ನ್ಯಾಮತಿ:ಇಂದಿನ ಆಧುನಿಕತೆಯ ಬರಾಟೆಯಲ್ಲಿ ಅನೇಕ ಸಂಪ್ರದಾಯಗಳು ಕಣ್ಮರೆಯಾಗುತ್ತಿವೆ. ಅಂಥದರಲ್ಲಿ ಜಂಗಮರು ಹಳ್ಳಿಗಳಲ್ಲಿ ಪ್ರತಿನಿತ್ಯ ಬೆಳಿಗ್ಗೆ ಸಮಯದಲ್ಲಿ ಜೋಳಿಗೆ ಹಾಕಿಕೊಂಡು ಹಿಟ್ಟು ನೀಡಿಸಿಕೊಳ್ಳಲು ಮನೆಮನೆಗೆ ಬರುವುದು ಸಾಮಾನ್ಯ ದೃಶ್ಯವಾಗಿತ್ತು.
ಜಂಗಮರು ಮೊನಕಾಲಿಗೆ ಜಂಗು(ಗಂಟೆ) ಕಟ್ಟಿಕೊಂಡು, ಕಾವಿ ಬಟ್ಟೆ ಧರಿಸಿ, ಲಿಂಗಧಾರಣೆ, ಕೊರಳಿಗೆ ರುದ್ರಾಕ್ಷಿ, ಕೈಯಲ್ಲಿ ಜೋಳಿಗೆ,ಬೆತ್ತ ಹಿಡಿದುಕೊಂಡು ಮನೆ ಮುಂದೆ ಬಂದರೆ ಸಾಕು, ಆ ಗಂಟೆ ಶಬ್ದದಿಂದ ಮನೆಯವರು ಹೊರಗೆ ಬಂದು ಅವರನ್ನು ಬರಮಾಡಿಕೊಂಡು ಹಿಟ್ಟು ನೀಡಿ ಮನೆಯವರೆಲ್ಲರೂ ಪಾದಕ್ಕೆ ನಮಸ್ಕರಿಸಿ ಅವರ ಆಶೀರ್ವಾದ ಪಡೆಯುವ ಪದ್ಧತಿ ಈಗಲೂ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಆಚರಣೆಯಲ್ಲಿದೆ.
ಇಂದು ಆಧುನಿಕತೆಯ ನೆಪದಲ್ಲಿ ಜಂಗಮರು ಕೂಡಾ ಹಿಟ್ಟು ನೀಡಿಸಿಕೊಳ್ಳಲು ಬರುವುದಕ್ಕೆ ಹಿಂಜರಿಯುತ್ತಿದ್ದಾರೆ. ಜನರ ಭಕ್ತಿಭಾವನೆಯು ಕಡಿಮೆಯಾಗುತ್ತಾ, ಜೋಳಿಗೆಗಳು ಕಣ್ಮರೆಯಾಗುತ್ತಿವೆ. ಹಿಂದಿನ ಕಾಲದಲ್ಲಿ ರೈತಾಪಿ ವರ್ಗದವರು ತಾವು ಬೆಳೆದ ಧಾನ್ಯಗಳಲ್ಲಿ ಒಂದು ಪಾಲನ್ನು ದಾನದ ರೂಪದಲ್ಲಿ ಜಂಗಮರಿಗಾಗಿ ತೆಗೆದು ಇಡುತ್ತಿದ್ದರು. ಈ ಭಾವನೆ ಇಂದು ಕಡೆಮೆಯಾಗುತ್ತಿದೆ. ಜಂಗಮ ಯುವಕರು ಸಹಾ ತಮ್ಮ ಹೊಟ್ಟೆ ಪಾಡಿಗಾಗಿ ವಿವಿಧ ಬೇರೆ ಕಾಯಕಗಳಲ್ಲಿ ತೊಡಗಿರುವುದರಿಂದ ಬಿಕ್ಷಾಟನೆಗೆ ಬರಲು ಹಿಂಜರಿಯುತ್ತಿದ್ದಾರೆ. ಶ್ರಾವಣ ಮಾಸದಲ್ಲಿ ಮಾತ್ರ ನಾವು ಕಾಯಕವಾಗಿ ಬಿಕ್ಷಾಟನೆ ಮಾಡುತ್ತೇವೆ. ಭಕ್ತರು ನೀಡುವ ಅಕ್ಕಿ, ವಿವಿಧ ರೀತಿಯ ಹಿಟ್ಟು, ಕಾಣಿಕೆಯನ್ನು ಸ್ವೀಕರಿಸಿ ಅವರ ಮನೆತನಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿ ಬರುತ್ತೆವೆ ಎಂದು ಜಂಗಮ ಸಮುದಾಯದ ಒಡೆಯರಹತ್ತೂರು ಷಣ್ಮುಖಯ್ಯ, ಕೆಂಚಿಕೊಪ್ಪದ ಶಾಂತಯ್ಯ, ಸವಳಂಗ ಎಸ್.ಎಂ. ಪುಟ್ಟಸ್ವಾಮಿ, ಕೊಡತಾಳು ಗುರುಸಿದ್ಧಯ್ಯ ಹೇಳುತ್ತಾರೆ.
ಜಂಗಮರು ನಮ್ಮ ಮನೆಗೆ ಬಂದು ಬಿಕ್ಷೆ ಬೇಡಲು ಬಂದಾಗ ನಾವು ಗೌರವದಿಂದ ಬರಮಾಡಿಕೊಂಡು ನಮ್ಮ ಮನೆಯಲ್ಲಿರುವ ಅಕ್ಕಿ, ಜೋಳ ಅಥವಾ ರಾಗಿ ಹಿಟ್ಟನ್ನು ನೀಡಿ, ಕಾಣಿಕೆ ಕೊಟ್ಟು ಅವರ ಆರ್ಶಿರ್ವಾದ ಪಡೆಯುತ್ತೇವೆ ಎಂದು ಭಕ್ತರಾದ ವೀರಭದ್ರಪ್ಪ, ಧನಂಜಯ, ಜೋಗದ ಶಾಂತಮ್ಮ, ಎ. ಪ್ರಕಾಶ ಹೇಳುತ್ತಾರೆ.
