ನ್ಯಾಮತಿ:
ಪಟ್ಟಣದ ಎಸ್ಬಿಐ ಶಾಖೆಯಲ್ಲಿ ೨೦೨೪ರಲ್ಲಿ ದರೋಡೆ ನಡೆದಿದ್ದು, ಕಳವು ಪ್ರಕರಣವನ್ನು ಮಾರ್ಚ್ನಲ್ಲಿ ಪತ್ತೆ ಹಚ್ಚಿದ ಜಿಲ್ಲಾ ಪೊಲೀಸರು ಮತು ತಾಳ್ಮೆಯಿಂದ ಸಹಕರಿಸಿದ ಗ್ರಾಹಕರಿಗೆ ಕೃತಜ್ಞತೆ ಸಲ್ಲಿಸುತ್ತಿರುವುದಾಗಿ ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.
ಸಮೀಪದ ಸುರಹೊನ್ನೆ ಬನಶಂಕರಿ ಸಮುದಾಯ ಭವನದಲ್ಲಿ ಶುಕ್ರವಾರ ದಾವಣಗೆರೆ ಜಿಲ್ಲಾ ಪೊಲೀಸ್, ಚನ್ನಗಿರಿ ಉಪವಿಭಾಗ, ನ್ಯಾಮತಿ ಪೊಲೀಸ್ ಠಾಣೆಯಿಂದ ಆಯೋಜಿಸಿದ್ದ ಪ್ರಾಪರ್ಟಿ ರಿಟರ್ನ್ ಪೆರೆಡ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಳವು ಪ್ರಕರಣ ಪತ್ತೆ ಹಚ್ಚುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯವರು ಪ್ರಾಮಾಣಿಕ ಪ್ರಯತ್ನ ಮಾಡಿದ್ದರ ಫಲವಾಗಿ ಕಳವು ಆರೋಪಿಗಳು ಮತ್ತು ಚಿನ್ನಾಭರಣ ವಶಪಡಿಸಿಕೊಂಡಿರುವುದು ಜಿಲ್ಲೆಗೆ ಹೆಮ್ಮೆಯ ವಿಷಯ, ಬ್ಯಾಂಕ್ ಅಧಿಕಾರಿಗಳು ಆದಷ್ಟು ಬೇಗನೆ ನಿಯಮಾನುಸಾರ ವಾರಸುದಾರರಿಗೆ ಚಿನ್ನಾಭರಣ ಹಿಂತಿರುಗಿಸಬೇಕು ಹಾಗೂ ಅಡವಿಟ್ಟಿರುವ ಚಿನ್ನಾಭರಣದ ಮೇಲೆ ಅಸಲು ಮಾತ್ರ ಪಾವತಿಸಿಕೊಳ್ಳುವಂತೆ ಮನವಿ ಮಾಡಿದರು.
ನ್ಯಾಮತಿ ಬ್ಯಾಂಕಿನ ಕಳವು ಪ್ರಕರಣ ಪತ್ತೆ ಹಚ್ಚುವ ಕೆಲಸದಲ್ಲಿ ಪೊಲೀಸ್ ಇಲಾಖೆಯವರಿಗೆ ಒಂದು ಒಳ್ಳೆಯ ಅನುಭವ ಆದಾಂತಾಗಿದೆ. ಬ್ಯಾಂಕಿನ ಅಧಿಕಾರಿUಳ ವಶಕ್ಕೆ ಚಿನ್ನಾಭರಣ ನೀಡಿದ್ದು, ಆದಷ್ಟು ಬೇಗನೆ ಅಧಿಕಾರಿಗಳು ನೈಜ ವಾರಸುದಾರರನ್ನು ಪತ್ತೆ ಹಚ್ಚುವ ಕಾರ್ಯ ಮಾಡುತ್ತಾರೆ ಅಲ್ಲಿಯವರೆಗೆ ಗ್ರಾಹಕರು ತಾಳ್ಮೆಯಿಂದ ಸಹಕರಿಸಬೇಕು. ಜಿಲ್ಲೆಯ ಬ್ಯಾಂಕ್ಗಳ ಭದ್ರತೆ ಬಗ್ಗೆ ಇಲಾಖೆಯಿಂದ ಕ್ರಮಕೈಗೊಂಡಿದೆ ಎಂದು ಎಸ್ಪಿ ಉಮಾ ಪ್ರಶಾಂತ ತಿಳಿಸಿದರು.
