ದಾವಣಗೆರೆ.ನವೆಂಬರ್ ೭ ; ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಧಾನ್ಯಗಳ ವಿತರಣೆಯಲ್ಲಿ ಆಗುವ ತೂಕದ ವ್ಯತ್ಯಾಸ, ಆಹಾರಧಾನ್ಯಗಳ ಗುಣಮಟ್ಟ ಪರಿಶೀಲನೆ ಮಾಡುವಂತೆ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಅಧ್ಯಕ್ಷರಾದ ಶಾಮನೂರು ಟಿ. ಬಸವರಾಜ್ ಅಧಿಕಾರಿಗಳಿಗೆ ಸೂಚಿಸಿದರು.
ಅವರು (ನ.೦೭) ರಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯೋಜನೆಯ ಪ್ರಗತಿಯನ್ನು ಪರಿಶೀಲಿಸಲಾಯಿತು, ಗ್ಯಾರಂಟಿ ಯೋಜನೆ ಫಲಾನುಭವಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಬ್ಯಾಂಕ್ ಕೆವೈಸಿ, ಬಯೋಮೆಟ್ರಿಕ್ ಮೂಲಕ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗುವಂತೆ ಕ್ರಮವಹಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ ಇಟ್ನಾಳ್ ಮಾತನಾಡುತ್ತಾ, ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಪ್ರತಿಯೊಬ್ಬ ಅರ್ಹ ನಾಗರಿಕರಿಗೂ ಸಿಗುವಂತಾಗಬೇಕು. ಈ ಯೋಜನೆಗಳು ಯಾರಿಗೆ ತಲುಪುತ್ತಿಲ್ಲ, ಅಂತವರಿಗೆ ಈಗಾಲೇ ಅರಿವು ಕಾರ್ಯಕ್ರಮ ಮಾಡಲಾಗಿದೆ. ಇನ್ನೂ ವೇಗದ ರೀತಿಯಲ್ಲಿ ಕಾರ್ಯನಿರ್ವಹಿಸಲಾಗುವುದು ಎಂದು ತಿಳಿಸಿದರು.
ಅನ್ಯಭಾಗ್ಯ ಯೋಜನೆಯಡಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಶಾಮನೂರ ಟಿ.ಬಸವರಾಜ್‌ರವರು ತಹಶೀಲ್ದಾರರು ಹಾಗೂ ಉಪ ವಿಭಾಗಾಧಿಕಾರಿಗಳು ಜಂಟಿಯಾಗಿ ಎಲ್ಲಾ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಪಡಿತರ ವಿತರಣೆ, ಪಡಿತರ ಧಾನ್ಯಗಳ ವಿತರಣೆಯಲ್ಲಿ ಆಗುವ ತೂಕದ ವ್ಯತ್ಯಾಸ, ಆಹಾರ ಧಾನ್ಯಗಳ ಗುಣಮಟ್ಟ ಪರಿಶೀಲನೆ ಮಾಡುವಂತೆ ಸೂಚಿಸಿದರು. ಜಿಲ್ಲಾ ಮಟ್ಟದ ಅಧಿಕಾರಿಗಳು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಹಾಗೂ ಗ್ಯಾರಂಟಿ ಯೋಜನೆ ನಾಮನಿರ್ದೇಶಿತ ಸದಸ್ಯರುಗಳು ಮಾತನಾಡಿ ಹೆಚ್ಚುವರಿಯಾಗಿ ಬಿ.ಪಿ.ಎಲ್ ಕಾರ್ಡ್ಗಳಲ್ಲಿ ೨೦೦೦ ನಕಲಿ ಕಾರ್ಡ್ಗಳು ಇವೆ ಎಂದು ಪತ್ರಿಕೆಯಲ್ಲಿ ಪ್ರಕಟವಾದ ಬಗ್ಗೆ ಅಧ್ಯಕ್ಷರ ಗಮನಕ್ಕೆ ತಂದರು. ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದರು.
