ಶಿವಮೊಗ್ಗ, ಡಿ:10 ಎಲ್ಲರನ್ನು ಸಮಾನವಾಗಿ ಕಾಣುವುದು ಕೂಡ ಮಾನವ ಹಕ್ಕಾಗಿದ್ದು, ನಮ್ಮ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಅರ್ಥ ಮಾಡಿಕೊಂಡು ಬೇರೆಯವರ ಮಾನವ ಹಕ್ಕುಗಳನ್ನೂ ಗೌರವಿಸಬೇಕೆಂದು ಜಿಲ್ಲಾ ಪಂಚಾಯತ್ ಸಿಇಓ ಹೇಮಂತ್ ಎನ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಮಾನವ ಹಕ್ಕುಗಳ ಆಯೋಗ, ಬೆಂಗಳೂರು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ), ಡಿವಿಎಸ್ ಪದವಿಪೂರ್ವ(ಸ್ವತಂತ್ರ) ಕಾಲೇಜು, ಶಿವಮೊಗ್ಗ ಇವರ ಸಹಯೋಗದಲ್ಲಿ ಬುಧವಾರ ಡಿವಿಎಸ್ ಪಿಯು ಸ್ವತಂತ್ರ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜೀವಿಸುವ ಹಕ್ಕು, ಉಚಿತ ಶಿಕ್ಷಣದ ಹಕ್ಕು. ದೌರ್ಜನ್ಯ ವಿರುದ್ದ ಹಕ್ಕು, ಆರೋಗ್ಯ ಹಕ್ಕು, ಸಮಾನತೆಯ ಹಕ್ಕು ಸೇರಿದಂತೆ ಮಾನವ ಹಕ್ಕುಗಳ ವ್ಯಾಪ್ತಿ ಬಹು ವಿಸ್ತಾರವಾಗಿದೆ. ಎಲ್ಲರೂ ತಮ್ಮ ಹಕ್ಕುಗಳ ಜೊತೆಗೆ ಕರ್ತವ್ಯಗಳ ಬಗ್ಗೆ ತಿಳಿದುಕೊಂಡು ಇತರರ ಹಕ್ಕುಗಳನ್ನು ಗೌರವಿಸಬೇಕು ಎಂದ ಅವರು ವಿದ್ಯಾರ್ಥಿಗಳು ತಮ್ಮ ತಮ್ಮ ಗುರಿ ಸಾಧನೆ ಮಾಡುವುದು ಕೂಡ ಒಂದು ಕರ್ತವ್ಯವಾಗಿದೆ ಎಂದರು.
ವಿದ್ಯಾರ್ಥಿಗಳಾದ ನೀವು ನಿಮ್ಮ ವ್ಯಾಪ್ತಿಯಲ್ಲಿ ಎಲ್ಲಿಯಾದರೂ ಬಾಲ್ಯ ವಿವಾಹದ ಕುರಿತು ವಿಷಯ ತಿಳಿದಲ್ಲಿ, ಬಾಲ್ಯ ವಿವಾಹವಾಗುತ್ತಿರುವುದು ಕಂಡು ಬಂದಲ್ಲಿ ಸಂಸ್ಥೆಯ ಶಿಕ್ಷಕರು, ಮುಖ್ಯಸ್ಥರು ಹಾಗೂ ಯಾವುದೇ ಅಧಿಕಾರಿಗಳಿಗೆ ತಿಳಿಸಬೇಕು ಎಂದರು.
ಗುರು ಹಿರಿಯರು, ತಂದೆ ತಾಯಿಯರೊಂದಿಗೆ ಗೌರವದಿಂದ ನಡೆದುಕೊಂಡು, ಉತ್ತಮ ಗುಣಗಳನ್ನು ಮೈಗೂಡಿಸಿಕೊಳ್ಳಬೆಕು. ದೊಡ್ಡ ಗುರಿಗಳನ್ನು ಹೊಂದಿ, ಸಾಧಿಸಿಯೇ ತೀರುತ್ತೇನೆಂದು ಪಣ ತೊಟ್ಟು ಈ ನಿಟ್ಟಿನಲ್ಲಿ ಸಾಗಿದರೆ ಶೇ.100 ರಷ್ಟು ಗುರಿಯನ್ನು ಸಾಧಿಸಬಹುದು. ಆ ಗುರಿ ಸಾಧನೆಗೆ ನಾವೇ ದಾರಿ ಕಂಡುಕೊಳ್ಳಬೇಕು. ಸಮಯಪಾಲನೆ, ಏಕಾಗ್ರತೆಯಿಂದ ಪಠ್ಯ ವಿಷಯಗಳನ್ನು ಕೇಳಿ, ಅಭ್ಯಾಸ ಮಾಡಬೇಕು. ಸಮಸ್ಯೆಗಳಿದ್ದರೆ ಶಿಕ್ಷಕರ ಗಮನಕ್ಕೆ ತರಬೇಕು ಎಂದು ಸಲಹೆ ನೀಡಿದರು.
