ದಾವಣಗೆರೆ: ಬೆಂಗಳೂರಿನಲ್ಲಿ ಭಾರತದ ಭೇಟಿಗೆ ಆಗಮಿಸಿದ್ದ ಜರ್ಮನಿಯ ಸಂಸತ್ ಸದಸ್ಯ ಜೇನ್ಸ್ ಗೀಯರ್ ನೇತೃತ್ವದ ನಿಯೋಗವು ವಿಕಾಸಸೌಧದಲ್ಲಿ ವಿಧಾನಸಭೆ ಸ್ಪೀಕರ್ ಯು. ಟಿ. ಖಾದರ್, ಅರಣ್ಯ ಸಚಿವ ಈಶ್ವರ್ ಖಂಡ್ರೆ, ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿ ಮಾಡಿತು.
ಈ ಸಂದರ್ಭದಲ್ಲಿ ಜರ್ಮನಿಯ ಸಂಸತ್ ಸದಸ್ಯ ಜೇನ್ಸ್ ಗೀಯರ್ ಹಾಗೂ ಬುಂಡೆಸ್ಟಾಗ್ ನ ಸದಸ್ಯ ಬೆಂಗ್ಟ್ ಬರ್ಗ್ಟ್, ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ನ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಸೇರಿದಂತೆ ನಾಯಕರು ಹಾಜರಿದ್ದರು.
ಈ ವೇಳೆ ಪರಿಸರ ಸಂರಕ್ಷಣೆ, ವಾಯುಮಾಲಿನ್ಯ, ರಾಜ್ಯ ಮತ್ತು ರಾಷ್ಟ್ರ ರಾಜಕೀಯ ಕುರಿತಂತೆ ನಿಯೋಗವು ಸಚಿವರೊಂದಿಗೆ ಸಮಾಲೋಚನೆ ನಡೆಸಿತು. ಹವಾಮಾನ ವೈಪರೀತ್ಯ, ಪುನರ್ ಬಳಕೆ ವಸ್ತುಗಳು, ಅರಣ್ಯಕ್ಕೆ ಸಂಬಂಧಿಸಿದಂತೆ ಹತ್ವದ ವಿಚಾರಗಳ ಕುರಿತಂತೆ ಸಮಾಲೋಚನೆ ನಡೆಸಿತು.
ಸಭೆಯ ಬಳಿಕ ಮಾತನಾಡಿದ ಸೈಯದ್ ಖಾಲಿದ್ ಅಹ್ಮದ್ ಅವರು, ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರೊಂದಿಗೆ ಜರ್ಮನಿಯ ಸಂಸತ್ ಸದಸ್ಯರು ನಡೆಸಿದ ಮಾತುಕತೆ ಯಶಸ್ವಿಯಾಗಿದೆ. ರಾಜ್ಯದಲ್ಲಿ ಅರಣ್ಯ ಸಂರಕ್ಷಣೆ, ಆಗುತ್ತಿರುವ ತೊಂದರೆಗಳು, ಅನಾಹುತಗಳು, ಅರಣ್ಯ ಒತ್ತುವರಿ, ವನ್ಯಜೀವಿಗಳು ಸೇರಿದಂತೆ ಹತ್ತು ಹಲವು ವಿಷಯಗಳ ಕುರಿತಂತೆ ಸಮಾಲೋಚನೆ ನಡೆಸಲಾಯಿತು. ಸಚಿವರು ಸೂಕ್ತವಾಗಿ ಸ್ಪಂದಿಸಿದರು. ಈ ಭೇಟಿಯಲ್ಲಿ ಹಲವು ವಿಚಾರಗಳ ಕುರಿತಂತೆ ಚರ್ಚಿಸಲಾಯಿತು ಎಂದು ತಿಳಿಸಿದರು.
ವಿಧಾನಸಭೆ ಸ್ಪೀಕರ್ ಯು. ಟಿ. ಖಾದರ್, ಸಚಿವ ಪ್ರಿಯಾಂಕ್ ಖರ್ಗೆ ಅವರನ್ನೂ ಭೇಟಿ ಮಾಡಿ ರಾಜ್ಯಕ್ಕೆ ಸಂಬಂಧಿಸಿದಂತೆ ಹತ್ತು ಹಲವು ವಿಚಾರಗಳ ಕುರಿತಂತೆ ಸಮಾಲೋಚನೆ ನಡೆಸಲಾಯಿತು. ಸಚಿವರೊಂದಿಗೆ ಜರ್ಮನಿ ಸದಸ್ಯರು ಮಹತ್ವದ ವಿಚಾರಗಳನ್ನು ಹಂಚಿಕೊಂಡರು. ಪರಿಸರ ಸಂರಕ್ಷಣೆ, ವಸ್ತುಗಳ ಪುನರ್ಬಳಕೆ, ಸ್ಥಳೀಯ ಸಂಪನ್ಮೂಲ ಕ್ರೋಢೀಕರಣ, ಹವಾಮಾನ ಬದಲಾವಣೆ, ಹೆಚ್ಚುತ್ತಿರುವ ವಾಯು ಮಾಲಿನ್ಯ, ಸಂಪನ್ಮೂಲಗಳ ಮರುಬಳಕೆ ಸೇರಿದಂತೆ ಇತರೆ ವಿಷಯಗಳ ಕುರಿತಂತೆ ಚರ್ಚಿಸಲಾಯಿತು ಎಂದು ಮಾಹಿತಿ ನೀಡಿದರು.