ದಾವಣಗೆರೆ ಜುಲೈ.22:
ಅಲ್ಪಸಂಖ್ಯಾತರ ಏಳಿಗೆಗಾಗಿ ರೂಪಿಸಲಾಗಿರುವ ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಮುಸ್ಲಿಂ, ಕ್ಚಿಶ್ಚಿಯನ್, ಸಿಖ್, ಬೌದ್ಧ ಹಾಗೂ ಜೈನ್ ಸಮುದಾಯ ಸೇರಿ ಒಟ್ಟು 556226 ಜನಸಂಖ್ಯೆ ಇದೆ. ಈ ಸಮುದಾಯಗಳಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ 207 ಅಂಗನವಾಡಿಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳಲ್ಲಿ 65 ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸಿದರೆ, ಇನ್ನುಳಿದ 126 ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. 1 ಕಟ್ಟಡ ಮಾತ್ರ ನಿರ್ಮಾಣದ ಹಂತದಲ್ಲಿದೆ ಎಂದು ಮಹಿಳಾ ಮ್ತತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಯಾವುದೇ ಇಲಾಖೆಯಲ್ಲಿ ಸರ್ಕಾರಿ ನಿವೇಶನವಿದ್ದಲ್ಲಿ ಶಾಲಾ-ಕಾಲೇಜು, ಅಂಗನವಾಡಿಗಳಿಗೆ ಮಂಜೂರು ಮಾಡಬೇಕು ಎಂದು ತಾಕೀತು ಮಾಡಿದರು.
ಜಿಲ್ಲೆಯಲ್ಲಿ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಶಾಲೆ – ಕಾಲೇಜು ಹಾಗೂ ಅಂಗನವಾಡಿಗಳಿಗೆ ವಕ್ಫ್ಬೋರ್ಡ್ ಅಥವಾ ಯಾವುದೇ ಇಲಾಖೆಯ ಅಧೀನದಲ್ಲಿನ ನಿವೇಶನವಿದ್ದರೂ ಗುರುತಿಸಿ ಶಾಲೆ, ಕಾಲೇಜುಗಳ ನಿರ್ಮಾಣಕ್ಕೆ ಅಗತ್ಯ ಕ್ರಮಕೈಗೊಳ್ಳಬೇಕು. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ವಾಸಿಸುತ್ತಿರುವ ಅಲ್ಪಸಂಖ್ಯಾತ ಸಮುದಾಯಗಳಿಗೆ ಇಲಾಖೆಗಳಲ್ಲಿನ ಯೋಜನೆಗಳನ್ನು ಸಮರ್ಪಕವಾಗಿ ಒದಗಿಸುವ ಮೂಲಕ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಆಧ್ಯತೆ ನೀಡಬೇಕು ಎಂದು ತಾಕೀತು ಮಾಡಿದ ಅವರು ಇದರಿಂದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿ ಸಾಧ್ಯ ಎಂದರು.
ಅಲ್ಪಸಂಖ್ಯಾತರ ಸಮುದಾಯಗಳಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆ ಹಾಗೂ ಬಸವ
ವಸತಿ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಸೂರು ಕಲ್ಪಿಸಲು ಎರಡು ಎಕರೆ ನಿವೇಶನ
ಮಂಜೂರು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಇದರಿಂದ ಸೂರಿಲ್ಲದಿರುವ ಅರ್ಹ
ಫಲಾನುಭವಿಗಳಿಗೆ ವಸತಿ ಯೋಜನೆಯಡಿ ಸೂರು ಕಲ್ಪಿಸಲು ಸಹಕಾರಿಯಾಗುತ್ತದೆ ಎಂದರು.
ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ಇಲಾಖವಾರು ಯೋಜನೆಗಳಾದ ಅರಿವು ಸಾಲ, ಶ್ರಮಶಕ್ತಿ ಯೋಜನೆ, ಸ್ವಯಂ ಉದ್ಯೋಗ ಯೋಜನೆ, ಗಂಗಾ ಕಲ್ಯಾಣ ಯೋಜನೆ, ಸ್ವಾವಲಂಬಿ ಸಾರಥಿ ಹಾಗೂ ವಿವಿಧ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಶೇ.100ರಷ್ಟು ಒದಗಿಸಿ ಸಮರ್ಪಕವಾಗಿ ಉಪಯುಕ್ತವಾಗುವುವಂತೆ ಕ್ರಮವಹಿಸಬೇಕು ಎಂದು ಹೇಳಿದರು.
ಸ್ಮಶಾನಕ್ಕೆ ಜಾಗ ನೀಡುವಂತೆ ಮನವಿ: ಅಲ್ಪಸಂಖ್ಯಾತರಿಗೆ ರುದ್ರಭೂಮಿ ಅವಶ್ಯವಾಗಿದ್ದು, ಅಗತ್ಯವಾಗಿ ಮಂಜೂರು ಮಾಡುವಂತೆ ನಾಮನಿರ್ದೇಶಿತ ಸದಸ್ಯ ಶಬ್ಬೀರ್ ಸಾಬ್ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು ಸಂಬಂಧಪಟ್ಟ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ಜಿಲ್ಲಾ ನಗರಾಭಿವೃದ್ಧಿಕೋಶ ಯೋಜನಾ ನಿರ್ದೇಶಕ ಮಹಾಂತೇಶ್, ಜಿ.ಪಂ. ಯೋಜನಾ ನಿರ್ದೇಶಕಿ ರೇಷ್ಮಾ ಕೌಸರ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಭಕ್ತಮಾರ್ಕಂಡೇಯಾ, ಜಿಲ್ಲಾ ವಕ್ಫ್ ಅಧಿಕಾರಿ
ನಾಮನಿರ್ದೇಶಿತ ಸದಸ್ಯರುಗಳಾದ ಶಬ್ಬೀರ್ ಸಾಬ್, ಸಾದಕ್ವುಲ್ಲಾ, ಅಶೋಕ್ ಕುಮಾರ್ ವನ್ನೆಚಂದ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
