ವಸತಿ ಶಿಕ್ಷಣ ಸಂಸ್ಥೆಗಳಿಂದ ನಡೆಸಲಾಗುತ್ತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸೇರಿದಂತೆ ವಿವಿಧ ವಸತಿ ಶಾಲೆಗಳಲ್ಲಿ ೨೦೨೫-೨೬ ನೇ ಸಾಲಿಗೆ 6 ನೇ ತರಗತಿ ಪ್ರವೇಶಕ್ಕೆ ಫೆಬ್ರವರಿ 15 ರಂದು ಜಿಲ್ಲೆಯ 15 ಕೇಂದ್ರಗಳಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಪ್ರವೇಶ ಪರೀಕ್ಷೆ ನಡೆಯಲಿದೆ ಎಂದು ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್ ತಿಳಿಸಿದರು.
    ಶುಕ್ರವಾರ (ಫೆ.14)ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪರೀಕ್ಷಾ ಪೂರ್ವ ಸಿದ್ದತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 6ನೇ ತರಗತಿ ಪ್ರವೇಶ ಪಡೆಯಲು ಪ್ರಸಕ್ತ ಸಾಲಿನಲ್ಲಿ 5 ನೇ ತರಗತಿ ಓದುತ್ತಿರುವ 5368 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದು ಇವರು ಪ್ರವೇಶ ಪರೀಕ್ಷೆ ಬರೆಯಲಿದ್ದಾರೆ ಎಂದರು.
 ದಾವಣಗೆರೆ-2, ಹರಿಹರ-3, ಹೊನ್ನಾಳಿ-3, ನ್ಯಾಮತಿ-1, ಚನ್ನಗಿರಿ-3, ಜಗಳೂರು-3 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.
ಕೇಂದ್ರಗಳಲ್ಲಿ ಆಸನದ ವ್ಯವಸ್ಥೆ, ಕುಡಿಯುವ ನೀರು, ಗಾಳಿ, ಬೆಳಕು ಇರುವಂತೆ ಮೂಲಭೂತ ಸೌಕರ್ಯ ಕಲ್ಪಿಸಬೇಕು. ಫೆಬ್ರವರಿ 15 ರಂದು ಮಧ್ಯಾಹ್ನ 2.30 ರಿಂದ 4.30ರವರೆಗೆ 100 ಅಂಕಗಳಿಗೆ ಪರೀಕ್ಷೆ ನಡೆಯಲಿದೆ ಎಂದರು. ಪ್ರವೇಶ ಪರೀಕ್ಷೆಯನ್ನು ವ್ಯವಸ್ಥಿತ ರೀತಿಯಲ್ಲಿ ಯಾವುದೇ ಗೊಂದಲಗಳಿಗೆ ಅವಕಾಶ ಮಾಡಿಕೊಡದಂತೆ, ಪರೀಕ್ಷಾ ಪಾವಿತ್ರ್ಯತೆಯನ್ನು ಕಾಪಾಡಿಕೊಂಡು ನಡೆಸಬೇಕು. ಪರೀಕ್ಷಾ ಕೇಂದ್ರಗಳಿಗೆ ನಿಗದಿತ ವೇಳೆಯೊಳಗೆ ಆಯಾ ಮಾರ್ಗಾಧಿಕಾರಿಗಳು ಪ್ರಶ್ನೆಪತ್ರಿಕೆಯನ್ನು ತಲುಪಿಸಬೇಕು. ಪರೀಕ್ಷೆ ಬಳಿಕ ಎಲ್ಲ ಸುರಕ್ಷತಾ ಕ್ರಮಗಳನ್ನು ಕೈಗೊಂಡು, ನಿಗದಿತ ಸ್ಥಳಕ್ಕೆ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನಕ್ಕಾಗಿ ತಲುಪಿಸುವ ಕಾರ್ಯವನ್ನು ಕೈಗೊಳ್ಳಬೇಕು. ಈಗಾಗಲೆ ಪರೀಕ್ಷಾ ದಿನದಂದು ಪರೀಕ್ಷಾ ಕೇಂದ್ರಗಳ ಸುತ್ತ ಮುತ್ತ 200 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಪೊಲೀಸ್ ಇಲಾಖೆಯವರು ಪರೀಕ್ಷಾ ದಿನದಂದು ಕೇಂದ್ರಗಳಿಗೆ ಸೂಕ್ತ ಬಂದೋಬಸ್ತ್ ಕೈಗೊಳ್ಳಬೇಕು. ಪರೀಕ್ಷಾ ಕೇಂದ್ರದೊಳಗೆ ಯಾವುದೇ ಮೊಬೈಲ್, ಎಲೆಕ್ಟ್ರಾನಿಕ್ಸ್  ಉಪಕರಣಗಳನ್ನು ಬಳಸದಂತೆ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು, ಹಾಗೂ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರ ಪ್ರವೇಶ ಸಂದರ್ಭದಲ್ಲಿ ಸೂಕ್ತ ರೀತಿಯಲ್ಲಿ ತಪಾಸಣೆಯನ್ನು ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
  ಕೊಠಡಿ ಮೇಲ್ವಿಚಾರಕರು ಅಭ್ಯರ್ಥಿಗಳಿಗೆ ಓಎಂಆರ್ ಉತ್ತರ ಪತ್ರಿಕೆಯನ್ನು ನೀಡುವ ಸಂದರ್ಭದಲ್ಲಿ ಅಭ್ಯರ್ಥಿಯ ನೋಂದಣಿ ಸಂಖ್ಯೆಯನ್ನು ಒಎಂಆರ್ ಉತ್ತರ ಪತ್ರಿಕೆಯಲ್ಲಿ ಸ್ಪಷ್ಟವಾಗಿ ಬರೆದು ಸಂಬಂಧಿಸಿದ ವೃತ್ತಗಳನ್ನು ಶೇಡ್ ಮಾಡಿ ನಂತರ ಅಭ್ಯರ್ಥಿಗಳಿಗೆ ನೀಡಬೇಕು.
 ಸಭೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಕರಿಸಿದ್ದಪ್ಪ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You missed