ಶಕ್ತಿ ಯೋಜನೆಯಡಿ ದಾವಣಗೆರೆ ವಿಭಾಗ ವ್ಯಾಪ್ತಿಯಲ್ಲಿ ೧೧ ಜೂನ್ ೨೦೨೩ ರಿಂದ ಅಕ್ಟೋಬರ್ ೨೦೨೪ ರವರೆಗೆ ಒಟ್ಟಾರೆ ೫೩೫೧೫೫೮೩ ಪ್ರಯಾಣಿಕರು ಬಸ್‌ಗಳಲ್ಲಿ ಸಂಚರಿಸಿದ್ದು, ಪ್ರಯಾಣ ವೆಚ್ಚವಾಗಿ ಒಟ್ಟು ರೂ.೧೪೬.೧೪ ಕೋಟಿಗಳನ್ನು ಸರ್ಕಾರ ಭರಿಸುತ್ತಿದೆ ಎಂದು ಮಾಹಿತಿ ನೀಡಿದರು.
ಗೃಹಲಕ್ಷ್ಮಿ ಯೋಜನೆಯಡಿ ೩೬೬೯೩೭ ಫಲಾನುಭವಿಗಳು ನೊಂದಣಿಯಾಗಿದ್ದು ಇದರಲ್ಲಿ ೩೬೯೬೭೭ ಫಲಾನುಭವಿಗಳಿಗೆ ರೂ.೩೫೭.೪೨ ಕೋಟಿ ಡಿಬಿಟಿ ಮೂಲಕ ಪಾವತಿಸಲಾಗಿದೆ.
ಯುವನಿಧಿ ಯೋಜನೆಯಡಿ ಜನವರಿ ೨೦೨೪ ರಿಂದ ಜುಲೈ ೨೦೨೪ರವರೆಗೆ ೧೯೫೩೯ ಪದವಿ ಫಲಾನುಭವಿಗಳಿಗೆ ಡಿ.ಬಿ.ಟಿ. ಮೂಲಕ ಪಾವತಿಯಾದ ಮೊತ್ತ ರೂ.೫೮೬೧೭೦೦೦ ಹಾಗೂ ೨೪೩ ಡಿಪ್ಲೊಮೋ ಫಲಾನುಭವಿಗಳಿಗೆ ರೂ.೩೬೪೫೦೦ ಗಳನ್ನು ಪಾವತಿಸಲಾಗಿದೆ.
ಗೃಹಜ್ಯೋತಿ ಯೋಜನೆಯಡಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಚಾಲ್ತಿಯಲ್ಲಿರುವ ೪೮೬೯೭೭ ಸ್ಥಾವರಗಳಲ್ಲಿ ೪೩೪೦೦೨ ಸ್ಥಾವರಗಳ ಫಲಾನುಭವಿಗಳು ಇದರ ಲಾಭ ಪಡೆಯುತ್ತಿದ್ದು, ೫೨೯೭೫ ಆರ್. ಆರ್. ಸಂಖ್ಯೆ ಹೊಂದಿರುವ ಫಲಾನುಭವಿಗಳು ಮಾತ್ರ ಗೃಹಜ್ಯೋತಿ ಯೋಜನೆಗೆ ನೋಂದಣಿಯಾಗಿರುವುದಿಲ್ಲ ಎಂದು ಮಾಹಿತಿ ನೀಡಿದರು.
