ಕನ್ನಡ ನಾಡು ಕಲೆ ಸಾಹಿತ್ಯ ಸಂಸ್ಕೃತಿಗಳ ತವರೂರಾಗಿದೆ. ಇಂತಹ ಪುಣ್ಯಭೂಮಿಯಲ್ಲಿ ಜನಿಸಿ ತಮ್ಮ ಬದುಕನ್ನು ಕಟ್ಟಿಕೊಂಡ ಕನ್ನಡಿಗರೇ ಭಾಗ್ಯಶಾಲಿಗಳು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ವಾಮದೇವಪ್ಪ ಬಣ್ಣಿಸಿದರು. ಅವರಿಂದು ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ದಾವಣಗೆರೆ ವಿದ್ಯಾನಗರ ಲಯನ್ಸ್ ಕ್ಲಬ್ ಹಾಗೂ ಶರಧಿ ಕಲಾ ಸಾಂಸ್ಕೃತಿಕ ಸಂಸ್ಥೆಗಳು ಜಂಟಿಯಾಗಿ ಆಯೋಜಿಸಿದ್ದ ೬೯ ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ನಾಡಧ್ವಜವನ್ನು ಆರೋಹಣ ಮಾಡಿ ಮಾತಾಡುತ್ತಿದ್ದರು. ವಿಶ್ವದ ಯಾವುದೇ ಭಾಷೆಗಿರದ ಐತಿಹಾಸಿಕ ಪರಂಪರೆ, ಸಾಂಸ್ಕೃತಿಕ ಸೊಗಡು ಕನ್ನಡ ಭಾಷೆಗಿದೆ. ಸಾವಿರಾರು ವರ್ಷಗಳ ಭವ್ಯ ಪರಂಪರೆಯಿದೆ. ಇಂತಹ ಪವಿತ್ರವಾದ ಕನ್ನಡ ಭಾಷೆಯನ್ನು ಇನ್ನಷ್ಟು ವೈಭವೀಕರಿಸಿ ಕನ್ನಡ ಭಾಷೆಯ ಬಳಸುವಿಕೆಯನ್ನು ಹೆಚ್ಚಿಸುವುದು ನಮ್ಮ ಸಂಕಲ್ಪವಾಗಬೇಕು ಎಂದರು.
ದಾವಣಗೆರೆ-ವಿದ್ಯಾನಗರ ಲಯನ್ಸ್ ಕ್ಲಬ್‌ನ ಅಧ್ಯಕ್ಷ ಎಲ್.ಎಸ್.ಪ್ರಭುದೇವ್ ರಾಜ್ಯೋತ್ಸವದ ಅಂಗವಾಗಿ ರಾಷ್ಟ್ರಧ್ವಜವನ್ನು ಆರೋಹಣ ಮಾಡಿ ಮಾತಾಡಿ ಕನ್ನಡವನ್ನೇ ಎಲ್ಲಾ ಕಡೆ ಬಳಸುವುದರ ಮೂಲಕ ಕನ್ನಡ ನುಡಿಯನ್ನು ಹೆಚ್ಚು ಪ್ರಚಲಿತಗೊಳಿಸಿ ನಮ್ಮತನವನ್ನು ಮೆರೆಯಬೇಕು. ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಎನ್ನುವ ರಾಷ್ಟ್ರ ಕವಿ ಕುವೆಂಪು ವಾಣಿಯು ನಮ್ಮ ಪ್ರತಿ ನಿತ್ಯದ ಸ್ಮರಣೆಯಾಗಬೇಕು ಎಂದರು.
