ದಾವಣಗೆರೆ,ಸೆಪ್ಟೆಂಬರ್.12 ವಿಶ್ವಸಂಸ್ಥೆ ಸೆಪ್ಟೆಂಬರ್ 15 ನ್ನು ಅಂತರಾಷ್ಟ್ರೀಯ ಪ್ರಜಾಪ್ರಭುತ್ವದ ದಿನವೆಂದು ಘೋಷಣೆ ಮಾಡಿದ್ದು ಈ ದಿನ ಸಂವಿಧಾನ ಜಾಗೃತಿ ಮೂಡಿಸಲು ಜಿಲ್ಲೆಯಲ್ಲಿ 80 ಕಿಲೋಮೀಟರ್ ಬೃಹತ್ ಮಾನವ ಸರಪಳಿ ನಿರ್ಮಾಣ ಮಾಡುವ ಮೂಲಕ ಸಂವಿಧಾನದ ಜಾಗೃತಿ ಮತ್ತು ಆಶಯಗಳನ್ನು ಜನರಿಗೆ ತಲುಪಿಸಲು ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು.
ಅವರು ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದರು. ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ರಾಜ್ಯ ಸರ್ಕಾರ ಬಹಳ ವಿನೂತನವಾದ ಕಾರ್ಯಕ್ರಮ ಹಮ್ಮಿಕೊಂಡಿದೆ. ಬೀದರ್ನಿಂದ ಚಾಮರಾಜನಗರದ ವರೆಗೂ ಮಾನವ ಸರಪಳಿ ನಿರ್ಮಾಣ ಮಾಡುವ ಮೂಲಕ ಬೃಹತ್ ಸಂವಿಧಾನ ಜಾಗೃತಿ ಮೂಡಿಸುವ ಕಾರ್ಯಕ್ರಮ ಇದಾಗಿದ್ದು ಜಿಲ್ಲೆಯ 80 ಕಿ.ಮೀ ದೂರ ಇದು ಹಾದುಹೋಗಲಿದೆ. ಈ ವ್ಯಾಪ್ತಿಯಲ್ಲಿ ಮಾನವ ಸರಪಳಿ ನಿರ್ಮಾಣಕ್ಕಾಗಿ ಸುಮಾರು 70 ಸಾವಿರಕ್ಕಿಂತಲೂ ಹೆಚ್ಚು ಜನರು ಭಾಗಿಯಾಗಲು ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದರು.
ಸೆಪ್ಟೆಂಬರ್ 15 ರ ಬೆಳಿಗ್ಗೆ 8.30 ರಿಂದ 9.30 ವರೆಗೆ ಮಾನವ ಸರಪಳಿ ಕಾರ್ಯಕ್ರಮ ನಡೆಯಲಿದ್ದು ದಾವಣಗೆರೆ ಜಿಲ್ಲೆಯ ಗಡಿ ತಾಲ್ಲೂಕು ನ್ಯಾಮತಿಯ ಟಿ.ಗೋಪಗೊಂಡನಹಳ್ಳಿಯಿಂದ ಹರಿಹರ ಪಟ್ಟಣ ಸೇರಿದಂತೆ ರಾಣೆಬೆನ್ನೂರು ಗಡಿ ಕೋಡಿಯಾಲದವರೆಗೆ ಸುಮಾರು 80 ಕಿ.ಮೀ ಉದ್ದದ ಮಾನವ ಸರಪಳಿ ಇದಾಗಿದೆ. 10 ಗ್ರಾಮ ಪಂಚಾಯಿತಿಗಳು, ಎರಡು ಸ್ಥಳೀಯ ಸಂಸ್ಥೆಗಳು, 25 ಗ್ರಾಮಗಳ ವ್ಯಾಪ್ತಿಯಲ್ಲಿ ಹಾದುಹೋಗಲಿದೆ ಎಂದರು.
ಜಿಲ್ಲೆಯ ಎಲ್ಲಾ ಶಾಲಾ, ಕಾಲೇಜಿನ ವಿದ್ಯಾರ್ಥಿಗಳು, ಸಂಘ ಸಂಸ್ಥೆಯ ಪ್ರತಿನಿಧಿಗಳು, ಸಾರ್ವಜನಿಕರು, ಮಹಿಳೆಯರು, ಸ್ವಸಹಾಯ ಸಂಘದವರು ಸೇರಿದಂತೆ ಸಾವಿರಾರು ಪ್ರತಿನಿಧಿಗಳು ಭಾಗವಹಿಸುತ್ತಿದ್ದು ಆಸಕ್ತ ಸಾರ್ವಜನಿಕರು, ಕಲಾವಿದರು ತಮಗೆ ಹತ್ತಿರವಾಗುವ ಸ್ಥಳದಲ್ಲಿ ಭಾಗಿಯಾಗಬಹುದು. ಮತ್ತು ವಿವಿಧ ಮಠಾಧೀಶರನ್ನು ಆಹ್ವಾನಿಸಲಾಗುತ್ತಿದ್ದು ಅವರಿಗೆ ಅನುಕೂಲವಾಗುವ ಸ್ಥಳದಲ್ಲಿ ಭಾಗವಹಿಸಬಹುದಾಗಿದೆ, ಅವರೆಲ್ಲರಿಗೂ ಆಮಂತ್ರಣ ಕಳುಹಿಸಲಾಗುತ್ತದೆ ಎಂದರು.
