ದಾವಣಗೆರೆ: ಮಹಾರಾಷ್ಟ್ರದ ವಿಧಾನಸಭೆ ಚುನಾವಣಾ ಕಣ ರಂಗೇರುತ್ತಿದೆ. ನಾಗ್ಪುರ ಸೆಂಟ್ರಲ್ ಕ್ಷೇತ್ರದಿಂದ ಕಣಕ್ಕಿಳಿದಿರುವ ಬಂಟೆ ಶೆಲ್ಕೆ ಪರ ಅಖಿಲ ಭಾರತ ಕಾಂಗ್ರೆಸ್ ರಾಷ್ಟ್ರೀಯ ಕಾಂಗ್ರೆಸ್ ಯುವ ಘಟಕದ
ರಾಷ್ಟ್ರಾಧ್ಯಕ್ಷ ಉದಯ್ ಭಾನು ಹಾಗೂ ರಾಷ್ಟ್ರೀಯ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಬಿರುಸಿನ ಪ್ರಚಾರ ನಡೆಸಿದರು.
ಅಭ್ಯರ್ಥಿ ಬಂಟೆ ಶೆಲ್ಕೆ ಅವರು 2019ರ ವಿಧಾನಸಭೆ ಚನಾವಣೆಯಲ್ಲಿ ಕೇವಲ ನಾಲ್ಕು ಸಾವಿರ ಮತಗಳ ಅಂತರದಿಂದ ಸೋಲು ಕಂಡಿದ್ದರು. ಆದ್ರೆ, ಈ ಬಾರಿ ಕ್ಷೇತ್ರದಲ್ಲಿ ಉತ್ತಮ ವಾತಾವರಣ ಇದ್ದು, ಗೆಲ್ಲುವ
ಸಾಧ್ಯತೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಈ ಹಿಂದೆ ತೆಲಂಗಾಣದಲ್ಲಿ ತನಗೆ ವಹಿಸಿದ್ದ ಜವಾಬ್ದಾರಿ ನಿಭಾಯಿಸಿದ್ದ ಸೈಯದ್ ಖಾಲಿದ್ ಅಹ್ಮದ್ ಅವರನ್ನು ಪ್ರಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆ.
ಪ್ರಚಾರದ ವೇಳೆ ಮಾತನಾಡಿದ ಸೈಯದ್ ಖಾಲಿದ್ ಅಹ್ಮದ್ ಅವರು, ಪಕ್ಷವು ನನಗೆ ವಹಿಸಿದ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸುತ್ತಿದ್ದೇನೆ. ಈ ಹಿಂದೆ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ನೀಡಿದ್ದ ಜವಾಬ್ದಾರಿ ನಿಭಾಯಿಸಿದ್ದು, ಪ್ರಚಾರ ನಡೆಸಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ್ದೆವು. ಕ್ಷೇತ್ರಾದ್ಯಂತ ಪ್ರಚಾರ ನಡೆಸುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿ ಬಂಟೆ ಶೆಲ್ಕೆ ಪರ ಅಲೆ ಇದೆ ಎಂದು ತಿಳಿಸಿದರು.
ಭಾರತೀಯ ಯುವ ಕಾಂಗ್ರೆಸ್‌ನಲ್ಲಿ ಪ್ರಧಾನ ಕಾರ್ಯದರ್ಶಿಯಾಗಿರುವ ಬಂಟೆ ಶೆಲ್ಕೆ ಅವರು ಕರ್ನಾಟಕದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದರು. ಈ ಮೂಲಕ ಕಾಂಗ್ರೆಸ್ ಹೈಕಮಾಂಡ್ ಗೆ ಹತ್ತಿರವಾಗಿದ್ದರು. ಆದ್ರೆ, ಈಗ ಅವರಿಗೆ ಟಿಕೆಟ್ ನೀಡಿದ್ದು, ಈ ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಬಾರಿಸುತ್ತಾರೆ ಎಂಬ ವಿಶ್ವಾಸ ಇದೆ ಎಂದು ಸೈಯದ್ ಖಾಲಿದ್ ಅಹ್ಮದ್ ಹೇಳಿದರು.
ಪ್ರಚಾರದ ವೇಳೆ ಕಾಂಗ್ರೆಸ್ ಮುಖಂಡರಾದ ಅಜಯ್ ಚಿಕಾರ್, ರೋಹಿತ್, ಮುಕೇಶ್, ಕೃಷ್ಣ ರಾಜು, ಜ್ಯೋತಿಶ್ ಮತ್ತಿತರರು ಪಾಲ್ಗೊಂಡಿದ್ದರು.