ಎಪ್ಪತ್ತರ ದಶಕದಲ್ಲಿ
ಕಬ್ಬು ಬೆಳೆಗಾರರು ಅನುಭವಿಸುತ್ತಿದ್ದ ಯಾತನೆ; ಎಂಬತ್ತರ ದಶಕದಲ್ಲಿ ನಾಗಸಮುದ್ರದಲ್ಳಿ  ಪೋಲಿಸರ ಗುಂಡೇಟಿಗೆ ಮೂವರು ರೈತರು ಬಲಿ.  ಮಲಪ್ರಭ ಯೋಜನೆಯ ಹಿನ್ನೆಲೆಯಲ್ಲಿ  ನರಗುಂದ ಗೋಲಿಬಾರಿನಲ್ಲಿ ಇಬ್ಬರು ರೈತರ ದುರ್ಮಣಗಳು ಸಹಜವಾಗಿ ರೈತರಲ್ಲಿ ಹೋರಾಟದ ಕಿಚ್ಚನ್ನು ಹಚ್ವಿತ್ತು. ದೇಶದ ಬೆನ್ನೆಲುಬು, ಅನ್ನದಾತ ಎಂದು ಕರೆಸಿಕೊಳ್ಳುವ ರೈತರ ಮೇಲೆ ಆಳುವ ಸರಕಾರದಿಂದ
ನಿಷ್ಕರುಣೆಯಿಂದ ಆಗುತ್ತಿದ್ದ  ಮಾರಣಾಂತಿಕ ಹಲ್ಲೆಗಳು ಮಣ್ಣಿನ ಮಕ್ಕಳು ಸಿಡಿದೇಳುವಂತೆ ಮಾಡುತಿತ್ತು. ಈ ದುರ್ಘಟನೆಗಳು ರೈತರಲ್ಲಿ ಸಂಘಟನಾತ್ಮಕ ಹೋರಾಟಕ್ಕೆ ನಾಂದಿಯಾದವು. ಆಗ ಎಚ್ ಎಸ್ ರುದ್ರಪ್ಪನವರ ಕರ್ಣಧಾರತ್ವದಲ್ಲಿ 
ಹುಟ್ಟಿಕೊಂಡಿದ್ದೇ ಕರ್ನಾಟಕ ರಾಜ್ಯ ರೈತಸಂಘ.  ಅಷ್ಟೊತ್ತಿಗಾಗಲೇ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಉಪಾಧ್ಯಕ್ಷರಾಗಿದ್ದ ರುದ್ರಪ್ಪನವರು  ಸ್ವತಃ ರೈತರಾಗಿ,   ರೈತರ ಬದುಕು ಬವಣೆಗಳನ್ನು ಕಣ್ಣಾರೆ ಕಂಡವರು.  ರೈತ ಚಳವಳಿಯ ಮುಂಚೂಣಿಯಲ್ಲಿದ್ದ ನಾಯಕರು ರುದ್ರಪ್ಪನವರಲ್ಲಿದ್ದ ಸಾತ್ವಿಕ ಕಳಕಳಿಯನ್ನು ಕಂಡು ರೈತರ ಸಂಘಟನೆಗೆ ಅಧ್ಯಕ್ಷರಾಗಲು ಆಹ್ವಾನಿಸಿದರು. ಆಗಲೇ ಎಂಬತ್ತರ ಏರು ಜೌವ್ವನದಲ್ಲಿದ್ದ ರುದ್ರಪ್ಪನವರನ್ನು ಈ ಅಧ್ಯಕ್ಷ ಗಾದಿಗೆ ಆಯ್ಕೆ ಮಾಡಲು ಪ್ರಮುಖ ಕಾರಣ, ಅವರು ತಾರುಣ್ಯದಲ್ಲಿರುವಾಗಲೇ ಬಿಹಾರ ರಾಜ್ಯದ ರೈತ ಚಳವಳಿಯ ನಾಯಕ ಸ್ವಾಮಿ ಸಹಜಾನಂದರ ಒಡನಾಡಿಯಾಗಿದ್ದರು. ಬಿಹಾರದ ಜಮೀನ್ದಾರಿ ಪದ್ಧತಿಯ ವಿರುದ್ಧದ ಹೋರಾಟದಲ್ಲಿ ರುದ್ರಪ್ಪನವರು ಪಾಲ್ಗೊಂಡಿದ್ದರು.  
