ಸಾಸ್ವೆಹಳ್ಳಿಯ ತುಂಗಭದ್ರಾ ನದಿಯ ಸುಂದರ ಪರಿಸರದಲ್ಲಿ ಕೋಟೆಯ ಆವರಣದಲ್ಲಿರುವ ಇತಿಹಾಸ ಪ್ರಸಿದ್ಧ ಪುಣ್ಯಕ್ಷೇತ್ರ ಕೋಟೆ ಶ್ರೀ ಆಂಜನೇಯ ಸ್ವಾಮಿಯ ಕಾರ್ತಿಕೋತ್ಸವವು ದಿನಾಂಕ 13-12-2025ನೇ ಶನಿವಾರ ನಡೆಯಲಿದೆ.
ಅಂದು ಸಂಜೆ ಪೂಜಾ ಕೈಂಕರ್ಯಗಳು ಗಂಗಾ ಪೂಜೆಯೊಂದಿಗೆ ಆರಂಭವಾಗುತ್ತವೆ. ನಂತರ ಅಗಸೆ ಪೂಜೆ ಮುಗಿಸಿ ಆಂಜನೇಯ ಸ್ವಾಮಿ, ನರಸಿಂಹ ಸ್ವಾಮಿ, ಹುಚ್ಚಯ್ಯನ ಸಮ್ಮುಖದಲ್ಲಿ ದಾಸರ ಬಳಗದೊಂದಿಗೆ ಊರ ಪ್ರಮುಖ ಬೀದಿಗಳಲ್ಲಿ ಹಲಗೆ, ಶಂಖ, ಜಾಗಟೆಗಳೊಂದಿಗೆ ಊರ ಪ್ರಮುಖ ಬೀದಿಗಳಲ್ಲಿ ವಾದ್ಯ ಮೇಳದೊಂದಿಗೆ ಮೆರವಣಿಗೆ ನಡೆಯಲಿದೆ. ಗ್ರಾಮದ ದೇವಾನುದೇವತೆಗಳಾದ ಕಲ್ಲೇಶ್ವರ, ಚೌಡಮ್ಮ, ಗಂಗಾಮಾತೆ, ಮಾತಂಗಮ್ಮ,ಲಕ್ಷ್ಮಮ್ಮ,ಲಕ್ಕಮ್ಮ, ವೀರಮಾತಂಗಮ್ಮ, ಆನೇಕಲ್ಲು ಚೌಡಮ್ಮ, ಕೋಟೆ ನಾಗಪ್ಪ ಹೀಗೆ ಎಲ್ಲಾ ದೇವಾನುದೇವತೆಗಳಿಗೆ ದೀಪ ಹಚ್ಚಿ ಪೂಜೆ ಸಲ್ಲಿಸಿ ದೇವಾಲಯದ ಆವರಣಕ್ಕೆ ಬಂದು ಆಂಜನೇಯನಿಗೆ ಮಹಾಮಂಗಳಾರತಿ, ನಂತರ ದೀಪ ಹಚ್ಚಿ ಕಾರ್ತಿಕೋತ್ಸವ ಆಚರಿಸಲಾಗುತ್ತದೆ. ನಂತರ ಮಹಾಪ್ರಸಾದ ಇರುತ್ತದೆ.
ಈ ಕೋಟೆ ಆಂಜನೇಯ ಸ್ವಾಮಿಯ ರಥೋತ್ಸವವು ಪ್ರತಿ ವರ್ಷ ಹನುಮ ಜಯಂತಿ ದಿನ ನಡೆಯುತ್ತದೆ. ಮರುದಿನ ಮುಳ್ಳು ಗದ್ದುಗೆ ಉತ್ಸವ ಇರುತ್ತದೆ. ಐದು ದಿನ ನಡೆಯುವ ಈ ಜಾತ್ರಾ ಉತ್ಸವವು ಆಂಜನೇಯನಿಗೆ ಕಂಕಣಧಾರಣೆ, ರಥಕ್ಕೆ ಎಣ್ಣೆ, ಹುಚ್ಚಯ್ಯನ ಉತ್ಸವ, ರಥೋತ್ಸವ, ಮುಳ್ಳುಗದ್ದಿಗೆ ಉತ್ಸವ, ಓಕಳಿ ಇರುತ್ತದೆ. ರಥಕ್ಕೆ ವಿವಿಧ ಬಣ್ಣಗಳ ಧ್ವಜ ಕಟ್ಟಿ ಹೂವಿನಿಂದ ಹೂವಿನ ಮಾಲೆಗಳಿಂದ ಅಲಂಕರಿಸಿ ಸಂಜೆ 6 ಗಂಟೆಗೆ ಊರ ಪ್ರಮುಖ ಬೀದಿಗಳಲ್ಲಿ ಭಕ್ತರು ರಥವನ್ನು ಎಳೆಯುತ್ತಾರೆ. ಭಕ್ತರು ಗಾಲಿಗೆ ಕಾಯಿ ಒಡೆದರೆ, ಮಹಿಳೆಯರು, ಮಕ್ಕಳು ರಥಕ್ಕೆ ಬಾಳೆಹಣ್ಣು, ಮಂಡಕ್ಕಿ, ಮೆಣಸಿನಕಾಳು ಎಸೆಯುತ್ತಾ ತಮ್ಮ ಮನದ ಬೇಡಿಕೆಗಳನ್ನು ಆಂಜನೇಯನಿಗೆ ಸಲ್ಲಿಸುತ್ತಾರೆ.
