ನ್ಯಾಮತಿ: ತಾಲೂಕು ಮಲ್ಲಿಗೇನಹಳ್ಳಿ ಗ್ರಾಮದಲ್ಲಿರುವ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದ್ದ ಗ್ರಾಮ ದೇವತೆ ಅಮ್ಮನ ಕೇಲು ದೇವರ ಮೆರವಣಿಗೆಯ ಮೂಲಕ ಬುಧುವಾರ ಗ್ರಾಮದ ಗಡಿಯಲ್ಲಿ ವಿಸರ್ಜಿಸಿಲಾಯಿತು. ಉತ್ಸವ ಮೂರ್ತಿಗಳಾದ ಶ್ರೀ ಆಂಜನೇಯ ಸ್ವಾಮಿ, ಬಸವೇಶ್ವರ ಸ್ವಾಮಿ ಭೂತಪ್ಪ ಮತ್ತು ಮರಿಯಮ್ಮ ದುರ್ಗಮ್ಮದೇವರ ಸಮ್ಮುಖದಲ್ಲಿ ತಮಟೆ, ಮಂಗಳವಾದ್ಯಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ಉತ್ಸವದ ಕುರಿತು ಗ್ರಾಮದ ಮುಖಂಡರಾದ ಬಸವರಾಜಪ್ಪ ಮತ್ತು ಪರಮೇಶ್ವರಪ್ಪ ಮೆರವಣಿಗೆ ಕುರಿತು ಮಾತನಾಡಿದ ಅವರು ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸಹ ಹಬ್ಬವನ್ನು ಆಚರಿಸಿ ಗ್ರಾಮದಲ್ಲಿ ಮಳೆ, ಬೆಳೆ ಸಮೃದ್ಧಿಯಾಗಿ ಬರಲೆಂದು ಶ್ರಾವಣ ಮಾಸದ ಮೊದಲನೆಯ ಸೋಮವಾರ ಬಸವೇಶ್ವರ ದೇವಸ್ಥಾನದಲ್ಲಿ ದೇವತೆಯನ್ನು ಪ್ರತಿಷ್ಠಾಪಿಸಿ, ಮೂರು ವಾರಗಳಿಂದ ಪೂಜಾ ಕೈಂಕರ್ಯಗಳೊಂದಿಗೆ ನೆರವೇರಿಸಿ, ಪ್ರತಿ ಶ್ರಾವಣ ಬುಧವಾರ ಸಂಜೆ ಭಜನೆ, ಪುರಾಣ ನಡೆಸಿ ಕೊನೆಯ ದಿನ ದೇವರಿಗೆ ವಿಶೇಷ ಪೂಜೆ ನೈವೇದ್ಯ ಮಾಡಿ ಸಾರ್ವಜನಿಕರಿಗೆ ಪ್ರಸಾದ ವಿತರಣೆ ಮಾಡುವುದರೊಂದಿಗೆ ಗ್ರಾಮದ ಗಡಿಯಲ್ಲಿ ದೇವತೆಯನ್ನು ವಿಸರ್ಜನೆಯನ್ನು ಮಾಡಿ ಪುನಃ ಬಂದು ಗ್ರಾಮದ ಆಂಜನೇಯ ಸ್ವಾಮಿಗೆ ನಮಸ್ಕರಿಸಿ ಗ್ರಾಮಸ್ಥರು ತೀರ್ಥ ತೆಗೆದುಕೊಂಡು ಹೋಗುವುದು ಪ್ರತೀತಿಯಾಗಿದೆ ಎಂದು ತಿಳಿಸಿದರು. ಊರಿನ ಗ್ರಾಮಸ್ಥರು ಮಹಿಳೆಯರು ಮತ್ತು ಪುರುಷರು ಸೇರಿದಂತೆ ಸಾವಿರಾರು ಭಕ್ತರು ದೇವಿಯ ಉತ್ಸವದಲ್ಲಿ ಪಾಲ್ಗೊಂಡಿದ್ದರು.