ಗಾಂಧಿ ತತ್ತ್ವದಲ್ಲಿ ಅಪಾರ ನಂಬಿಕೆಯುಳ್ಳವರಾಗಿದ್ದ ರುದ್ರಪ್ಪನವರು ರೈತಪರ ಕಾಳಜಿ, ಸಮಾಜಮುಖಿ ಚಿಂತನೆಗೆ ಹೆಸರಾಗಿದ್ದರು. ರಾಜ್ಯ ರಾಜಕೀಯದಲ್ಲಿ ಪಾರದರ್ಶಕ ವ್ಯಕ್ತಿತ್ವದಿಂದ ಮನೆಮಾತಾಗಿದ್ದರು. ರೈತ ಪರ ಚಳವಳಿಗೆ  ರುದ್ರಪ್ಪನವರೇ ಸೂಕ್ತ ಮತ್ತು ಸಮರ್ಥ ನಾಯಕರೆಂದು ಭಾವಿಸಿ, ಈ  ಹುದ್ದೆಗೆ ಆಯ್ಕೆ ಮಾಡಲಾಯಿತು. ‌
ರೈತ ಸಂಘ ಹುಟ್ಟಿಕೊಂಡಾಗ ಕಬ್ಬು ಬೆಳೆಗಾರರ ಸಂಘವು ಈ ಸಂಘದಲ್ಲಿ ವಿಲೀನವಾಯಿತು. ರುದ್ರಪ್ಪನವರ ಅಧ್ಯಕ್ಷತೆಯಲ್ಲಿ ಪ್ರೊ. ಎಂ ಡಿ ನಂಜುಂಡಸ್ವಾಮಿ, ಎನ್ ಡಿ ಸುಂದರೇಶ್, ಪೂರ್ಣಚಂದ್ರ ತೇಜಸ್ವಿ, ಕಡಿದಾಳ್ ಶಾಮಣ್ಣ, ರವಿವರ್ಮ ಕುಮಾರ್ , ಎಂ ಶ್ರೀನಿವಾಸ್, ಎಚ್ ಆರ್ ಬಸವರಾಜಪ್ಪ, ಮಂಜುನಾಥ್ ದತ್ತ    ಮುಂತಾದ ಘಟಾನುಘಟಿಗಳು ರೈತ ಸಂಘಟನೆಗೆ ಬಲ ತುಂಬಿದರು.  ಸಂಘಟನೆಯನ್ನು   ರಾಜ್ಯದಾದ್ಯಂತ ವಿಸ್ತರಿಸಿ , 1982ರಲ್ಲಿ ರೈತರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರದ ಮುಂದಿಟ್ಟರು. ಸರಕಾರ ರೈತರ ಬೇಡಿಕೆ ಈಡೇರಿಸಲು ಮೀನಾಮೇಷ ಎಣಿಸಿದಾಗ ಅದಕ್ಕಾಗಿ ‘ಬೆಂಗಳೂರು ಚಲೋ’ ಕರೆಕೊಟ್ಟರು. ರಾಜ್ಯದ ಮೂಲೆಮೂಲೆಗಳಿಂದ ಲಕ್ಷ ಲಕ್ಷ ಸಂಖ್ಯೆಯಲ್ಲಿ ರೈತರು ಹಸಿರು ಶಾಲು ಧರಿಸಿ
