ನ್ಯಾಮತಿ: ಹರಳು ರೂಪದ ಯೂರಿಯಾ ರಸಗೊಬ್ಬರದ ಪರ್ಯಾಯವಾಗಿ ದ್ರವ ರೂಪದ ನ್ಯಾನೋ ಯೂರಿಯಾ ಸಿಂಪರಣೆ ಅರಿವು ಮೂಡಿಸುವ ಪ್ರಾತ್ಯಕ್ಷತೆ ಕಾರ್ಯಕ್ರಮವನ್ನು ಉದ್ದೇಶಿಸಿ ಶ್ರೀ ಪರಮಪೂಜ್ಯ ಶ್ರೀ ಒಡೆಯರ್ ಚನ್ನಮಲ್ಲಿಕಾರ್ಜುನ ಮಹಾಸ್ವಾಮಿಗಳು ಹಿರೆಕಲ್ಮಠರವರು ಮಾತನಾಡಿ ನಾಡಿನ ರೈತರು ಬೆಳೆಯಲ್ಲಿ ವೈಜ್ಞಾನಿಕವಾಗಿ ಶಿಫಾರಸ್ಸು ಮಾಡಿದ ರಸಗೊಬ್ಬರಗಳು ಮತ್ತು ಪ್ರಮಾಣವನ್ನು ಪರೀಶಿಲಿಸಿ ವೈಜಾÐನಿಕವಾಗಿ ಬಳಸಬೇಕು ಮತ್ತು ಈಗಾಗಲೆ ಹರಳು ರೂಪದ ಯೂರಿಯಾ ರಸಗೊಬ್ಬರದ ಪರ್ಯಾಯವಾಗಿ ದ್ರವರೂಪದ ನ್ಯಾನೋ ಯೂರಿಯಾ ಮತ್ತು ನ್ಯಾನೋ ಡಿ.ಎ.ಪಿ ಬಳಕೆ ತಂತ್ರಜ್ಞಾನ ಅಭಿವೃದ್ದಿ ಪಡಿಸಿದ್ದು ಈ ಬಗ್ಗೆ ರೈತರು ಮಾಹಿತಿ ಪಡೆದು ಬಳಸಲು ಮುಂದಾಗಬೇಕು ಹಾಗಿದ್ದಲ್ಲಿ ಮಾತ್ರ ನಾವು ನೆಲ-ಜಲ ಮತ್ತು ಪರಿಸರವನ್ನು ಆರೋಗ್ಯವಾಗಿ ಕಾಪಾಡಬಹುದು ಎಂದು ತಿಳಿಸಿದರು.
ಉಪ ಕೃಷಿ ನಿರ್ದೇಶಕರಾದ ರೆವಣಸಿದ್ದನಗೌಡ ಹೆಚ್ ಕೆ ರವರು ಮಾತನಾಡಿ ಬೆಳೆಗಳಿಗೆ ಹರಳು ರೂಪದ ಯೂರಿಯಾ ರಸಗೊಬ್ಬರ ಪರ್ಯಾಯವಾಗಿ ದ್ರವ ರೂಪದ ನ್ಯಾನೋ ಯೂರಿಯಾ ಸಿಂಪರಣೆ ಮಾಡಲು ರೈತರು ಮುಂದಾಗಬೇಕು, ವಡೆಯರಹತ್ತೂರು ಗ್ರಾಮದ ಶ್ರೀ ಒಡೆಯರ್ ಚನ್ನಮಲ್ಲಿಕಾರ್ಜುನ ಮಹಾಸ್ವಾಮಿಗಳು ಹಿರೆಕಲ್ಮಠ ರವರ ಜಮೀನಿನಲ್ಲಿ ಮಂಗಳವಾರ ಮೆಕ್ಕೆಜೋಳ ಬೆಳೆಗೆ ನ್ಯಾನೋ ಯೂರಿಯಾ ದ್ರಾವಣವನ್ನು ಡ್ರೋನ್ ಮೂಲಕ ಸಿಂಪರಣೆ ಮಾಡುತ್ತಿರುವುದನ್ನು ವೀಕ್ಷಿಸಿ ಮಾತನಾಡಿದರು. ರೈತರು ಹಿಂದಿನಿಂದಲೂ ಬೆಳೆಗಳಿಗೆ ಹರಳು ರೂಪದ ಯೂರಿಯಾ ರಸಗೊಬ್ಬರಗಳನ್ನು ಹಾಕುತ್ತಾ ಬಂದಿದ್ದಾರೆ ಮತ್ತು ಪ್ರಸ್ತುತ ಮೆಲ್ಗೋಬ್ಬರವಾಗಿ ಹರಳು ಯೂರಿಯಾವನ್ನು ಬಳಸುತ್ತಿದ್ದಾರೆ, ಇದರಿಂದ ಭೂಮಿ ಫಲವತ್ತತೆ ಸಂಪೂರ್ಣ ನಾಶವಾಗುತ್ತಿದೆ, ಭವಿಶ್ಯದಲ್ಲಿ ಹೀಗೆ ರಸಗೊಬ್ಬರವನ್ನು ಹೆಚ್ಚಾಗಿ ಬಳಸಿದರೆ ಫಲ ನೀಡುವ ಭೂಮಿ ಬರಡಾಗಬಹುದು, ಪರಿಸರದ ಮೇಲೆ ಪರಿಣಾಮ ಹಾಗೂ ಮಾನವನ ಆರೋಗ್ಯಕ್ಕೆ ತುಂಬಾ ಹಾನಿಕಾರ ಎಂದು ಹೇಳಿದರು. ದೇಶದ ನವೀನ ತಾಂತ್ರಿಕತೆಯ ಉತ್ಪಾದನೆಯಾದ ದ್ರವರೂಪದ ನ್ಯಾನೋ ಯೂರಿಯಾ ಮತ್ತು ನ್ಯಾನೋ ಡಿ.