ನ್ಯಾಮತಿ:ಫಲವನಹಳ್ಳಿ ಇಮಾಂ ಸಾಬಿಗೂ ಗೋಕುಲಾಷ್ಟಮಿಗೂ ಏನು ಸಂಬಂಧ ಎಂಬ ಮಾತಿದೆ. ಆದರೆ ಇದಕ್ಕೆ ತದ್ವಿರುದ್ಧ ಎಂಬಂತೆ ಮುಸ್ಲಿಮರ ಹಬ್ಬವನ್ನು ಹಿಂದೂಗಳೇ ಆಚರಿಸುವ ಸಂಪ್ರದಾಂiÀದ ಗ್ರಾಮ ನ್ಯಾಮತಿ ತಾಲ್ಲೂಕಿನ ಫಲವನಹಳ್ಳಿ ಗ್ರಾಮವಾಗಿದೆ.
ನ್ಯಾಮತಿ ತಾಲ್ಲೂಕಿನ ಫಲವನಹಳ್ಳಿ ಒಂದು ಚಿಕ್ಕ ಗ್ರಾಮ, ಇಲ್ಲಿ ಮುಸ್ಲಿಂ ಜನಾಂಗದ ಒಂದು ಕುಟುಂಬವೂ ವಾಸವಾಗಿಲ್ಲ. ಆದರೆ ಈ ಗ್ರಾಮದಲ್ಲಿ ಪ್ರತಿವರ್ಷ ಮೊಹರಂ ಹಬ್ಬವನ್ನು ಇಡೀ ಗ್ರಾಮವೇ ಜಾತಿಭೇದವಿಲ್ಲದೇ ಸಂಭ್ರಮದಿಂದ ಆಚರಿಸಿಕೊಂಡು ಬರುತ್ತಿದ್ದಾರೆ.
ಗ್ರಾಮದ ಹಿರಿಯರು ಹೇಳುವಂತೆ ಅಂದಾಜು ಎಂಟು ಶತಮಾನಗಳ ಹಿಂದೆ ಎರಡು-ಮೂರು ಮುಸ್ಲಿಂ ಮನೆಗಳಿದ್ದು ಕಾರಣಾಂತರಗಳಿಂದ ಗ್ರಾಮ ತೊರೆದಿದ್ದಾರೆ. ಆ ನಂತರದಲ್ಲಿ ಅವರ ಧಾರ್ಮಿಕ ಚಿಹ್ನೆಗಳು ಗ್ರಾಮದ ಗುಡಿಸಲೊಂದರಲ್ಲಿ (ಧರ್ಮದ ಸಂಕೇತವಾದ ಪಂಜಾಗಳು) ಉಳಿದಿದ್ದವು. ಆ ಕಾಲದಲ್ಲಿ ಮಳೆ-ಬೆಳೆ ಇಲದೆ ಗ್ರಾಮಸ್ಥರು ನೊಂದಿದ್ದರು. ಹೀಗಿರುವಾಗ ಒಂದು ರಾತ್ರಿ ಗ್ರಾಮದ ಹಿರಿಯರು ದೇವಸ್ಥಾನದಲ್ಲಿ ಮಲಗಿದ್ದಾಗ ಮುಸ್ಲಿಂ ಗುರುಗಳ ದರ್ಶನವಾದ ಅನುಭವವಾಯಿತು.
ಈ ವಿಷಯವನ್ನು ಗ್ರಾಮದ ಮುಖಂಡರಿಗೆ ತಿಳಿಸಿದಾಗ ಅವರು ಇದು ನಿಜವಾಗಿದ್ದಲ್ಲಿ ಇಂದು ರಾತ್ರಿ ಮಳೆ ಬಂದರೆ ಆ ಧಾರ್ಮಿಕ ಚಿಹ್ನೆಗಳಿರುವ ಗುಡಿಸಲನ್ನು ರೂಪಾಂತರಿಸಿ ಪ್ರತಿವರ್ಷ ಮೊಹರಂ ಹಬ್ಬವನ್ನು ಆಚರಿಸುವುದಾಗಿ ಸವಾಲು ಹಾಕಿದರು. ಕಾಕತಾಳೀಯ ಎಂಬಂತೆ ಆ ರಾತ್ರಿ ಧಾರಾಕಾರ ಮಳೆ ಸುರಿಯಿತು. ಇದರಿಂದ ಹರ್ಷಿತರಾದ ಗ್ರಾಮಸ್ಥರು ಅಂದಿನಿಂದ ಇಂದಿನವರೆಗೂ ಪಕ್ಕದ ನ್ಯಾಮತಿಯಿಂದ ಮುಸ್ಲಿಂ ಕುಟುಂಬದವರನ್ನು ಕರೆಸಿ ಮುಸ್ಲಿಂ ಸಂಪ್ರದಾಯದಂತೆ ಮೊಹರಂ ಆಚರಿಸುತ್ತಿರುವುದಾಗಿ ಗ್ರಾಮದ ಹಿರಿಯರು ತಿಳಿಸಿದರು.
ಗ್ರಾಮದ ಪ್ರತಿಯೊಂದು ಮನೆಯಿಂದ ಕಟ್ಟಿಗೆ ತುಂಡನ್ನು ತಂದು ಗುಡ್ಡೆ ಹಾಕಿ ಬೆಂಕಿ ಕುಂಡವನ್ನು ನಿರ್ಮಿಸುತ್ತಾರೆ, ಗ್ರಾಮಸ್ಥರು ಸುತ್ತಮುತ್ತಲ ಗ್ರಾಮಸ್ಥರು, ಅದರಲ್ಲೂ ವಿಶೇಷವಾಗಿ ಬಂಜಾರ ಸಮುದಾಯದವರು ಸಹಾ ಬೆಳಿಗ್ಗೆ ಕೆಂಡವನ್ನು ಶ್ರದ್ದಾ ಭಕ್ತಿಯಿಂದ ತುಳಿಯುತ್ತಾರೆ. ಆ ನಂತರ ಆಲಾಬಿ ದೇವರ ಮೆರವಣಿಗೆ ಗ್ರಾಮದಲ್ಲಿ ನಡೆಯುತ್ತದೆ. ನಂತರ
ಆಲಾಬಿ ದೇವರಿಗೆ ಸಕ್ಕರೆ,ಮೆಣಸಿನಕಾಳು, ಊದುಬತ್ತಿ, ಕವಡೆಲೋಬಾನ, ಕಾಣಿಕೆ ಅರ್ಪಿಸಿ, ಮನೆಗಳಲ್ಲಿ ಸಿಹಿ ಅಡಿಗೆ ತಯಾರಿಸಿ ಸಂಭ್ರಮಿಸುತ್ತಾರೆ. ಸಂಜೆ ಪಂಜಾಗಳನ್ನು ಮೆರವಣಿಗೆಯಲ್ಲಿ ಹಳ್ಳಕ್ಕೆ ತೆಗೆದುಕೊಂಡು ಹೋಗಿ ಶುದ್ದೀಕರಿಸಿ ತರಲಾಗುವುದು. ಮುಸ್ಲಿಂ ಸಂಪ್ರದಾಯದಂತೆ ಗೋಧಿಹಿಟ್ಟಿನಲ್ಲಿ ತಯಾರಿಸಿದ ‘ಚೌಹಂಗಿ’ಯನ್ನು ಪ್ರಸಾದ ರೂಪವಾಗಿ ಹಂಚುತ್ತಾರೆ ಎಂದು ಗ್ರಾಮಸ್ಥರಾದ ಬಿ.ವೈ.ರವಿಕುಮಾರ, ಗಿರಿಯಪ್ಪ ಮಾಸ್ಟರ್, ಮಲ್ಲಪ್ಪ ಮಾಸ್ಟರ್, ಜಿ.ಎಚ್.ಹಳದಪ್ಪ ಚಿರಗನಹಳ್ಳಿ ಬಸವರಾಜಪ್ಪ, ಎಂಪಿ. ಬಸವರಾಜಪ್ಪ, ಗೌಡ್ರಸಿದ್ದಪ್ಪ, ಹಾಲನಾಯ್ಕ, ಗೌಡ್ರುರಂಗಪ್ಪ, ಎ.ಕೆ.ಕಾಂತರಾಜ, ಮೇದೂರು ರವಿ, ಲೋಕೇಶನಾಯ್ಕ, ಮಂಜಪ್ಪ ಮಾಹಿತಿ ನೀಡಿದರು.
ಕೋಟ್
ನಮ್ಮ ಪೂರ್ವಜರಾದ ಅಬ್ದುಲ್ ರಜಾಕ್‍ಸಾಬ್, ನಂತರ ನಮ್ಮ ತಂದೆ ಸಿಕಂದರ್‍ಸಾಬ್ ಗ್ರಾಮಸ್ಥರ ಸಹಕಾರದೊಂದಿಗೆ ಪ್ರತಿವರ್ಷ ಮೊಹರಂ ಆಚರಣೆ ನಡೆಸಿಕೊಡುತ್ತಿದ್ದೆವು. ಕೋವಿಡ್ ಸಮಯದಲ್ಲಿ ಅನಿವಾರ್ಯ ಕಾರಣಗಳಿಂದ ಮೊಹರಂ ಆಚರಣೆ ಮಾಡಿರಲಿಲ್ಲ. ಈ ವರ್ಷ ಮತ್ತೇ ಮೊಹರಂ ಆಚರಣೆ ಆರಂಭಿಸಿದ್ದೇವೆ. ಮುಂದಿನ ದಿನಗಳಲ್ಲೂ ಆಚರಣೆ ಮಾಡುತ್ತೇವೆ ಎಂದು ಮೊಹರಂ ಆಚರಣೆ ನೇತೃತ್ವ ವಹಿಸಿರುವ ದಾದಾಪೀರ್ ಸಾಬ್ ಹೇಳುತ್ತಾರೆ.