ಸರ್ಕಾರದ ವಿರುದ್ಧ  ಘೋಷಣೆ ಕೂಗಿದರು. ಆಗ ಬೆಂಗಳೂರು ನಗರವೇ ತಬ್ಬಿಬ್ಬುವಾಗುವಂತಾಯಿತು. ಮುಖ್ಯಮಂತ್ರಿಯಾಗಿದ್ದ ಗುಂಡೂರಾವ್ ವಿಚಲಿತರಾದರು. ಆಗ ವಿಧಾನ ಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ರೈತ ನಾಯಕರೊಂದಿಗೆ ಸಭೆ ನಡೆಸಿ ಬೇಡಿಕೆಗಳನ್ನು ಈಡೇರಿಸುವ ಭರವಸೆ ದೊರಕಿದ್ದು ಈಗ ಇತಿಹಾಸ. 1982ರ ಈ ‘ಬೆಂಗಳೂರು ಚಲೋ’ ಚಳವಳಿ ಕರ್ನಾಟಕದ ಇತಿಹಾಸದಲ್ಲಿ ಮಹತ್ವದ ಘಟನೆಯಾಗಿ ದಾಖಲಾಯಿತು.  ಆನಂತರ ದಿನಗಳಲ್ಲಿ  ಒಂದು ತಿಂಗಳ ಕಾಲ ಸೊಪ್ಪು, ತರಕಾರಿ, ಹಾಲು ಮುಂತಾದ ರೈತ ಉತ್ಪನ್ನಗಳನ್ನು    ಶಿವಮೊಗ್ಗ ನಗರಕ್ಕೆ ಸರಬರಾಜು ಮಾಡದಿರುವ ಚಳವಳಿ ಕೈಗೊಂಡರು. ಆಗ ಶಿವಮೊಗ್ಗ ನಗರದ ನಾಗರಿಕರು ತಲ್ಲಣಿಸಿದ್ದು ಇಂದಿಗೂ ದಂತಕಥೆಯಾಗಿ ಉಳಿದಿದೆ.
ರೈತರ ಮೇಲೆ  ನಿರಂತರವಾಗಿ  ಆಗುತ್ತಿರುವ ಶೋಷಣೆಯನ್ನು ತಪ್ಪಿಸಲು ಹಳ್ಳಿ ಹಳ್ಳಿಗಳಲ್ಲಿ ಸಂಘಟನೆಯ ಶಾಖೆಗಳನ್ನು ತೆರೆದು, ಅಧಿಕಾರಿಗಳು ವಿನಾಕಾರಣ ತೊಂದರೆ ನೀಡದಂತೆ ತಾಕೀತು ಮಾಡಲಾಯಿತು. ಹೀಗೆ ರೈತ ಚಳವಳಿ , ರೈತ ಸಂಘಟನೆಗೆ ಭದ್ರ ಬುನಾದಿ ಹಾಕಿದವರು ಎಚ್ ಎಸ್ ರುದ್ರಪ್ಪ.
