ನ್ಯಾಮತಿ:ತುಂಗಭದ್ರಾ ನದಿಯಿಂದ ತಾಲ್ಲೂಕಿನ 57 ಗ್ರಾಮಗಳಿಗೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗವುದು ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.
ತಾಲ್ಲೂಕಿನ ಗಂಗನಕೋಟೆ ಗ್ರಾಮದಲ್ಲಿ ಗುರುವಾರ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ,ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಹಾಗೂ ಗಂಗನಕೋಟೆ ಗ್ರಾಮ ಪಂಚಾಯಿತಿ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸುಸ್ಥಿರ ಕುಡಿಯುವ ನೀರಿನ ಯೋಜನೆಯಡಿ ಜೆಜೆಎಂ 24/7 ನೀರು ಸರಬರಾಜು ಘೋಷಣಾ ಅನುಷ್ಠಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಗ್ರಾಮದಲಿರುವ ಹೈಮಾಸ್ಕ್ ದೀಪಗಳು ಒಂದು ವಾರದೊಳಗೆ ದುರಸ್ತಿಯಾಗಿ ಉರಿಯಬೇಕು ನಾನೇ ಬಂದು ಉದ್ಘಾಟಿಸುವೆ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಇದೇ ಸಂದರ್ಭದಲ್ಲಿ ತಾಕೀತು ಮಾಡಿದರು.
ಜೆಜೆಎಂ ಯೋಜನೆ ಅಡಿಯಲ್ಲಿ ಗಂಗನಕೋಟೆ ಗ್ರಾಮ ಪಂಚಾಯಿತಿ ಜಿಲ್ಲೆಯಲ್ಲಿಯೇ 31ನೇ ಗ್ರಾಮವಾಗಿದ್ದು. ಗ್ರಾಮಾಡಳಿತ ಮತ್ತು ಸಾರ್ವಜನಿಕರ ಸಹಕಾರದಿಂದ ಯೋಜನೆ ಯಶಸ್ವಿಯಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಗಿಟ್ಟೆ ವಿಠಲ ಮಾಧವರಾವ್ ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕರಿಯಮ್ಮ ಅಧ್ಯಕ್ಷತೆ ವಹಿಸಿದ್ದರು.
ತಾಲ್ಲೂಕು ಪಂಚಾಯಿತಿ ಇಒ ಎಚ್.ವಿ. ರಾಘವೇಂದ್ರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಂಜಿನಿಯರ್ ಸೋಮ್ಲಾನಾಯ್ಕ, ಯೋಜನಾ ವ್ಯವಸ್ಥಾಪಕ ಬಿ.ಟಿ.ಜಗದೀಶ, ನಂದನಕುಮಾರ,ವಿನಯಕುಮಾರ, ವೀರಭದ್ರಪ್ಪ, ಸಲ್ಮಾಭಾನು, ಪಿಡಿಒ ಸತೀಶಕುಮಾರ ಮತ್ತು ಗ್ರಾಮಸ್ಥರು ಇದ್ದರು.