ಮರುದಿನ ಸಹ್ಯಾದ್ರಿ ಬೆಟ್ಟಗಳ ಸಾಲಿನಿಂದ ಕವಳೆ ಮುಳ್ಳಿನ ಗಿಡಗಳನ್ನು ತಂದು ದೇವಾಲಯದ ಆವರಣದಲ್ಲಿ ಚೌಕಾಕಾರದಲ್ಲಿ ಹೊಂದಿಸಲಾಗುತ್ತದೆ. ಭೂತಗಣಸ್ಥರಿಂದ ಊರಿಗೆ ತೊಂದರೆ ಬಾದೆ ಬಾರದಿರಲಿ ಎಂದು ಹಾಲು, ಹಣ್ಣು, ಬೆಲ್ಲ, ಅನ್ನವನ್ನು ಸಂತೃಪ್ತಿಯಿಂದ ಇವುಗಳಿಗೆ ಭೋಜನಪಡಿಸಲಾಗುತ್ತದೆ. ನಂತರ ಮುಳ್ಳುಗದ್ದೆಗೆ ಪೂಜೆ ಸಲ್ಲಿಸಿದ ನಂತರ ಹರಕೆ ಹೊತ್ತ ಭಕ್ತರು, ನಾಗರೀಕರು, ಜಾತಿ,ಮತ,ಭೇದ ಎಣಿಸದೆ ವಯಸ್ಸಿನ ನಿರ್ಬಂಧವಿಲ್ಲದೆ ಎಲ್ಲರೂ ಮುಳ್ಳನ್ನು ತುಳಿಯುತ್ತಾರೆ.
ಬೇಡಿದ ಇಷ್ಟಾರ್ಥ ನೆರವೇರಿಸುವ, ಬೇಡಿದಾಗ ಹೂವಿನ ಪ್ರಸಾದ ನೀಡುವ, ಈ ಕೋಟೆ ಆಂಜನೇಯನಿಗೆ ಪ್ರತಿ ಶನಿವಾರ, ಪ್ರತಿ ಅಮವಾಸ್ಯೆ ಹಾಗೂ ವಿಶೇಷ ದಿನಗಳಲ್ಲಿ ಅಭಿಷೇಕ, ಕುಂಕುಮ ಪೂಜೆ, ಬೆಣ್ಣೆ ಪೂಜೆ, ಎಲೆ ಪೂಜೆಗಳು ಸರತಿಯಂತೆ ನಡೆಯುತ್ತಿರುತ್ತದೆ. ಈ ಸಂಕಷ್ಟಹರನಿಗೆ, ರಾಮ ಭಕ್ತನಿಗೆ, ಅಂಜನೀಸುತನಿಗೆ ಈ ಹಿಂದೆ ತುಂಗಭದ್ರ ನದಿಯಲ್ಲಿ ತೆಪ್ಪ ನಿರ್ಮಿಸಿ ಅದರಲ್ಲಿ ಕದಳಿ ಮಂಟಪ ನಿರ್ಮಿಸಿ, ಆಂಜನೇಯನ ಉತ್ಸವ ಮೂರ್ತಿಯನ್ನು ಇಟ್ಟು ತೆಪ್ಪೋತ್ಸವ ನಡೆಸಲಾಗುತ್ತಿತ್ತು. ಜೊತೆಗೆ ನದಿಯಲ್ಲಿ ಸಾವಿರಾರು ದೀಪಗಳನ್ನು ತೇಲಿ ಬಿಟ್ಟು ಸಿಡಿಮದ್ದಿನ (ಪಟಾಕಿ) ಉತ್ಸವ ಮಾಡುತ್ತಿದ್ದರು. ಈ ತೆಪ್ಪೋತ್ಸವ ಕಳೆದ 18 ವರ್ಷಗಳಿಂದ ನಿಂತಿದೆ. ಈಗ ದೇವಸ್ಥಾನ ಕಮಿಟಿ ಹಾಗೂ ಗ್ರಾಮಸ್ಥರು ಪುನಃ ಆರಂಭಿಸಬಹುದೇನೋ.!?