ಈಗಿನ ನ್ಯಾಮತಿ ತಾಲೂಕಿನ ಹೊಸಕೊಪ್ಪ ಗ್ರಾಮದಲ್ಲಿ 1900ರಲ್ಲಿ ರೈತ ಕುಟುಂಬದಲ್ಲಿ ಜನಿಸಿದ ರುದ್ರಪ್ಪನವರು ಬಿ ಎಸ್ಸಿ, ಎಲ್ ಎಲ್ ಬಿ ಪದವೀಧರರು.  ಮಹಾತ್ಮ ಗಾಂಧಿಯವರಿಂದ ಪ್ರೇರಣೆಗೊಂಡು
ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ, ಸೆರೆಮನೆ ವಾಸದ ಅನುಭವವಾಯಿತು. ಗಾಂಧೀಜಿಯವರ ಕರೆಯ ಮೇರೆಗೆ   1946ರಲ್ಲಿ ಶಿವಮೊಗ್ಗ ನಗರದಲ್ಲಿ  ‘ರಾಷ್ಟ್ರೀಯ ಶಿಕ್ಷಣ ಸಂಸ್ಥೆ’ ಯನ್ನು ತೆರೆದರು. ಅದೊಂದು ನಾಡಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿ ಹೆಸರಾಗುವಂತೆ ರೂಪಿಸವಲ್ಲಿ ರುದ್ರಪ್ಪನವರ ಪಾತ್ರ ಹಿರಿದು.  1946ರಿಂದ 1991ರವರೆಗೆ ಅಧ್ಯಕ್ಷರಾಗಿ ಅರ್ಪಣಾ ಮನೋಭಾವದಿಂದ ಗಣನೀಯ ಸೇವೆ ಸಲ್ಲಿಸಿದರು. 1947ರಿಂದ 1950ರವರೆಗೆ    ಮೈಸೂರು ಸಂಸ್ಥಾನದಲ್ಲಿ ಪ್ರಜಾಪ್ರತಿನಿಧಿ ಸಭೆಯ ಸದಸ್ಯತ್ವ;
1950-52ರ ಅವಧಿಯಲ್ಲಿ ಡಾ. ಬಿ ಆರ್ ಅಂಬೇಡ್ಕರ್ ನೇತೃತ್ವದಲ್ಲಿ ಸಂವಿಧಾನ ಕರಡು  ಸಮಿತಿಯ ಸದಸ್ಯತ್ವ ರುದ್ರಪ್ಪನವರನ್ನು ಹುಡುಕಿಕೊಂಡು ಬಂದ ಅವಕಾಶಗಳು. ‌ಮುಂದೆ
ಸ್ವಾತಂತ್ರ ಭಾರತದ ಮೊದಲ ಚುನಾವಣೆಯಲ್ಲಿ ಗೆದ್ದು, ಹಂತಹಂತವಾಗಿ ಶಾಸಕರಾಗಿ , ಸಭಾಪತಿಯಾಗಿ, ಸಚಿವರಾದರು.  ಅಪಾರ ಅನುಭವದೊಂದಿಗೆ ರಾಜಕೀಯ ಮುತ್ಸದ್ದಿ ಎನಿಸಿಕೊಂಡರು. ಆಗ ಮನಸ್ಸು ಮಾಡಿದ್ದರೆ ರಾಜ್ಯದ ಮುಖ್ಯಮಂತ್ರಿಯಾಗುವ ಎಲ್ಲಾ ಸಾಧ್ಯತೆಗಳಿದ್ದುದನ್ನು ಅಲ್ಲಗಳೆಯುವಂತಿಲ್ಲ. ಕೆಲಕಾಲ
ಕರ್ನಾಟಕ ಖಾದಿ ಮಂಡಳಿಯ ಅಧ್ಯಕ್ಷರಾಗಿದ್ದರು. ‌ಆನಂತರದ ದಿನಗಳಲ್ಲಿ ಸಂಪೂರ್ಣ ರೈತ ಸಂಘಟನೆಗೆ ತಮ್ಮನ್ನು ತಾವು ಅರ್ಪಿಸಿಕೊಂಡ ಧೀಮಂತ ವ್ಯಕ್ತಿತ್ವ ರುದ್ರಪ್ಪನವರದು.‌
ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಯಾಗಬೇಕು ಮತ್ತು ರೈತರ ಕಾಯಕ ಒಂದು ಉದ್ದಿಮೆ ಎಂದು ಪರಿಗಣಿಸಬೇಕು ಎಂಬುದು ರುದ್ರಪ್ಪನವರ ನಿಲುವಾಗಿತ್ತು. ಅದಕ್ಕಾಗಿ ರೈತರ ಒಂದು ನಿಯೋಗವನ್ನು ಪ್ರಧಾನ ಮಂತ್ರಿ ಇಂದಿರಾಗಾಂಧಿ ಬಳಿಗೆ ಕರೆದುಕೊಂಡು ಹೋದರು. ಅಧಿಕಾರದ ಮೇಲೆ ಆಸೆ ಇರದ, ವ್ಯಕ್ತಿಗತ ಸ್ವಾರ್ಥವಿರದ ರುದ್ರಪ್ಪನವರು, ರೈತರ ಬದುಕು ಹಸನಾಗಬೇಕೆಂಬ ಕಾಳಜಿಯುಳ್ಳವರಾಗಿದ್ದರು.