ಮಾನವ ಸರಪಳಿ ನಿರ್ಮಾಣದ ವೇಳೆ ಪ್ರತಿ 100 ಮೀಟರ್ ಗೆ ಒಬ್ಬ ವಿಭಾಗಾಧಿಕಾರಿ, ಕಿಲೋಮೀಟರ್ಗೆ ಒಬ್ಬರಂತೆ ನೋಡಲ್ ಅಧಿಕಾರಿಗಳನ್ನು ಉಸ್ತುವಾರಿಗಾಗಿ ನೇಮಕ ಮಾಡಲಾಗುತ್ತದೆ. ಈ ದಿನವನ್ನು ವಿಶೇಷ ಕರ್ತವ್ಯ ದಿನವನ್ನಾಗಿ ಘೋಷಣೆ ಮಾಡಿದ್ದು ಎಲ್ಲ ಶಾಲಾ, ಕಾಲೇಜಿನ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಾಗವಹಿಸಬೇಕು. ಇದಕ್ಕಾಗಿ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಲು ವಿವಿಧ ವಾಹನಗಳ ಜೊತೆಗೆ 200 ಶಾಲಾ ಬಸ್ಗಳ ವ್ಯವಸ್ಥೆ ಮಾಡಲಾಗಿದೆ ಎಂದರು.
ಸೆಪ್ಟೆಂಬರ್ 15 ರಂದು ಬೆಳಗ್ಗೆ 8.30 ಕ್ಕೆ ರಸ್ತೆಯ ಎಡ ಭಾಗದಲ್ಲಿ ಮಾನವ ಸರಪಳಿ ನಿರ್ಮಾಣ ಕಾರ್ಯ ಆರಂಭವಾಗಲಿದೆ. ನಂತರ 9 ಗಂಟೆಗೆ ಮಾನವ ಸರಪಳಿ ರಚಿಸಲಾಗುತ್ತದೆ. 9-15 ರ ವರೆಗೆ ಛಾಯಾಚಿತ್ರ ತೆಗೆದು ನಂತರ ಸಂವಿಧಾನ ಪೀಠಿಕೆ ಓದಿದ ನಂತರ 9.30 ಕ್ಕೆ ಕಾರ್ಯಕ್ರಮ ಮುಕ್ತಾಯವಾಗಲಿದೆ. ಅಲ್ಲಿಯೇ ಸುಮಾರು 10 ಸಾವಿರ ಸಸಿ ನೆಡುವ ಕಾರ್ಯಕ್ರಮದ ಜೊತೆಗೆ ಸ್ವಚ್ಚತಾ ಪಾಕ್ಷಿಕದ ಅಂಗವಾಗಿ ಸ್ವಚ್ಚತೆಯೇ ಸೇವಾ ಕಾರ್ಯಕ್ರಮದ ಅಂಗವಾಗಿ ಪ್ಲಾಸ್ಟಿಕ್ ಸಂಗ್ರಹಿಸಲಾಗುತ್ತದೆ.
ಕಾರ್ಯಕ್ರಮದ ಆರಂಭಿಕ ಸ್ಥಳ ನ್ಯಾಮತಿ ಟಿ.ಗೋಪಗೊಂಡನಹಳ್ಳಿಯಲ್ಲಿ ಶಾಸಕರು ಭಾಗವಹಿಸಲಿದ್ದು ಹರಿಹರ ನಗರದ ಮಹಾತ್ಮ ಗಾಂಧಿ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಭಾಗವಹಿಸಲಿದ್ದು ಸಂಸದರು, ಶಾಸಕರು, ಜನಪ್ರತಿನಿಧಿಗಳು ಭಾಗವಹಿಸುವರು. ಇಲ್ಲಿ ಸಿದ್ದಗಂಗಾ ಶಾಲಾ ಮಕ್ಕಳಿಂದ ವಿನೂತನವಾಗಿ ಭಾರತ ಭೂಪಟ ರಚನೆ ಮಾಡುವ ಮೂಲಕ ಕಾರ್ಯಕ್ರಮದ ಮುಕ್ತಾಯವಾಗಲಿದೆ. ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಹಾಗೂ ಯಶಸ್ವಿಯಾಗಿ ಆಯೋಜಿಸಲು ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸುವ ಆಸಕ್ತರು https;//www.democracydaykarnataka.in/registration ಲಿಂಕ್ ಮೂಲಕ ನೊಂದಾಯಿಸಬಹುದಾಗಿದೆ, ಇಲ್ಲಿಯವರೆಗೆ ಸುಮಾರು 7000 ಜನರು ನೊಂದಾಯಿಸಿದ್ದು ಹೆಚ್ಚು ಜನರು ನೊಂದಾಯಿಸಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಪ್ರಮಾಣ ಪತ್ರ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಸರ್ಕಾರಿ ನೌಕರರು ಕಡ್ಡಾಯ ಭಾಗಿ; ಎಲ್ಲಾ ಇಲಾಖೆಗಳ ಹೊರಗುತ್ತಿಗೆ ಸೇರಿದಂತೆ ಖಾಯಂ ಸಿಬ್ಬಂದಿ, ಅಧಿಕಾರಿಗಳು, ಅನುದಾನಿತ ಶಾಲಾ, ಕಾಲೇಜಿನ ಸಿಬ್ಬಂದಿ, ಬೋಧಕರು, ಅನುದಾನ ರಹಿತ ಶಾಲಾ, ಕಾಲೇಜಿನ ಸಿಬ್ಬಂದಿ, ಬೋಧಕ ವರ್ಗದವರು ಬೆಳಗ್ಗೆ 7 ಗಂಟೆಗೆ ಆಯಾ ತಾಲ್ಲೂಕು ತಹಶೀಲ್ದಾರರ ಕಚೇರಿಯಲ್ಲಿ ವರದಿ ಮಾಡಿಕೊಂಡು ಮಾನವ ಸರಪಳಿ ನಿರ್ಮಾಣದಲ್ಲಿ ಭಾಗವಹಿಸಬೇಕು. ದಾವಣಗೆರೆ ಹಾಗೂ ಜಗಳೂರು ತಾಲ್ಲೂಕಿನವರು ಹರಿಹರ ತಹಶೀಲ್ದಾರರ ಕಚೇರಿಯಲ್ಲಿ ವರದಿ ಮಾಡಿಕೊಳ್ಳಬೇಕು, ಚನ್ನಗಿರಿ ಹಾಗೂ ನ್ಯಾಮತಿ ತಾಲ್ಲೂಕಿನವರು ಹೊನ್ನಾಳಿ ತಹಶೀಲ್ದಾರರ ಕಚೇರಿಯಲ್ಲಿ ವರದಿ ಮಾಡಿಕೊಳ್ಳಬೇಕೆಂದು ಸೂಚಿಸಲಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್ ಮಾತನಾಡಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ನಡೆಯುವ ಮಾನವ ಸರಪಳಿ ನಿರ್ಮಾಣಕ್ಕಾಗಿ ಗ್ರಾಮ ಮಟ್ಟದಲ್ಲಿ ಯೋಜನೆ ರೂಪಿಸಿಕೊಳ್ಳಲಾಗಿದೆ. 10 ಗ್ರಾಮ ಪಂಚಾಯಿತಿಗಳ ವ್ಯಾಪ್ತಿ ಬರಲಿದ್ದು ಅಲ್ಲಿನ ಸಾರ್ವಜನಿಕರು, ಪಂಚಾಯಿತಿ ಸದಸ್ಯರು ಭಾಗಿಯಾಗುವಂತೆ ಎಲ್ಲಾ ಸಂಘಟನೆಗಳೊಂದಿಗೆ ಮನವಿ ಮಾಡಲಾಗಿದೆ. ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 1 ರವರೆಗೆ ಸ್ವಚ್ಚತಾ ಸೇವಾ ಪಾಕ್ಷಿಕ ಅಂಗವಾಗಿ ಸ್ವಚ್ಚತಾ ಕಾರ್ಯ ಕೈಗೊಳ್ಳುವುದು, ತಾಯಿಯ ಹೆಸರಲ್ಲಿ ಪ್ರತಿಯೊಬ್ಬರೂ ಒಂದು ಗಿಡ ನೆಡುವ ಕಾರ್ಯಕ್ರಮವನ್ನು ಅಂದು ರೂಪಿಸಿಕೊಳ್ಳಲಾಗಿದೆ ಎಂದರು.
ಘನತ್ಯಾಜ್ಯ ಸಂಗ್ರಹಣಾ ಕೇಂದ್ರ, ಸ್ವಚ್ಚತಾ ಘಟಕ ನಿರ್ವಹಣೆ, ಸಾರ್ವಜನಿಕ ಶೌಚಾಲಯಗಳ ಉದ್ಘಾಟನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಅಂದು ರೂಪಿಸಿಕೊಳ್ಳಲಾಗಿದೆ ಎಂದರು.
ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ಮಾತನಾಡಿ 80 ಕಿ.ಮೀ ಉದ್ದದ ಮಾನವ ಸರಪಳಿ ನಿರ್ಮಾಣ ಮಾಡುವುದರಿಂದ ಶಾಲಾ, ಕಾಲೇಜಿನ ಮಕ್ಕಳು, ಸಾರ್ವಜನಿಕರು ಭಾಗಿಯಾಗುವುದರಿಂದ ಇಲಾಖಾ ಸಿಬ್ಬಂದಿಗಳ ಜೊತೆಗೆ ಎನ್.ಸಿ.ಸಿ. ಜೊತೆಗೆ ಗೃಹರಕ್ಷಕ ದಳದ ಸಿಬ್ಬಂದಿಗಳನ್ನು ನೇಮಕ ಮಾಡಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗುತ್ತದೆ ಎಂದರು.