ದಾವಣಗೆರೆ: ಸಿಎಂ ಸಿದ್ದರಾಮಯ್ಯರ ವಿರುದ್ಧ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ಅನುಮತಿ ನೀಡಿರುವ ಕ್ರಮ ರಾಜಕೀಯ ಪ್ರೇರಿತ ನಿರ್ಧಾರ. ಕೇಂದ್ರ ಸರ್ಕಾರದ ಅಣತಿಯಂತೆ ರಾಜ್ಯಪಾಲರು ನಡೆದುಕೊಳ್ಳುತ್ತಿರುವುದು
ಸಂವಿಧಾನ ಬಾಹಿರವಾದದ್ದು ಎಂದು ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ನ ಯುವ ಘಟಕದ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಆರೋಪಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮೂಡಾ ಹಗರಣ ಸಂಬಂಧ ಸಿದ್ದರಾಮಯ್ಯರ ಪಾತ್ರ ಇಲ್ಲ. ಅವರ ಪತ್ನಿ ಹೆಸರಿಗೆ ಹದಿನಾಲ್ಕು ನಿವೇಶನಗಳನ್ನು ಕಾನೂನು ಬದ್ಧವಾಗಿ ನೀಡಲಾಗಿದೆ. ಅದೂ
ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ. ಶೇಕಡಾ 40 ಕಮೀಷನ್ ಸರ್ಕಾರ ಎಂದು ಕುಖ್ಯಾತಿ ಪಡೆದಿದ್ದ ಹಿಂದಿನ ಬಿಜೆಪಿ ಸರ್ಕಾರದ ಹಗರಣಗಳ ಕುರಿತಂತೆ ಯಾವುದೇ ಕ್ರಮ ತೆಗೆದುಕೊಳ್ಳದ ರಾಜ್ಯಪಾಲರು ಸಿದ್ದರಾಮಯ್ಯರ
ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವ ಮೂಲಕ ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ಕೆಲಸ ಮಾಡುತ್ತಿದ್ದಾರೆ ಎಂಬುದು ಗೊತ್ತಾಗುತ್ತದೆ ಎಂದಿದ್ದಾರೆ.
ಮಾಜಿ ಸಿಎಂ, ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ, ಶಾಸಕ ಜಿ. ಟಿ. ದೇವೇಗೌಡ, ಪ್ರತಾಪ್ ಸಿಂಹ ಸೇರಿದಂತೆ ಹಲವರು ನಿವೇಶನ ಪಡೆದಿದ್ದಾರೆ. ಕುಮಾರಸ್ವಾಮಿ ವಿರುದ್ಧ ಡಿನೋಟಿಫಿಕೇಶನ್, ಮೂಡಾದಲ್ಲಿ ಸೈಟು
ಪಡೆದಿರುವುದೂ ಸೇರಿದಂತೆ ಹಲವು ಆರೋಪಗಳಿವೆ. ಈ ವಿಚಾರ ಕುರಿತಂತೆ ಯಾಕೆ ಪ್ರಾಸಿಕ್ಯೂಷನ್ ನೀಡಿಲ್ಲ. ಬಿ. ಎಸ್. ಯಡಿಯೂರಪ್ಪ ಚೆಕ್ ನಲ್ಲಿ ಲಂಚ ಪಡೆದು ಜೈಲಿಗೆ ಹೋಗಿ ಬಂದಿದ್ದು ಸಿಎಂ ಆಗಿದ್ದಾಗಲೇ.
ಇಂಥವರು ಮಾಡಿರುವ ಹಗರಣಗಳ ತನಿಖೆಗೆ ಪ್ರಾಸಿಕ್ಯೂಷನ್ ನೀಡದ ರಾಜ್ಯಪಾಲರು ಈಗ ಪೂರ್ವಾಪರ ಪರಾಮರ್ಶೆ ನಡೆಸದೇ ನೀಡಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.
5 ಗ್ಯಾರಂಟಿಗಳನ್ನು ಜಾರಿಗೊಳಿಸುವ ಮೂಲಕ ಇಡೀ ದೇಶದಲ್ಲಿಯೇ ಕರ್ನಾಟಕ ಸರ್ಕಾರ ಮೆಚ್ಚುಗೆ ಗಳಿಸಿದೆ. ಸಿದ್ದರಾಮಯ್ಯರ ಜನಪ್ರಿಯತೆ, ಇಮೇಜ್ ಕುಗ್ಗಿಸುವ ಸಲುವಾಗಿ ಕೇಂದ್ರ ಬಿಜೆಪಿ ನಾಯಕರು ಮಾಡಿರುವ ಷಡ್ಯಂತ್ರ. ರಾಜ್ಯಪಾಲರಿಂದ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿಸುವ ಮೂಲಕ ಸಿಎಂ ಸಿದ್ದರಾಮಯ್ಯರ ನೈತಿಕ ಬಲ ಕುಸಿಯುವಂತೆ ಮಾಡುವ ಹುನ್ನಾರ ನಡೆಸಲಾಗಿದೆ. ರಾಜ್ಯದ ಜನರು ಇದಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಸೈಯದ್ ಖಾಲಿದ್ ಅಹ್ಮದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.