ನ್ಯಾಮತಿ: ಕುರುವ ಗ್ರಾಮದಲ್ಲಿ ನೂತನ ಆಂಜನೇಯ ಸ್ವಾಮಿ, ಬಸವೇಶ್ವರ ಸ್ವಾಮಿಗಳ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಕಾರ್ಯಕ್ರಮಗಳು ಜ.30ರಿಂದ ಫೆ.2ರವರೆಗೆ ನಡೆಯಲಿದೆ ಎಂದು ದೇವಸ್ಥಾನ ಸಮಿತಿಯವರು ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಜ.30ರಂದು ದಿಪಾಲೆ ಕಂಬದ ಸ್ಥಾಪನೆ, 31ರಂದು ರಾತ್ರಿ ಗಣಪತಿ ಪೂಜೆ,ಪುಣ್ಯಾಹ, ನವಗ್ರಹ ಶಾಂತಿ, ವಾಸ್ತು, ರಾಕ್ಷೋಘ್ನ ಹೋಮ ನಡೆಯಲಿದೆ.
ಫೆ.1ರಂದು ಸಂಜೆ 6 ಗಂಟೆಯಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವರುಗಳ ಮೆರವಣಿಗೆ ನಡೆದ ನಂತರ ರಾತ್ರಿ ಪುಣ್ಯಾಹ, ನಾಂದಿ, ಅಂಕುರಾರ್ಪಣೆ, ಋತ್ವಿಗ್ವರಣೆ, ಆಧಿವಾಸ ಹೋಮ, ಆದಿವಾಸ ಪೂಜೆ ನೆರವೇರಲಿದೆ.
ಫೆ.2ರಂದು ಬ್ರಾಹ್ಮಿ ಮೂಹೂರ್ತದಲ್ಲಿ ಗಂಗಾಪೂಜೆ, ಪ್ರತಿಷ್ಠಾಪನೆ, ಕಳಸಾರೋಹಣ, ಮಹಾಮಂಗಳಾರತಿ ನಡೆದ ನಂತರ ಮಧ್ಯಾಹ್ನ 12 ಗಂಟೆಗೆ ನಡೆಯಲಿರುವ ಧರ್ಮಸಭೆಯ ನೇತೃತ್ವವನ್ನು ಹಿರೇಕಲ್ಮಠ ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯಸ್ವಾಮಿಜಿ, ರಾಂಪುರ ಹಾಲಸ್ವಾಮಿಮಠದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಮತ್ತು ಗೋವಿನಕೋವಿ ಹಾಲಸ್ವಾಮಿಜಿ ಮಠದ ಪೀಠಾಧ್ಯಕ್ಷರಾದ ಶಿವಯೋಗಿ ಮಹಾಲಿಂಗಸ್ವಾಮಿಜಿ ವಹಿಸಲಿದ್ದಾರೆ.
ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಸಂಸದೆ ಪ್ರಭಾ ಮಲ್ಲಿಕಾರ್ಜುನ, ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕ ಡಿ.ಜಿ.ಶಾಂತನಗೌಡ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಉಪಸ್ಥಿತರಿರುವರು, ಸಂಜೆ 6-30ಕ್ಕೆ ರಸಮಂಜರಿ ಕಾರ್ಯಕ್ರಮ ಇರುತ್ತದೆ.
ದೇವಸ್ಥಾನ ವತಿಯಿಂದ ಸಾಮೂಹಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಈ ಎಲ್ಲಾಧಾರ್ಮಿಕ ಕಾರ್ಯಕ್ರಮಗಳ ನೇತೃತ್ವವನ್ನು ಆಂಜನೇಯಸ್ವಾಮಿ ಆಡಳಿತ ಮಂಡಳಿ,ಬಸವೇಶ್ವರಸ್ವಾಮಿ ಆಡಳಿತ ಮಂಡಳಿ ಹಾಗೂ ಕುರುವ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು, ಭಕ್ತಾದಿಗಳು ವಹಿಸಲಿದ್ದಾರೆ ಎಂದರು.