90 ವರ್ಷಗಳ ಕಾಲ ಸಮಾಜಕ್ಕಾಗಿ ಜೀವಿಸಿದ್ದ ರುದ್ರಪ್ಪನವರು 1991ರಲ್ಲಿ ಕಾಲವಶವಾದರು. ಆದರೆ ಅಲ್ಲಿಂದ ಇಲ್ಲಿಯವರೆಗೆ ರೈತ ಸಂಘಟನೆಗಳಾಗಲಿ, ರೈತ ನಾಯಕರಾಗಲಿ ರುದ್ರಪ್ಪನವರನ್ನು ನೆನೆಪಿಸಿಕೊಳ್ಳುವಂತಹ ಕಾರ್ಯವನ್ನು ಮಾಡದಿರುವುದು  ವಿಷಾದನೀಯ ಸಂಗತಿ. ರೈತ ಚಳವಳಿಯ ಆತ್ಮಶಕ್ತಿಯಂತಿದ್ದ ರುದ್ರಪ್ಪನವರ  ಬದುಕು   ಆದರ್ಶನೀಯ;
ಇಂದಿನ ಪೀಳಿಗೆಗೆ ರುದ್ರಪ್ಪನವರ ಜೀವನ ಸಾಧನೆಯನ್ನು ಪರಿಚಯಿಸುವ ಮಹದಾಸೆ
ಸಹೋದರನ ಮಗ ಡಾ. ರುದ್ರೇಶ್ ಅವರದು. ಅದಕ್ಕಾಗಿ ರುದ್ರೇಶ್ ಬಹಳ ದಿನಗಳಿಂದ ಪ್ರಯತ್ನಿಸುತ್ತಿದ್ದರು. ಕೋವಿಡ್ ಕಾರಣಕ್ಕೆ  ಈ ಕೆಲಸ  ಮುಂದೂಡಲ್ಪಟ್ಟು ಈಗ ಕಾರ್ಯಗತಗೊಂಡಿದೆ.
ತಮ್ಮ ದೊಡ್ಡಪ್ಪನವರನ್ನು ಕುರಿತು   ‘ರೈತ ಯಜಮಾನ ಎಸ್ ರುದ್ರಪ್ಪ’    ನೆನಪಿನ ಹೊತ್ತುಗೆಯನ್ನು ಹೊರತಂದಿರುತ್ತಾರೆ. ನ್ಯಾಮತಿಯ ಮಹಂತೇಶ್ವರ ವೀರಶೈವ ಕಲ್ಯಾಣ ಮಂಟಪದಲ್ಲಿ ಸೋಮವಾರ ಬೆಳಗ್ಗೆ 10-30ಕ್ಕೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಕನ್ನಡ ನಾಡು ಕಂಡ ಅಪರೂಪದ ರಾಜಕಾರಣಿ,  ರೈತರ ಕಣ್ಮಣಿ ರುದ್ರಪ್ಪನವರನ್ನು ನೆನಪಿಸಿಕೊಳ್ಳುವಂತೆ
ರುದ್ರೇಶ್ ಅವರು ಸ್ವತಂತ್ರವಾಗಿ ಮಾಡುತ್ತಿರುವ ಈ ಕಾರ್ಯ ಅತ್ಯಂತ ಶ್ಲಾಘನೀಯ.

                     – ನಾಗರಾಜ ಸಿರಿಗೆರೆ
                       ಕನ್ನಡ ಅಧ್ಯಾಪಕ
                        ದಾವಣಗೆರೆ

Leave a Reply

Your email address will not be published. Required fields are marked *