ಪ್ರಾಸ್ತಾವಿಕವಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷ ಕೆ.ರಾಘವೇಂದ್ರ ನಾಯರಿ ಮಾತನಾಡಿ ಕರ್ನಾಟಕ ರಾಜ್ಯೋತ್ಸವವು ಪ್ರತಿಯೊಬ್ಬ ಕನ್ನಡಿಗನ ಮನೆಯಲ್ಲಿ ಆಚರಿಸಬೇಕು. ಕನ್ನಡ ನಾಡು – ನುಡಿ – ನೆಲ – ಜಲ – ಕಲೆ – ಸಂಸ್ಕೃತಿಗಳ ರಕ್ಷಣೆ ಸರ್ವ ಕನ್ನಡಿಗರ ಹೊಣೆಗಾರಿಕೆಯಾಗಿದೆ. ಕನ್ನಡ ನಾಡು ನುಡಿಯ ಅಸ್ಮಿತೆಗೆ ಆಪತ್ತು ಬಂದಾಗ, ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಕನ್ನಡಿಗರೆಲ್ಲರೂ ಒಂದಾಗಿ ಹೋರಾಡಬೇಕು. ಕನ್ನಡ ನಾಡು ನುಡಿಯ ಉನ್ನತಿಗಾಗಿ ವರ್ಷವಿಡೀ ಕೆಲಸ ಮಾಡುವ ಏಕೈಕ ಸಂಸ್ಥೆ ಅಂದರೆ ಅದು ಸರ್ವ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು. ೧೯೧೫ ರಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಮಹತ್ವಾಕಾಂಕ್ಷೆಯ ಫಲವಾಗಿ ಸ್ಥಾಪನೆಗೊಂಡ ಕನ್ನಡ ಸಾಹಿತ್ಯ ಪರಿಷತ್ತು ೧೦೯ ವರ್ಷಗಳ ಭವ್ಯವಾದ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿದೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಬಿ.ದಿಳ್ಯಪ್ಪ ಅವರ ಪರಿಕಲ್ಪನೆಯಲ್ಲಿ ರಾಜ್ಯೋತ್ಸವದ ಅಂಗವಾಗಿ ಕನ್ನಡ ಭವನವನ್ನು ವಿಶೇಷವಾಗಿ ಶೃಂಗರಿಸಿದ್ದು ಸಮಾರಂಭಕ್ಕೆ ಮೆರಗು ನೀಡಿತ್ತು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಸುಮತಿ ಜಯಪ್ಪ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಬಿ.ಪರಮೇಶ್ವರಪ್ಪ, ಶರಧಿ ಕಲಾ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷೆ ವಿದುಷಿ ಶೋಭಾ ರಂಗನಾಥ್ ಕನ್ನಡಾಂಬೆ ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ರಾಜ್ಯೋತ್ಸವ ಸಂಭ್ರಮಕ್ಕೆ ಚಾಲನೆ ನೀಡಿದರು. ಕವಿ ಕೆ.ಎಸ್.ನಿಸಾರ್ ಅಹಮದ್ ರಚಿತ “ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ” ಹಾಡನ್ನು ಕಲಾವಿದ ಹೆಗ್ಗೆರೆ ರಂಗಪ್ಪ ಪ್ರಸ್ತುತ ಪಡಿಸಿದರು. ಕವಿ ಪಿ.ಜಯರಾಮನ್ ಅವರು ಕರ್ನಾಟಕ ಸಂಭ್ರಮ-೫೦ ರ ಅಂಗವಾಗಿ ವಿಶೇಷವಾಗಿ ರಚಿಸಿದ ಕವನವನ್ನು ಓದಿದರು. ಶರಧಿ ಕಲಾ ಸಾಂಸ್ಕೃತಿಕ ಸಂಸ್ಥೆಯ ವಿದ್ಯಾರ್ಥಿಗಳು ರಾಷ್ಟ್ರಗೀತೆ ಹಾಗೂ ನಾಡಗೀತೆಯನ್ನು ಪ್ರಸ್ತುತಪಡಿಸಿದರು. ಭಾರತ ಸೇನಾದಳದ ಸಂಪನ್ಮೂಲ ವ್ಯಕ್ತಿಗಳಾದ ಗೋಪಾಲಪ್ಪ ಎ.ಆರ್. ಹಾಗೂ ಹೆಚ್.ಹನುಮಂತಪ್ಪ ಧ್ವಜ ನಿರ್ವಹಣೆ ಮಾಡಿದರು. ಬಿ.ದಿಳ್ಯಪ್ಪ ಸ್ವಾಗತಿಸಿದರು, ಕೆ.ರಾಘವೇಂದ್ರ ನಾಯರಿ ನಿರೂಪಣೆ ಮಾಡಿದರು ಹಾಗೂ ಸತ್ಯಭಾಮ ಮಂಜುನಾಥ್ ವಂದನಾರ್ಪಣೆ ಮಾಡಿದರು.
ರಾಜ್ಯೋತ್ಸವ ಸಮಾರಂಭದಲ್ಲಿ ಮಹಾನಗರ ಪಾಲಿಕೆ ಸದಸ್ಯೆ ಗೌರಮ್ಮ ಗಿರೀಶ್, ಬಾ.ಮ.ಬಸವರಾಜಯ್ಯ, ಕಲಾವಿದ ಮಹಾಲಿಂಗಪ್ಪ, ನಿವೃತ್ತ ಪ್ರಾಚಾರ್ಯ ಗುಡ್ಡಪ್ಪ, ಹೆಚ್.ಎನ್.ಶಿವಕುಮಾರ್, ಹೆಗ್ಗೆರೆ ರಂಗಪ್ಪ, ಎನ್.ಎಸ್.ರಾಜು, ವೀಣಾ ಕೃಷ್ಣಮೂರ್ತಿ, ಎಸ್.ಎಂ.ಮಲ್ಲಮ್ಮ, ಸುದರ್ಶನ್, ಸೌಮ್ಯ ಸತೀಶ್ ಹಾಗೂ ಜಿಲ್ಲಾ ಕಸಾಪ, ತಾಲೂಕು ಕಸಾಪ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ವಿದ್ಯಾನಗರ ಲಯನ್ಸ್ ಕ್ಲಬ್‌ನ ಪದಾಧಿಕಾರಿಗಳು ಹಾಗು ಶರಧಿ ಕಲಾ ಸಾಂಸ್ಕೃತಿಕ ಸಂಸ್ಥೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.