ಗೋವಿನಕೋವಿ ಹಾಲಸ್ವಾಮಿ ಮ ಠದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಹಾಲಸ್ವಾಮಿ ಜಾತ್ರ ಮಹೋತ್ಸವ ಹಾಗೂ ನೂತನ ಶ್ರೀಗಳವರ ಪಟ್ಟಾಧಿಕಾರದ ಪ್ರಥಮ ವರ್ಧಂತ್ಯುತ್ಸವ ಹಾಗೂ ಪ್ರಥಮ ಮುಳ್ಳು ಗದ್ದುಗೆ ಉತ್ಸವ ಗುರುವಾರ ನಡೆಯಿತು.
ನೂತನವಾಗಿ ಸಿದ್ದಪಡಿಸಿರುವ ಮುಳ್ಳು ಗದ್ಗುಗೆ ಮಂಟಪದಲ್ಲಿ ಜಾಲಿ ಮುಳ್ಳು ಪ್ರೇರಿಸಿ ಸಿದ್ದಪಡಿಸಿದ ಗದ್ಗುಗೆ ಮತ್ತು ಮಂಟಪವನ್ನು ಹೂವಿನಿಂದ ಆಲಂಕರಿಸಲಾಗಿತ್ತು. ಪಟ್ಟಾಧಿಕಾರದ ನಂತರ ಪ್ರಥಮವಾಗಿ ನಡೆಯುತ್ತಿರುವ ಮುಳ್ಳು ಗದ್ಗುಗೆ ಉತ್ಸವಕ್ಕೆ ಸಂಬಂಧಿಸಿದಂತೆ ಧಾರ್ಮಿಕ ವಿಧಿ ವಿದಾನಗಳನ್ನು ಪೂರೈಸಿದ ನಂತರ ಶ್ರೀ ಶಿವಯೋಗಿ ವಿಶ್ವಾರಾಧ್ಯ ಮಹಾಲಿಂಗ ಹಾಲಸ್ವಾಮಿ ಅವರು ಬಾಳೆಪಟ್ಟೆಯಿಂದ ತಯಾರಿಸಿದ ಕೌಪಿನವನ್ನು ಮಾತ್ರ ಧರಿಸಿ ಸಾವಿರಾರು ಭಕ್ತರು ಹಾಲೇಶ ಮಹಾರಾಜ ಕೀ ಜಯ್, ಹಾಲೇಶ ನಿನಗಾರೂ ಸರಿಯೇ ಎಂಬ ಘೋಷಣೆಯೊಂದಿಗೆ, ಮುಳ್ಳು ಗದ್ಗುಗೆ ಏರಿ ಕುಪ್ಪಳಿಸಿ ಕುಣಿಯುವ ಮೂಲಕ ಪವಾಡ ಮೆರೆದರು.
ಮುಳ್ಳುಗದ್ಗುಗೆ ಪಲ್ಲಕ್ಕಿ ಮೆರವಣಿಗೆ ಗ್ರಾಮದಲ್ಲಿ ಸಾಗುತ್ತದೆ. ಭಕ್ತರ ಸಂಕಷ್ಟ ನೀಗಿಸಲು ಸ್ವಾಮೀಜಿ ಮುಳ್ಳು ಗದ್ದಿಗೆ ಮೇಲೆ ಕುಳಿತು ಕುಣಿಯುತ್ತಾರೆ. ಮಠದ ಹಿರಿಯ ಶ್ರೀಗಳ ಲಿಂಗೈಕ್ಯ ನಂತರ ಕಳೆದ 15 ವರ್ಷಗಳಿಂದ ಗ್ರಾಮದಲ್ಲಿ ಮುಳ್ಳು ಗದ್ಗಿಗೆ ಉತ್ಸವ ನಡೆದಿರಲಿಲ್ಲ. ನೂತನ ಶ್ರೀಗಳು ಉತ್ಸವ ಆರಂಭ ಮಾಡಿರುವುದು ನಮಗೆ ಸಂತಸ ತಂದಿದೆ ಎಂದು ಭಕ್ತರು ಹೇಳಿದರು.
ಹರಗುರು ಮೂರ್ತಿಗಳ ಸಮ್ಮುಖದಲ್ಲಿ ಗ್ರಾಮ ದೇವತೆಗಳಾದ ಲಕ್ಷ್ಮಿನರಸಿಂಹ, ದುರ್ಗಾದೇವಿ, ಆಂಜನೇಯ ಮತ್ತು ಹಿರಿಯ ಶ್ರೀಗಳ ಪಾದುಕೆ ಹೊತ್ತ ಪಲ್ಲಕ್ಕಿ, ಮಠದ ತೇಜಿ ಉತ್ಸವಕ್ಕೆ ಸಾಕ್ಷಿಯಾದರು.

‘ಬೆಳ್ಳಿಯ ಕಲಶಕ್ಕೆ ವಜ್ರದ ಮುತ್ತು ಹಾಲೇಶ್ವರ ಮಹಾರಾಜ ಕಿ ಜಯ್’ ಎಂದು ಸ್ವಾಮೀಜಿ ಈ ಬಾರಿ ಕಾರ್ಣಿಕ ನುಡಿದಿದ್ದಾರೆ.
ರಾಂಪುರ ಬೃಹನ್ಮಠ ಶಿವಯೋಗಿ ಶಿವಕುಮಾರ ಹಾಲಸ್ವಾಮೀಜಿ, ಓಂಕಾರೇಶ್ವರ ಮರಿದೇವರು ಹೊಟ್ಯಾಪುರ, ಹಿರೇಹಡಗಲಿ ಶಿವಯೋಗಿ ಹಾಲಸ್ವಾಮೀಜಿ,ಹಗರಿಬೊಮ್ಮನಹಳ್ಳಿ ಅಭಿನವ ಹಾಲಸಿದ್ದೇಶ್ವರ ಸ್ವಾಮೀಜಿ, ಮುತ್ತಗಿ ಅಣ್ಣಯ್ಯ ಹಾಲಸ್ವಾಮೀಜಿ, ಯರಗುಂಟಾ ಪರಮೇಶ್ವರ ಮಹಾಸ್ವಾಮೀಜಿ, ದಿಡಗೂರು ಅಣ್ಣಪ್ಪ ಸ್ವಾಮಿಗಳು ಉಪಸ್ಥಿತರಿದ್ದರು.