ಎ.ಪಿ. ಬಳಸಿದರೆ ಕಡಿಮೆ ಖರ್ಚಿನಲ್ಲಿ, ಉತ್ತಮ ಇಳುವರಿಯನ್ನು ತಂದು ಕೊಡುತ್ತದೆ ಎಂದು ತಿಳಿಸಿದರು.
ಸಹಾಯಕ ಕೃಷಿ ನಿರ್ದೇಶಕರಾದ ಬಿ ಎನ್ ವಿಶ್ವನಾಥರವರು ಮಾತನಾಡಿ ಈ ಭಾರಿ ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕಿನಲ್ಲಿ ವಾಡಿಕೆಗಿಂತ ಮಳೆ ಹೆಚ್ಚು ಪ್ರಮಾಣದಲ್ಲಿ ಆಗಿರುತ್ತದೆ ಕೃಷಿ ಚಟುವಟಿಕೆಗಳಾದ ಯೂರಿಯಾ ಮೇಲುಗೊಬ್ಬರ ನೀಡುವುದು, ಎಡೆಕುಂಟೆ ಹೊಡೆಯುವುದು, ಸಸ್ಯ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಲು ತೊಂದರೆ ಉಂಟಾಗಿರುತ್ತದೆ, ಈ ನಿಟ್ಟಿನಲ್ಲಿ ರೈತರು ಶಿಫಾರಸ್ಸಿಗಿಂತ ಅತಿ ಹೆಚ್ಚು ರಸಗೊಬ್ಬರವನ್ನು ಮಳೆಯಲ್ಲಿಯೇ ಅಥವಾ ಕೊಂಚ ಮಳೆ ಕಡೆಮೆಯಾದಾಗ ಕೊಡುತ್ತಿರುವುದು ಗಮನಕ್ಕೆ ಬಂದಿರುತ್ತದೆ. ಈ ಹಂತದಲ್ಲಿ ಸಾರಜನಕ ಕೊರತೆ ಕಂಡೂಬಂದರೂ ಸಹ ಯೂರಿಯಾ ರಸಗೊಬ್ಬರವನ್ನು ಸರಿಯಾಗಿ ಮಣ್ಣಿನಲ್ಲಿ ಸೇರಿಸಲು ಸಾದ್ಯವಿರದ ಕಾರಣ ಬೆಳೆಗಳು ಶೀತದಿಂದ ಬೇರುಗಳ ಬೆಳೆವಣಿಗೆ ಕುಂಟಿತವಾಗಿ ಗಿಡಗಳ ಬೆಳೆವಣಿಗೆಯೂ ಸಹ ಕುಂಠಿತವಾಗಿ ಇಳುವರಿ ಮೇಲೆ ಹೆಚ್ಚಿನ ಪ್ರಭಾವ ಬೀರಲಿದೆ, ಆದ್ದರಿಂದ ರೈತರು ಯೂರಿಯಾ ರಸಗೊಬ್ಬರವನ್ನು ಕೊಡುವ ಬದಲಾಗಿ ನ್ಯಾನೋ ಯೂರಿಯಾ (ಶೇ.20% ಸಾರಜನಕ) ಅಥವಾ ನ್ಯಾನೋ ಡಿ. ಎ. ಪಿ. (ಶೇ 8 ಸಾರಜನಕ ಮತ್ತು ಶೇ. 16 ರಂಜಕ) ದ್ರವ ರೂಪದ ಸಾರಜನಕವನ್ನು ಪ್ರತಿ ಲೀಟರ್ ನೀರಿಗೆ 3 ರಿಂದ 5 ಮಿಲಿ ಬೆರೆಸಿ ಸಿಂಪಡಿಸಲು ಕೋರಿದೆ. ಈ ದ್ರವ ಗೊಬ್ಬರವನ್ನು 30-35 ದಿನಗಳು ಮೊದಲನೇ ಹಂತ ಮತ್ತು 50-60 ದಿನಗಳಲ್ಲಿ ಸಿಂಪಡಿಸುವುದರಿಂದ ಪೋಷಕಾಂಶಗಳ ಸದ್ಬಳಕೆಯಾಗಿ ಉತ್ತಮ ಬೆಳೆ ಬೆಳೆವಣಿಗೆ ಮತ್ತು ಉತ್ತಮ ಇಳುವರಿ ಸಾದ್ಯವಾಗುತ್ತದೆ. ನ್ಯಾನೋ ಯೂರಿಯಾ ಮತ್ತು ನ್ಯಾನೋ ಡಿ.