ನ್ಯಾಮತಿ :ತಾಲ್ಲೂಕು ಬಸವನಹಳ್ಳಿ ಗ್ರಾಮದ ಹೊರವಲಯದಲ್ಲಿ ಹಾದು ಹೋಗಿರುವ ತುಂಗಾಮೇಲ್ದಂಡೆ ನಾಲೆ ಭಾನುವಾರ ಒಡೆದು ಹೊಲ,ಗದ್ದೆ,ತೋಟಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.
ಎರಡು ದಶಕಗಳ ಹಿಂದೆ ನಿರ್ಮಾಣವಾಗಿದ್ದ ನಾಲೆಯ ಒಂದು ಬದಿ ಒಡೆದ ಪರಿಣಾಮವಾಗಿ, ಸುಮಾರು 300 ಎಕರೆ ಜಮೀನು ವ್ಯಾಪ್ತಿಯಲ್ಲಿ ಅಡಕೆ ತೋಟ, ಮೆಕ್ಕೆಜೋಳ, ಭತ್ತ, ಹತ್ತಿ, ತರಕಾರಿ ಬೆಳೆದ ಜಮೀನುಗಳಿಗೆ ನೀರು ನುಗ್ಗಿ ಲಕ್ಷಾಂತರ ರೂಪಾಯಿಗಳ ನಷ್ಟವಾಗಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ.
ನಾಲೆಯ ವ್ಯಾಪ್ತಿಯ ಕೆಲವು ಗೇಟುಗಳನ್ನು ತೆರೆದು ಹಳ್ಳಕ್ಕೆ ನೀರು ಹರಿಯುವಂತೆ ಮಾಡಿ, ನೀರಿನ ಪ್ರಮಾಣವನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ತಕ್ಷಣ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು ಎಂದು ತುಂಗಾ ಮೇಲ್ದಂಡೆ ಯೋಜನೆ ಎಂಜಿನಿಯರ್‍ಗಳಾದ ಕೃಷ್ಣಮೂರ್ತಿ ಮತ್ತು ಕೆ.ಮಂಜುನಾಥ ತಿಳಿಸಿದರು. ಸ್ಥಳದಲ್ಲಿ ತÀಹಶೀಲ್ದಾರ್ ಎಚ್.ಬಿ.ಗೋವಿಂದಪ್ಪ, ಗೋವಿನಕೋವಿ ರಾಜಸ್ವ ನಿರೀಕ್ಷಕ ಎಸ್. ಸಂತೋಷ ಮತ್ತು ಸಿಬ್ಬಂದಿ ಹಾಜರಿದ್ದರು.
ನಾಲೆ ಒಡೆದ ಪರಿಣಾಮ ನೂರಾರು ಎಕರೆ ಬೆಳೆ ನಾಶವಾಗಿದ್ದು, ಮುಂಗಾರು ಹಂಗಾಮಿನ ಬೆಳೆಗೆ ತೊಂದರೆಯಾಗದಂತೆ ದುರಸ್ತಿಕಾರ್ಯವನ್ನು ಸೋಮವಾರದಿಂದಲೇ ಪ್ರಾರಂಭಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಬೆಳೆ ನಾಶವಾಗಿರುವುದನ್ನು ಸೂಕ್ತ ರೀತಿಯಲ್ಲಿ ಇಲಾಖೆಯ ಮಾನದಂಡದಂತೆ ಪರಿಶೀಲಿಸಿ ಪರಿಹಾರ ಕೊಡಿಸುವುದಾಗಿ ಶಾಸಕ ಡಿ.ಜಿ.ಶಾಂತನಗೌಡ ಭರವಸೆ ನೀಡಿದರು.
ಈಗಾಗಲೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಶಿವಮೊಗ್ಗ ಜಿಲ್ಲೆಯ ಹೊಳಲೂರು ಹಾಗೂ ನ್ಯಾಮತಿ ತಾಲೂಕಿನ ಗಂಗನಕೋಟೆ ಸಮೀಪ ನಾಲೆ ನೀರನ್ನು ಹಳ್ಳಕ್ಕೆ ತಿರುಗಿಸಿದ್ದಾರೆ. ಜಲಸಂಪಲ್ಮೂನ ಸಚಿವ ಡಿ.ಕೆ.ಶಿವಕುಮಾರ್ ಅವರಿಗೂ ದೂರವಾಣಿ ಮುಖಾಂತರ ಮಾತನಾಡಲು ಪ್ರಯತ್ನ ಮಾಡುತ್ತಿದ್ದೇನೆ. ನಾಲೆ ಒಡೆದು ನೀರು ನುಗ್ಗಿ ನಷ್ಟವಾಗಿರುವ ರೈತರಿಗೆ ಪರಿಹಾರ ಕೊಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಆಗ್ರಹಿಸಿದರು.

Leave a Reply

Your email address will not be published. Required fields are marked *