ್ನು ಸರಿಯಾಗಿ ಓದಿಕೊಂಡು ನಿರ್ವಹಿಸಬೇಕು. ತಾಂತ್ರಿಕತೆ ಬಹಳ ಮುಂದುವರೆದಿದ್ದು ಪರೀಕ್ಷೆಗಳಲ್ಲಿ ಮೋಸ ಎಸಗುವವರು ಬೇರೆ ಬೇರೆ ತಂತ್ರಗಳನ್ನು ಅನುಸರಿಸುವುದರಿಂದ ನಾವು ಹೆಚ್ಚು ಜಾಗರೂಕರಾಗಿರಬೇಕೆಂದು ತಿಳಿಸಿ ಪ್ರತಿ ಕೊಠಡಿಗೆ ಸಿ.ಸಿ ಕ್ಯಾಮೆರಾ ಅಳವಡಿಕೆ ಸೇರಿದಂತೆ ಅಗತ್ಯವಿರುವ ಕಡೆ ವೀಡಿಯೋಗ್ರಾಫರ್ ನೇಮಕ ಮಾಡಿಕೊಳ್ಳಲು ಸೂಚನೆ ನೀಡಿದರು.
ಪರೀಕ್ಷಾ ಕೇಂದ್ರಗಳಲ್ಲಿ ಆಸನ, ಗಾಳಿ, ಬೆಳಕು ಹಾಗೂ ಶೌಚಾಲಯ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು. ಮತ್ತು ಎಲೆಕ್ಟ್ರಾನಿಕ್ ಸಾಧನಗಳಾದ ಮೊಬೈಲ್, ಸ್ಮಾರ್ಟ್ ಫೋನ್, ಸ್ಮಾರ್ಟ್ ವಾಚ್, ಬ್ಲೂ ಟೂತ್ ಡಿವೈಸ್, ಪೇಜರ್, ವೈರ್‍ಲೆಸ್, ಕ್ಯಾಲ್ಕುಲೇಟರ್, ಮೊದಲಾದ ಎಲೆಕ್ಟ್ರಾನಿಕ್ ವಸ್ತುಗಳಿಗೆÀ ನಿರ್ಬಂಧವಿದೆ, ಆದಾಗ್ಯೂ ಯಾವುದೇ ವ್ಯಕ್ತಿಗಳು ಇವುಗಳನ್ನು ಕೇಂದ್ರದ ಒಳ ತಂದರೆ ಅವರ ಅಭ್ಯರ್ಥಿತನವನ್ನು ರದ್ದುಗೊಳಿsಸಲಾಗುವುದು. ಪ್ರತಿ ಕೇಂದ್ರದಲ್ಲಿಯೂ ಮೊಬೈಲ್ ಕಸ್ಟೋಡಿಯನ್ ಗಳಿದ್ದು ಅಭ್ಯರ್ಥಿಗಳು ತಮ್ಮ ಮೊಬೈಲ್‍ಗಳನ್ನು ಅವರ ಬಳಿ ನೀಡಬೇಕು. ಹಾಗೂ ಅಭ್ಯರ್ಥಿಗಳು ತರುವ ಕುಡಿಯುವ ನೀರಿನ ಬಾಟಲಿಗಳು ಪಾರದರ್ಶಕವಾಗಿರಬೇಕೆಂದರು.
ಪರೀಕ್ಷಾ ಕೆಂದ್ರಗಳ ಸುತ್ತಮುತ್ತ 144 ಸೆಕ್ಷನ್ ಜಾರಿ; ಮೋತಿವೀರಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜ್, ರಾಜನಹಳ್ಳಿ ಸೀತಮ್ಮ ಮಹಿಳಾ ಸರ್ಕಾರಿ ಪದವಿ ಪೂರ್ವ ಕಾಲೇಜು, ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ದಾವಣಗೆರೆ ಇಲ್ಲಿ ಪರೀಕ್ಷೆ ನಡೆಯಲಿವೆ. ಇಲ್ಲಿ 144 ಸೆಕ್ಷನ್ ಜಾರಿಗೊಳಿಸಿ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಉಪ ವಿಭಾಗಾಧಿಕಾರಿ ಸಂತೋಷ್ ಪಾಟೀಲ್, ಜಿಲ್ಲಾ ಖಜಾನಾಧಿಕಾರಿ ಪ್ರಭಾವತಿ, ಪಿಯು ಡಿಡಿ. ಕರಿಬಸಪ್ಪ, ಡಿಡಿಪಿಐ ಕೊಟ್ರೇಶ್, ಬಿಸಿಎಂ ಅಧಿಕಾರಿ ಗಾಯತ್ರಿ, ಪೊಲೀಸ್ ಅಧಿಕಾರಿ ಇಮ್ರಾನ್ ಬೇಗ್, ಸೇರಿದಂತೆ ಪರೀಕ್ಷಾ ಮೇಲ್ವಿಚಾರಕರು, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.