ದಾವಣಗೆರೆ: ಕ್ಲೌಡ್ ಸ್ಟೇಜ್ ಸಂಸ್ಥೆಯೂ ಟ್ಯಾಪ್ ಆನ್ ಕಾರ್ಡ್ಸ್ ಯೋಜನೆಯಡಿ ಭಾರತ ದೇಶಾದ್ಯಾಂತ ನೂರು ಕೋಟಿ ಸಸಿ ನೆಡುವ ಮಹತ್ವದ ಯೋಜನೆಗೆ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ರವರು ಚಾಲನೆ ನೀಡಿದರು. ವೈಯಕ್ತಿಕ ವಿವರದ ಮಾಹಿತಿ ಹೊಂದಿರುವ ಟ್ಯಾಪ್ ಆನ್ ಡಿಜಿಟಲ್ ಕಾರ್ಡ್ ಬಿಡುಗಡೆಗೊಳಿಸಿ, ಸಸಿ ನೆಡುವ ಯೋಜನೆಗೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಒಂದು ಟ್ಯಾಪ್ ಆನ್ ಕಾರ್ಡ್ ಪಡೆದರೆ ಅದರ ಜೊತೆ ಒಂದು ಸಸಿ ನೆಟ್ಟು ಪೋಷಣೆ ಮಾಡುವುದು ಜಾಗತಿಕ ಪರಿಸರ ಸಂರಕ್ಷಣೆ ಮಹತ್ವದ ಜವಾಬ್ದಾರಿಯನ್ನು ಕ್ಲೌಡ್ ಸ್ಟೇಜ್ ಸಂಸ್ಥೆಯು ತೆಗೆದುಕೊಂಡಿರುವುದು ಸಾಮಾನ್ಯ ವಿಷಯವಲ್ಲ ಇದೊಂದು ದೂರ ದೃಷ್ಟಿಯ ಮಹತ್ವದ ಯೋಜನೆಯಾಗಿದೆ ಎಂದರು.
ದಾವಣಗೆರೆ ಜಿಲ್ಲೆಯನ್ನು ಹಸಿರುಕರಣ ಮಾಡುವ ನನ್ನ ಕನಸಿಗೆ ಇದು ಒಂದು ಪೂರಕ ಕಾರ್ಯಕ್ರಮವಾಗಿದ್ದು ಇದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಡಾ. ಪ್ರಭಾ ಮಲ್ಲಿಕಾರ್ಜುನ್ ರವರು ತಿಳಿಸಿದರು.
ಇದೇವೇಳೆ ಮಾತನಾಡಿದ ಕ್ಲೌಡ್ ಸ್ಟೇಜ್ ನ ನಿರ್ದೇಶಕರಾದ ಕು.ಕಾವ್ಯಶ್ರೀ ಅವರು ಇತ್ತೀಚಿಗೆ ಅರಣ್ಯ ನಾಶವಾಗುತ್ತಿದ್ದು ಜಾಗತಿಕ ಮಟ್ಟದಲ್ಲಿ ಕಾಡನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಈ ಹಿನ್ನೆಲೆ ನಮ್ಮ ಸಂಸ್ಥೆಯ ವತಿಯಿಂದ ಟ್ಯಾಪ್ ಆನ್ ಕಾರ್ಡ್ಸ್ ಪರಿಚಯಿಸುವ ಜೊತೆಗೆ ನೂರು ಕೋಟಿ ಸಸಿ ನೆಡುವ ಕಾರ್ಯಕ್ರಮವನ್ನು ಜಾರಿಗೊಳಿಸಿದೆ ಎಂದರು.
ಈ ಒಂದು ಟ್ಯಾಪ್ ಆನ್ ಡಿಜಿಟಲ್ ಕಾರ್ಡ್ ಪಡೆದರೆ ನಾವೇ ಒಂದು ಸಸಿ ನೆಟ್ಟು ಅದರ ಪೋಷಣೆಯನ್ನು ಮಾಡುತ್ತೇವೆ ,ಸಸಿ ನೆಡುವ ಬಗ್ಗೆ ಈಗಾಗಲೇ ಅರಣ್ಯ ಇಲಾಖೆ ಜೊತೆ ಚರ್ಚೆ ಕೂಡ ಮಾಡಿದ್ದು ಈ ಮೂಲಕ ಭಾರತ ದೇಶವನ್ನು ಹಸಿರೀಕರಣ ಮಾಡುತ್ತೇವೆ ಎಂದು ಟ್ಯಾಪ್ ಆನ್ ಕಾರ್ಡ್ಸ್ ಯೋಜನಾ ಮತ್ತು ತಾಂತ್ರಿಕ ನಿರ್ದೇಶಕರಾದ ಶ್ರೀ ಸಚಿನ್ ಅವರು ತಿಳಿಸಿದರು.
ತಾಪಮಾನ ವೈಪರೀತ್ಯದಿಂದ, ಪರಿಸರ ನಾಶದಿಂದ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿವೆ ಈ ಕಾರಣ ಟ್ಯಾಪ್ ಆನ್ ಕಾರ್ಡ್ಸ್ ಮೂಲಕ ಮರು ಅರಣ್ಯೀಕರಣ ಮಾಡುವುದು ನಮ್ಮ ಸಂಸ್ಥೆ ಉದ್ದೇಶವಾಗಿದೆ ಇದರ ಯಶಸ್ವಿಗೆ ಸಂಘ ಸಂಸ್ಥೆ ಸೇರಿದಂತೆ ಎಲ್ಲರೂ ಕೈ ಜೋಡಿಸಬಹುದೆಂದು ತಿಳಿಸಿದರು. ಈ ಸಂದರ್ಭದಲ್ಲಿ ಕ್ಲೌಡ್ ಸ್ಟೇಜ್‍ನ ನಿರ್ದೇಶಕರು ಶ್ರೀದೇವಿ ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.