ಕಳವು ಪ್ರಕರಣ ಪತ್ತೆ ಹಚ್ಚಲು ವಿವಿಧ ರಾಜ್ಯಗಳಲ್ಲಿ ಕಾರ್ಯಚರಣೆ ನಡೆಸಿದ ಬಗ್ಗೆ ಹಿರಿಯ ಅಧಿಕಾರಿಗಳು ಮತ್ತು ಸಾರ್ವಜನಿಕರು ನೀಡಿದ ಸಹಕಾರವನ್ನು ಮರೆಯುವಂತಿಲ್ಲ ಎಂದು ಚನ್ನಗಿರಿ ಉಪವಿಭಾಗದ ಎಎಸ್ಪಿ ಶ್ಯಾಮ್ ವರ್ಗಿಸ್ ಸಂತಸ ವ್ಯಕ್ತಪಡಿಸಿದರು.
ಬ್ಯಾಂಕ್ ಅಧಿಕಾರಿ ಸುನೀಲಕುಮಾರ್ ಮಾತನಾಡಿ, ಪೊಲೀಸರಿಂದ ಪಡೆದಿರುವ ಚಿನ್ನಾಭರಣ ವಿಂಗಡಣೆ ಮಾಡಿ ವಾರಾಸುದಾರರನ್ನು ಗುರುತಿಸಲು ಸಮಯ ಬೇಕಾಗುತ್ತದೆ. ಅಲ್ಲಿಯವರೆಗೆ ಗ್ರಾಹಕರು ಸಹಕಾರ ನೀಡಬೇಕು. ನ್ಯಾಯಾಲಯದ ಆದೇಶದಂತೆ ವಶಪಡಿಸಿಕೊಂಡಿರುವ ಆಭರಣಗಳನ್ನು ಕೋರ್ಟ್ ಕೇಳಿದಾಗ ಹಾಜರು ಪಡಿಸಬೇಕಾಗುತ್ತದೆ. ಅದರ ಬಗ್ಗೆ ನ್ಯಾಯಾಲಯಕ್ಕೆ ಮನವಿ ಮಾಡಲಾಗಿದೆ ಎಂದರು.
ಪೊಲೀಸ್ ಇನ್ಸ್ಪೆಕ್ಟರ್ ಎನ್.ಎಸ್.ರವಿ ಅವರು, ೧,೨೪೬ವಿವಿಧ ಆಭರಣಗಳು ಇದ್ದು, ಅದರಲ್ಲಿ ೩೦೦ ಅಭರಣಗಳ ವಾರಸುದಾರರನ್ನು ಗುರುತಿಸಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಕೆಲವು ನೈಜ ವಾರಾಸುದಾರರಿಗೆ ಸಾಂಕೇತಿಕವಾಗಿ ಆಭರಣಗಳನ್ನು ಶಾಸಕರು, ಎಸ್ಪಿ ಹಾಗೂ ಬ್ಯಾಂಕ್ ಅಧಿಕಾರಿಗಳು ವಿತರಣೆ ಮಾಡಿದರು.
ತಹಶೀಲ್ದಾರ್ ಎಂ.ಪಿ.ಕವಿರಾಜ, ಬ್ಯಾಂಕ್ ವ್ಯವಸ್ಥಾಪಕ ಸುನಿಲ್ಕುಮಾರ್ ಯಾದವ್, ಬ್ಯಾಂಕಿನ ವಲಯಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
