ದಾವಣಗೆರೆ: ಸಿಎಂ ಸಿದ್ದರಾಮಯ್ಯರ ಜನಪ್ರಿಯತೆಗೆ ಮಸಿ ಬಳಿಯುವ ಪ್ರಯತ್ನ ಮಾಡಲಾಗಿದೆ. ಹೈಕೋರ್ಟ್ ಈಗ ಮುಡಾ ಪ್ರಕರಣ ಸಂಬಂಧ ರಾಜ್ಯಪಾಲರ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಲಾಗಿದ. ಆದ್ರೆ, ಸಿದ್ದರಾಮಯ್ಯರ ರಾಜೀನಾಮೆ ಕೇಳಲು ಬಿಜೆಪಿಗೆ ಯಾವುದೇ ನೈತಿಕತೆ ಇಲ್ಲ ಎಂದು ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ನ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಎಲೆಕ್ಟ್ರಾಲ್ ಬಾಂಡ್ ಸೇರಿದಂತೆ ಹಲವು ಭ್ರಷ್ಟಾಚಾರ ಆರೋಪಗಳು ಕೇಳಿ ಬಂದಿದೆ. ಸುಪ್ರೀಂಕೋರ್ಟ್ ತನಿಖೆಗೆ ಆದೇಶಿಸಿದೆ. ಮೋದಿ ಅವರ ರಾಜೀನಾಮೆಯನ್ನು ಯಾಕೆ ಬಿಜೆಪಿ ಆಗ್ರಹಿಸಿಲ್ಲ. ಕೇಂದ್ರದ ಮಿತ್ರಪಕ್ಷಗಳು ಒತ್ತಾಯಿಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ – ಜೆಡಿಎಸ್ ದುಷ್ಟಕೂಟ ಮೈತ್ರಿ ಮಾಡಿಕೊಂಡು ರಾಜ್ಯದಲ್ಲಿ ಸಿದ್ದರಾಮಯ್ಯರ ಜನಪರ ಕಾರ್ಯಕ್ರಮಗಳಿಗೆ ತಡೆ ಹಾಕಲು ಸಂಚು ರೂಪಿಸಿದವು. ಇದು ಸಾಧ್ಯವಾಗದಿದ್ದಕ್ಕೆ ಸರ್ಕಾರ ಹಾಗೂ ಸಿದ್ದರಾಮಯ್ಯರ ಇಮೇಜ್ ಗೆ ಮಸಿ ಬಳಿಯಲು ಷಡ್ಯಂತ್ರ ರೂಪಿಸಿರುವುದು ಸ್ಪಷ್ಟವಾಗಿದೆ. ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ರಾಜಭವನ ಈಗ ರಾಜಕೀಯ ಭವನ ಆಗಿದೆ ಎಂದು ಸಚಿವರು ನೇರವಾಗಿ ಆರೋಪ ಮಾಡುತ್ತಿದ್ದಾರೆ. ಸಿದ್ದರಾಮಯ್ಯರ ಪರ ಬಡವರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲಾ ಸಮುದಾಯವರು ಇದ್ದಾರೆ. ಆರೋಪ ಮುಕ್ತರಾಗಿ ಹೊರಬರುತ್ತಾರೆಂಬ ವಿಶ್ವಾಸ ಇದೆ
ಎಂದು ಹೇಳಿದ್ದಾರೆ.

ನಾಲ್ಕು ದಶಕಗಳ ಕಾಲ ಸಚ್ಚಾರಿತ್ರ್ಯ ರಾಜಕಾರಣ ಮಾಡಿದ್ದಾರೆ. ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯರ ತಪ್ಪಿಲ್ಲದಿದ್ದರೂ ದೂರು ನೀಡಲಾಗಿತ್ತು. ಹೈಕೋರ್ಟ್ ತನಿಖೆ ನಡೆಸಬಹುದು ಎಂದು ಹೇಳಿದೆ. ಆದ್ರೆ, ಇನ್ನೂ ತನಿಖೆ ಆಗಬೇಕಿದೆ. ಮಾಜಿ ಸಿಎಂ ಬಿ. ಎಸ್.ಯಡಿಯೂರಪ್ಪ ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲಿಗೆ ಹೋಗಿ ಬರಲಿಲ್ವಾ. ಮಾಜಿ ಸಿಎಂ ಹಾಗೂ ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದಿಲ್ಲವೇ? ಹೆಚ್ ಡಿಕೆ ಸಹೋದರ ಹೆಚ್. ಡಿ. ರೇವಣ್ಣರ ಪುತ್ರ ಪ್ರಜ್ವಲ್ ರೇವಣ್ಣ ಜೈಲಿನಲ್ಲಿ ಇಲ್ಲವಾ? ಸಲಿಂಗ ಕಾಮ ಆರೋಪದಡಿ ಸೂರಜ್ ರೇವಣ್ಣ ಜೈಲಿಗೆ ಹೋಗಿ ಬಂದಿಲ್ವಾ? ಬಿಜೆಪಿ ನಾಯಕರು ಶೇಕಡಾ 40ರಷ್ಟು ಕಮೀಷನ್ ಪಡೆದ ಆರೋಪ ಕೇಳಿ ಬಂದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ, ಹೆಚ್. ಡಿ. ಕುಮಾರಸ್ವಾಮಿ ಸೇರಿದಂತೆ ಬಿಜೆಪಿ ನಾಯಕರ ಮೇಲೆ ಭ್ರಷ್ಟಾಚಾರ ಆರೋಪ ಇಲ್ಲವೇ? ರಾಜ್ಯಪಾಲರು ಕೇವಲ ಸಿದ್ದರಾಮಯ್ಯರ ವಿರುದ್ಧ ದೂರು ಬಂದಾಕ್ಷಣ ತೋರಿದಷ್ಟು ಆತುರ ಬಿಜೆಪಿ ನಾಯಕರ ವಿರುದ್ಧ ಯಾಕೆ ತೋರುತ್ತಿಲ್ಲ. ಪ್ರಾಸಿಕ್ಯೂಷನ್ ಗೆ ಅನುಮತಿ ನೀಡದಿರುವುದು ಗಮನಿಸಿದರೆ ಪ್ರಧಾನಿ ಮೋದಿ ಅವರ ಅಣತಿಯಂತೆ ನಡೆದುಕೊಳ್ಳುತ್ತಿರುವುದು ಸ್ಪಷ್ಟವಾಗಿದೆ. ಇವೆಲ್ಲಾ ಷಡ್ಯಂತ್ರಗಳಿಂದ ಸಿದ್ದರಾಮಯ್ಯ ಆರೋಪ ಮುಕ್ತರಾಗಿ ಹೊರಬರಲಿದ್ದಾರೆ ಎಂದು ಸೈಯದ್ ಖಾಲಿದ್ ಅಹ್ಮದ್ ಹೇಳಿದ್ದಾರೆ.

Leave a Reply

Your email address will not be published. Required fields are marked *