ಎ.ಪಿ. ಅಧಿಕ ಹರಡುವಿಕೆ ಸಾಮಥ್ರ್ಯ ಹೊಂದಿರುವುದರಿಂದ ಇವುಗಳನ್ನು ಇತರೆ ಕೀಟನಾಶಕ, ಶಿಲಿಂಧ್ರನಾಶಕ ಮತ್ತು ನೀರಿನಲ್ಲಿ ಕರಗುವ ರಸಗೊಬ್ಬರಗಳೊಂದಿಗೆ ಸೇರಿಸಿ ಸಿಂಪರಣೆ ಮಾಡಬಹುದಾಗಿದೆ.
ಕೃಷಿ ಅಧಿಕಾರಿ ಅತೀಕ್ ಉಲ್ಲಾ ರವರು ಮಾತನಾಡಿ ಕಳೆದ 15 ದಿನಗಳಿಂದ ಸುರಿಯುತ್ತಿರುವ ಮಳೆಗೆ ಭೂಮಿಯ ತೇವಾಂಶ ಹೆಚ್ಚಾಗಿದೆ, ರೈತರು ಹರಳು ರೂಪದ ಯೂರಿಯಾ ರಸಗೊಬ್ಬರವನ್ನು ಪ್ರತಿ ಎಕರೆಗೆ 2 ರಿಂದ 3 ಚೀಲ ಹಾಕುತ್ತಿದಾರೆ, ಅತಿ ಹೆಚ್ಚು ಗೊಬ್ಬರವನ್ನು ಹಾಕಿದರೆ ಬೆಳೆಗಳು ಉತ್ಕøಷ್ಠವಾಗಿ ಬೆಳೆದು ನಿಂತರೆ ರೋಗ ಕೀಟ ಬಾಧೆಗಳು ಕಾಡುತ್ತವೆ. ರೈತರು ನ್ಯಾನೋ ಯೂರಿಯಾ ದ್ರಾವಣ ಬಳಸಬೇಕು ಎಂದು ಸಲಹೆ ನೀಡಿದರು. ಮೇಲು ಗೊಬ್ಬರವಾಗಿ ಬಳಸುವ ಯೂರಿಯಾ ಚೀಲವನ್ನು ಶೇ.50 ರಷ್ಟು ಕಡಿಮೆ ಮಾಡಬಹುದಾಗಿದೆ ಎಂದು ತಿಳಿಸಿದರು. ಕೋರಮಂಡಲ್ ಇಂಟರ್‍ನ್ಯಾಷನಲ್ ಪ್ರೈವೆಟ್ ಲಿ. (ಗ್ರೋಮೋರ್) ಕಂಪನಿಯ ಅಧಿಕಾರಿ ಸತೀಶ್ ರವರು ಡ್ರೋನ್ ಮೂಲಕ ನ್ಯಾನೋ ಯೂರಿಯಾ ಮತ್ತು ನ್ಯಾನೋ ಡಿ.ಎ.ಪಿ. ಸಿಂಪರಣೆ ಹೇಗೆ ಮಾಡಬೇಕು ಎಂಬುವುದರ ಬಗ್ಗೆ ಮಾಹಿತಿ ನೀಡಿ ಮೆಕ್ಕೆಜೋಳ ತಾಕಿನಲ್ಲಿ ಡ್ರೋನ್ ಮೂಲಕ ನ್ಯಾನೋ ಯೂರಿಯಾ ಸಿಂಪರಣೆ ಮಾಡಿ ತೋರಿಸಿದರು. ಈ ವೇಳೆ ಕೃಷಿ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ , ಕೋರಮಂಡಲ್ ಕಂಪನಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಮತ್ತು ವಡೆಯರಹತ್ತೂರು ಗ್ರಾಮದ ರೈತರು ಹಾಜರಿದ್ದರು.

Leave a Reply

Your email address will not be published. Required fields are marked *