ನ್ಯಾಮತಿ: ತಾಲ್ಲೂಕಿನ ಕುರುವ ಗ್ರಾಮದಲ್ಲಿ ಸೋಮವಾರ ಮೊಹರಂ ಕಡೇ ದಿನವನ್ನು ಹಿಂದೂ-ಮುಸ್ಲಿಂ ಸಮುದಾಯದವರು ಒಟ್ಟಾಗಿ ಆಚರಿಸುವ ಮೂಲಕ ಭಾವೈಕ್ಯ ಮೆರೆದರು.
ಸೋಮವಾರ ಮುಂಜಾನೆ ಪಂಜವನ್ನು ಪೂಜಿಸಲಾಯಿತು. ಮೊಹರಂ ಸಲುವಾಗಿ ನಡೆದ ಅಗ್ನಿಕುಂಡದಲ್ಲಿ ಹಿಂದೂ-ಮುಸ್ಲಿಂ ಸಮುದಾಯದವರು ಬೆಂಕಿ ತುಳಿಯುವ ಮೂಲಕ ಹರಕೆ ತೀರಿಸಿದರು. ಗ್ರಾಮದ ಮಹಿಳೆಯರು ಒಳಗೊಂಡಂತೆ ಸಾರ್ವಜನಿಕರು ಕೆಂಡದ ಬಳಿ ನೆರದಿದ್ದರು. ಪಂಜಕ್ಕೆ ಸಕ್ಕರೆ, ಮೆಣಸು, ಮಂಡಕ್ಕಿ, ಊದುಬತ್ತಿ ಅರ್ಪಿಸಿ ಸಂಭ್ರಮಿಸಿದರು.
ಪುರಾತನ ಕಾಲದಿಂದಲೂ ಗ್ರಾಮದಲ್ಲಿ ಎರಡು ಕೋಮಿನವರು ಮೊಹರಂ ಆಚರಣೆಯನ್ನು ಹಬ್ಬದ ರೀತಿಯಲ್ಲಿ ಆಚರಿಸಿಕೊಂಡು ಬರುತ್ತಿದ್ದೇವೆ ಎಂದು ಗ್ರಾಮದ ಹಿರಿಯರಾದ ಸುರೇಶ ನವಲೆ,ಪೀರಾಸಾಬ್, ಜಮಾಲ್ಸಾಬ್, ಟಿ.ಮಂಜಪ್ಪ, ಟಿ.ಶೇಖರಪ್ಪ, ಅಶೋಕಬೋವಿ, ಬಿ.ಮಹೇಶಪ್ಪ ತಿಳಿಸಿದರು.