ಸದಸ್ಯರಾದ ಶಶಿಕಲಾಮೂರ್ತಿ ಎಂ.ಜಿ ಮಾತನಾಡಿ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಪ್ರತಿಯೊಬ್ಬರಿಗೂ ತಲುಪುವಂತೆ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗಿದೆ. ಇದರಲ್ಲಿ ಕೆಲವು ಫಲಾನುಭವಿಗಳಿಗೆ ಈ ಯೋಜನೆ ತಲುಪಿರುವುದಿಲ್ಲ. ಹಾಗಾಗಿ ಪಂಚ ಗ್ಯಾರೆಂಟಿ ಯೋಜನೆಯ ಅಧಿಕಾರಿಗಳು ಯೋಜನೆಗಳ ಲೋಪ ದೋಷಗಳನ್ನು ಪರಿಶೀಲಿಸಿ ಎಲ್ಲಾ ಫಲಾನುಭವಿಗಳಿಗೆ ದೊರೆಯುವಂತೆ ಮಾಡಬೇಕು ಎಂದು ಸಭೆಗೆ ತಿಳಿಸಿದರು.
ಸುಭಾನ್‌ಸಾಬ್ ಮಾತನಾಡಿ ಕೆಲವೊಂದು ನ್ಯಾಯಬೆಲೆ ಅಂಗಡಿಗಳಲ್ಲಿ ಕಳಪೆ ಗುಣಮಟ್ಟದ ರಾಗಿಯನ್ನು ಹಂಚಿಕೆ ಮಾಡಲಾಗಿದೆ ಎಂದು ಸಭೆಯ ಗಮನಕ್ಕೆ ತಂದಾಗ ಮುಂದಿನ ದಿನಗಳಲ್ಲಿ ಮಾಹಿತಿ ಕಲೆಹಾಕಿ ಗುಣಮಟ್ಟದ ರಾಗಿ ವಿತರಿಸಲಾಗುವುದು ಎಂದು ಆಹಾರ ಇಲಾಖೆ ಉಪನಿರ್ದೇಶಕರಾದ ಸಿದ್ದರಾಮ್ ಮಾರಿಹಾಳ್ ತಿಳಿಸಿದರು.
ಎಸ್.ಎಸ್ ಗಿರೀಶ್ ಮಾತನಾಡಿ ವಿದ್ಯಾರ್ಥಿಗಳಿಗೆ ಕಾಲೇಜಿಗೆ ಹೋಗುವುದಕ್ಕೆ ಸರಿಯಾದ ಸಮಯಕ್ಕೆ ಸಿಟಿ ಬಸ್ಸುಗಳು ಬರುತ್ತಿಲ್ಲ, ಹಾಗಾಗಿ ಇನ್ನೂ ಕೆಲವೊಂದು ಬಸ್ಸುಗಳನ್ನು ಯಾವ ಮಾರ್ಗದಲ್ಲಿ ಸರಿಯಾದ ಸಮಯದಲ್ಲಿ ಇಲ್ಲವೋ, ಅಂತಹ ಮಾರ್ಗಗಳಿಗೆ ಹೆಚ್ಚುವರಿ ಬಸ್ಸುಗಳನ್ನು ಬಿಡಬೇಕೆಂದು ಸಭೆಗೆ ತಿಳಿಸಿದರು.
ಡೋಲಿ ಚಂದ್ರು ಮಾತನಾಡಿ ಕೆಲವೊಂದು ನ್ಯಾಯಬೆಲೆ ಅಂಗಡಿಯಲ್ಲಿ ಅಕ್ಕಿ ರಾಗಿ, ಗೋಧಿ ವಿತರಣೆಯಲ್ಲಿ ತಾರತಮ್ಯ ಮಾಡುತ್ತಿರುವ ನ್ಯಾಯಬೆಲೆ ಅಂಗಡಿಗಳಲ್ಲಿ ಶಿಸ್ತು ಕ್ರಮಕೈಗೊಳ್ಳಬೇಕು ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಮುಖ್ಯ ಯೋಜನಾಧಿಕಾರಿ ಮಲ್ಲಾನಾಯ್ಕ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರುಗಳಾದ ನಂಜಾನಾಯ್ಕ, ಅನೀಪ್ ಷಾ ಹಾಗೂ ಅನುಷ್ಠಾನ ಸಮಿತಿಯ ಎಲ್ಲಾ ಸದಸ್ಯರುಗಳು, ಉಪಸ್ಥಿತರಿದ್ದರು.