ನ್ಯಾಮತಿ:
ಭಗವಂತನ ಮುಂದೆ ಯಾವುದೇ ಧರ್ಮದವರು ಆದರೂ ಸಮಾನರು, ಭಗವಂತ ಕೊಟ್ಟಿರುವ ಪ್ರಕೃತಿ ಸಂಪತ್ತು ಅವನದು ಉದಾರಿಗುಣ ಎಂದು ಹಿರೇಕಲ್ಮಠ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ಬಂದೇ ಶಾವಲಿ ದರ್ಗಾ ಮತ್ತು ಸೈದುಲ್ಲಾ ಶಾ ಖಾದ್ರಿ ದರ್ಗಾದ ಸಂದಲ್ ಉರುಸ್ ಅಂಗವಾಗಿ ಗುರುವಾರ ನಡೆದ ಧರ್ಮಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಉರುಸ್ ಅಂದರೆ ಮಹಾತ್ಮರನ್ನು ಸ್ಮರಿಸಿಕೊಳ್ಳುವದು. ಗುರು-ಹಿರಿಯರನ್ನು ಆರಾಧಿಸುವ ಸಂಸ್ಕøತಿ ನಮ್ಮದು. ಮುಸ್ಲಿಂ ಸಮುದಾಯದವರು ವಿಶೇಷವಾಗಿ ಯಾವುದೇ ಹಿಂದಿನ ಧಾರ್ಮಿಕ ಆಚರಣೆಗಳನ್ನು ಕಠಿಣವಾಗಿ ಶ್ರದ್ದೆಯಿಂದ ಆಚರಿಸುತ್ತಾರೆ. ಪ್ರತಿಯೊಬ್ಬರಿಗೂ ನಂಬಿಕೆ ಅನ್ನುವುದು ಬಹಳ ಮುಖ್ಯ, ನಂಬಿಕೆ ವಿಶ್ವಾಸ ಇರುವಲ್ಲಿ ದೇವರು ಇರುತ್ತಾನೆ. ನಾವು ಭಗವಂತನನ್ನು ಬೇಡಬೇಕು ಎಲ್ಲವನ್ನು ಕೊಡುತ್ತಾನೆ ಎಂದರು.
ಉರುಸ್ ಕಾರ್ಯಕ್ರಮಕ್ಕೆ ಹಿರೇಕಲ್ಮಠ ಶ್ರೀಗಳನ್ನು ಕರೆಸಿರುವುದು ಸಂತೋಷದ ವಿಷಯ, ಚನ್ನಪ್ಪಸ್ವಾಮಿ ಅವರ ಕಾಲದಿಂದಲೂ ಹಿರೇಕಲ್ಮಠ ಮತ್ತು ಹೊನ್ನಾಳಿ ನವಾಬರಿಗೂ ಅವಿನಾಭಾವ ಸಂಬಂಧವಿದೆ. ಮುಸ್ಲಿಂ ಸಮುದಾಯದವರಿಗೂ ಚನ್ನಪ್ಪಸ್ವಾಮಿ ಮಠಕ್ಕೂ ಬಹಳ ಸಂಬಂಧವಿದೆ. ದೇಶದ ಐಕ್ಯತೆಗೆ, ಒಗ್ಗಟ್ಟಿಗೆ ಅಭಿವೃದ್ದಿಗೆ ಎಲ್ಲರೂ ಒಂದಾಗಿ ಶ್ರಮಿಸೋಣ, ಹಿಂದೂ ಮುಸ್ಲಿಂ ಬಾಂಧವರ ಸಂಬಂಧ ಉತ್ತಮವಾಗಿರಲಿ ಎಂದರು.
ಸಂತ ಬಂದೇ ಶಾವಲಿ ಅವರು ಕುರುಡರಾಗಿದ್ದು, ಹಸು ಮತ್ತು ಗಿಣಿಯನ್ನು ಸಾಕಿದ್ದರು. ಕಷ್ಟ ಹೇಳಿಕೊಂಡು ಬಂದವರಿಗೆ ಪರಹಾರ ತೋರಿಸುವಂತ ಮಹಾತ್ಮರಾಗಿದ್ದು, ಅಂತಹವರ ಪುಣ್ಯಸ್ಮರಣೆ ಇಲ್ಲಿ ನಾವು ಮಾಡುತ್ತಿರುವುದು ಹಿಂದು ಮುಸ್ಲಿಂರ ಪುಣ್ಯ. ಪಟ್ಟಣದಲ್ಲಿ ಹಿಂದೂ ಮುಸ್ಲಿಂರು ಅನ್ಯೂನ್ಯತೆಯಿಂದ ಇರುವುದು ಇದಕ್ಕೆ ಸಾಕ್ಷಿ ಎಂದು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಿ.ಎಂ.ಹಾಲಾರಾಧ್ಯ ಹೇಳಿದರು.
ಮುಸ್ಲಿಂ ಧರ್ಮಗುರುಗಳಾದ ಮಹಮ್ಮದ್ ಅಸ್ಲಾಂ ಪಾಷ, ಹಜರತ್ ನಸಿಮವುಲ್ಲಾ, ಜಾಮಿಯ ಮಸೀದಿ ಅಧ್ಯಕ್ಷ ಜಬಿವುಲ್ಲಾ, ಉಪಾಧ್ಯಕ್ಷ ಮಹಮ್ಮದ್ ರಫಿಕ್, ಹಿರಿಯರಾದ ಮಂಡಕ್ಕಿ ಬಾಬು, , ಸೈಯದ್ ಅಪ್ಸರ್ ಪಾಷ, ನ್ಯಾಮತಿ ನಾಗರಾಜ, ಎಂ.ಎಸ್.ಜಗದೀಶ, ಬಿ.ಜಿ.ಚೈತ್ರಾ, ರಹಮತ್ವುಲ್ಲಾ, ಎನ್.ಎಸ್.ಶಬ್ಬಿರ್ ಇದ್ದರು.
ಇದಕ್ಕೊ ಮೊದಲು ಪ್ರಮುಖ ಬೀದಿಗಳಲ್ಲಿ ಸಂದಲ್ ಉರುಸ್ ಮೆರವಣಿಗೆ ನಡೆಯಿತು. ಸಾಮೂಹಿಕ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮ ಜಾಮಿಯ ಮಸೀದಿ ವಕ್ಫ್ ಬೋರ್ಡ್ ಕಮಿಟಿಯವರು ವಹಿಸಿದ್ದರು.
