ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾ ಬಂಜಾರ ಸಂಘಕ್ಕೆ ರಾಜ್ಯ ಸರ್ಕಾರ ಆಡಳಿತಾಧಿಕಾರಿ ನೇಮಕ ಮಾಡಿರುವುದು ಸಮಾಜಕ್ಕೆ ಹೊಸ ವಿಷಯವಾಗಿ ಉಳಿದಿಲ್ಲ. ಸಂಘವು ಅಸ್ತಿತ್ವಕ್ಕೆ ಬಂದ ದಿನದಿಂದಲೂ ಈ ರೀತಿಯ ಚಟುವಟಿಕೆ ನಡೆಯುತ್ತಲೇ ಬಂದಿದೆ ಎಂದರು.

ಈ ಹಿಂದೆ ಸಂಘದ ಅಧ್ಯಕ್ಷರಾಗಿದ್ದ ಮಂಡೇನಕೊಪ್ಪ ನಾನ್ಯಾನಾಯ್ಕ್, ಶಾಂತವೀರ ನಾಯ್ಕ್, ಕುಮಾರನಾಯ್ಕ್, ಭೋಜ್ಯಾನಾಯ್ಕ್, ಆರ್.ಸಿ. ನಾಯ್ಕ್ ಇವರ ಅವಧಿಯಲ್ಲೂ ಕೂಡ ಆಡಳಿತಾಧಿಕಾರಿ ನೇಮಿಸುವಂತೆ ಸರ್ಕಾರಕ್ಕೆ ಮೂಕರ್ಜಿ ಬರೆಯುವಂತಹ ಪ್ರಕ್ರಿಯೆಗಳು ನಡೆಯುತ್ತಲೇ ಬಂದಿದೆ ಎಂದರು.

2021ರ ಜುಲೈನಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಚುನಾವಣೆ ಘೋಷಣೆಯಾಗಿ ಸಮಾಜದ ಎಲ್ಲಾ ಪ್ರಮುಖರು ಸೇರಿ ಸರ್ವಾನುಮತದಿಂದ ಶಾಸಕರಾಗಿದ್ದ ಕೆ.ಬಿ. ಅಶೋಕ್ ನಾಯ್ಕ್ ಅವರನ್ನು ಜಿಲ್ಲಾ ಬಂಜಾರ ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಂಘದ ಖಾತೆಯಲ್ಲಿ ಕೇವಲ 59 ಸಾವಿರ ರೂ. ಮಾತ್ರ ಇತ್ತು. ಸಂಘದ ನಿರ್ದೇಶಕರು ಹಾಗೂ ಸಮಾಜದ ಹಿರಿಯ ಸಲಹೆಯಂತೆ ಪಾಳು ಬಿದ್ದಿದ್ದ ಸಂಘದ ಜಾಗದಲ್ಲಿ ಸಮಾಜದ ಬಂಧುಗಳಿಗೆ ಶುಭ ಕಾರ್ಯ ಹಮ್ಮಿಕೊಳ್ಳಲು ಸಮುದಾಯಯ ಭವನ, ನಿರುದ್ಯೋಗಿ ಯುವಕ, ಯುವತಿಯರಿಗೆ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕೇಂದ್ರ, ಬಂಜಾರ ಸಮುದಾಯದ ಪ್ರತೀಕವಾದ ವಿಶಿಷ್ಟ ಕಲೆಯಾದ ಹೆಣ್ಣುಮಕ್ಕಳಿಗೆ ಕಸೂತಿ ತರಬೇತಿ ಕೇಂದ್ರ ಹಾಗೂ ಸಮಾಜದ ಅಭಿವೃದ್ಧಿ ಚಟುವಟಿಕೆಗಳಿಗೆ ಪ್ರೇರಣೆ ನೀಡುವ ಸಲುವಾಗಿ ಬಾಲರಾಜ ಅರಸ್ ರಸ್ತೆಯಲ್ಲಿ ಸಂಘದಲ್ಲಿ ಸಮುದಾಯ ಭವನ ನಿರ್ಮಾಣವಾಗಿದೆ ಎಂದರು.

ಪ್ರಸ್ತುತ ಆಡಳಿತಾಧಿಕಾರಿ ನೇಮಕ ವಿಷಯಕ್ಕೆ ಸಂಬಂಧಿಸಿದಂತೆ ಕೆಲ ವ್ಯಕ್ತಿಗಳು ಅಭಿವೃದ್ಧಿ ಕಾರ್ಯ ಜೀರ್ಣಿಸಿಕೊಳ್ಳಲು ಆಗದೇ ಸಂಘದ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುವ ಮೂಲಕ ಇಡೀ ಬಂಜಾರ ಸಮುದಾಯಕ್ಕೆ ಮಸಿ ಬಳಿಯುವ ಷಡ್ಯಂತ್ರ ರೂಪಿಸಿದ್ದಾರೆ ಎಂದು ಆರೋಪಿಸಿದರು.

