ನ್ಯಾಮತಿ ಚೀಲೂರು ಗ್ರಾಮದ ಬಸವೇಶ್ವರನಗರದ ತುಂಗಾ ಚಾನಲ್ ಬಳಿ ಶನಿವಾರ ಬೆಳಿಗ್ಗೆ ಕರಡಿ ಸಂಚರಿಸುತ್ತಿರುವುದನ್ನು ಪ್ರತ್ಯಕ್ಷದರ್ಶಿಗಳು ಕಂಡು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಗ್ರಾಮದ ಸಾಮಾಜಿಕ ಕಾರ್ಯಕರ್ತ ಪುರುವಂತರ ಪರಮೇಶ್ವರಪ್ಪ ಅವರು ಬೆಳಿಗ್ಗೆ ಕರಡಿ ಚಾನಲ್ ದಾಟಿ ಬನ್ನಿ ಮರದ ಹಿಂಭಾಗದ ಶಿವಮೊಗ್ಗ ದಿನೇಶ ಅವರ ಕಬ್ಬಿನ ಗದ್ದೆಯೊಳಗೆ ಹೋಗಿದ್ದನ್ನು ಕಂಡು, ಹೊನ್ನಾಳಿ ವಲಯ ಅರಣ್ಯಾಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ.
ಉಪವಲಯ ಅರಣ್ಯಾಧಿಕಾರಿ ಎಂ.ಬಿ.ಬರ್ಕತ್ ಆಲಿ ಮತ್ತು ಸಿಬ್ಬಂದಿ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಕರಡಿ ಬಂಧನಕ್ಕೆ ಬೋನನ್ನು ಅಳವಡಿಸಿದ್ದಾರೆ. ಈ ಭಾಗದಲ್ಲಿ ಸಾರ್ವಜನಿಕರು ಒಬ್ಬಂಟಿಯಾಗಿ ಸಂಚರಿಸದೆ ಒಂದೆರೆಡು ದಿನ ಎಚ್ಚರಿಕೆಯಿಂದ ಇರುವಂತೆ ಗ್ರಾಮಸ್ಥರಿಗೆ ಮನವಿ ಮಾಡಿದ್ದಾರೆ.