ಸುಮಾರು 12 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಸೌಲಭ್ಯದೊಂದಿಗೆ ನಿರ್ಮಾಣವಾಗಿರುವ ಬಂಜಾರ ಕನ್ವೆನ್ಷನ್ ಹಾಲ್ ಶಿವಮೊಗ್ಗ ಜಿಲ್ಲೆಗೆ ಮಾತ್ರವಲ್ಲದೇ ಇಡೀ ರಾಜ್ಯದ ಗಮನಸೆಳೆದಿದೆ. ಆದರೆ ಇಷ್ಟೊಂದು ದೊಡ್ಡ ಮೊತ್ತದ ಅನುದಾನ ಮಂಜೂರು ಮಾಡಿಸಿ ಅನುಷ್ಠಾನಗೊಳಿಸುವುದು ಒಂದು ಸವಾಲಿನ ಕೆಲಸ. ಇನ್ನು ಭವನ ನಿರ್ಮಾಣ ಮಾಡಿದ ಗುತ್ತಿಗೆದಾರನಿಗೆ ಇನ್ನೂ 1.80 ಕೋಟಿ ರೂ. ಹಣ ಪಾವತಿಸಬೇಕಾಗಿದೆ. ಈ ದೊಡ್ಡ ಭೌನ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ, ಸಮಾಜದ ಗಣ್ಯ ವ್ಯಕ್ತಿಗಳಿಂದ, ತಾಂಡಾಗಳಿಂದ, ನೌಕರ ವರ್ಗ ಹಾಗೂ ಇತರೆ ಕೊಡಗೈ ದಾನಿಗಳ ಸಹಯೋಗದೊಂದಿಗೆ ಸುಸಜ್ಜಿತ ಭವನ ನಿರ್ಮಾಣವಾಗಿದೆ. ಜಿಲ್ಲಾ ಸಂಘದ ಆಡಳಿತ ಮಂಡಳಿತ ಅವಿರತ ಶ್ರಮ ಹಾಗೂ ಸೀಮಿತ ಅವಧಿಯಲ್ಲಿ ಭವನ ನಿರ್ಮಿಸಿ ಪೂರ್ಣಗೊಳಿಸಿ ಉದ್ಘಾಟನೆ ಮಾಡಲಾಗಿದೆ ಎಂದರು.

ಸಂಘದ ಅಜೀವ ಸದಸ್ಯರಾಗಿದ್ದ ಶಶಿಕುಮಾರ್, ರೇಣುನಾಯ್ಕ್, ಗೇಮ್ಯಾನಾಯ್ಕ್ ಇವರನ್ನು ಸಂಘದ ವಿರೋಧಿ ಚಟುವಟಿಕೆ ನಡೆಸುತ್ತಿದ್ದರಿಂದ ಇಡೀ ಸಮಾಜ ಹೊರಗೆ ಹಾಕಿದೆ. ಇವರು ಸಂಘಕ್ಕೆ ಕಳಂಕ ತಂದಿದ್ದಾರೆ. ಸಂಘ ಸಮಾಜಕ್ಕೆ ಅನ್ಯಾಯ ಮಾಡಿಲ್ಲ. ಈ ಮೂವರು ಸಂಘದ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಾ ಸರ್ಕಾರಕ್ಕೆ ಮೂಕರ್ಜಿಗಳನ್ನು ಬರೆಯುತ್ತಿದ್ದಾರೆ. ಈ ಮೂಕರ್ಜಿಗಳನ್ನು ಇಟ್ಟುಕೊಂಡು ಸರ್ಕಾರದ ಮೇಲೆ ಒತ್ತಡ ತಂದಿದ್ದಲ್ಲದೇ ರಾಜಕೀಯ ಪ್ರಭಾವ ಬಳಸಿ ಸಂಘಕ್ಕೆ ಆಡಳಿತಾಧಿಕಾರಿ ನೇಮಕವಾಗುವಂತೆ ಮಾಡಿದ್ದಾರೆ ಎಂದು ಆರೋಪಿಸಿದರು.

ಸಂಘದ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಮಾಡಿರುವ ಬಗ್ಗೆ ಅವರು ದಾಖಲೆ ನೀಡಬೇಕು. ಇಲ್ಲದಿದ್ದರೆ ಅವರ ವಿರುದ್ಧ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ಸಂಘದ ನಿರ್ದೇಶಕ ಭೋಜ್ಯಾನಾಯ್ಕ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ನಾಗೇಶ್ ನಾಯ್ಕ್, ಕುಮಾರ್ ನಾಯ್ಕ್, ಹೀರಾ ನಾಯ್ಕ್, ನಾಗರಾಜ್ ನಾಯ್ಕ್, ವಾಸುದೇವ ನಾಯ್ಕ್, ಕುಮಾರನಾಯ್ಕ್, ಶೋಭ್ಯಾನಾಯ್ಕ್, ಬಸವರಾಜ್ ನಾಯ್ಕ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *